ಸರ್ಫೇಸಿ ಕಾಯ್ದೆ ತಪ್ಪಿಸಲು ಒನ್ ಟೈಂ ಸೆಟಲ್ಮೆಂಟ್ ಅವಕಾಶ: ದಿನೇಶ್‌

| Published : Dec 22 2024, 01:31 AM IST

ಸರ್ಫೇಸಿ ಕಾಯ್ದೆ ತಪ್ಪಿಸಲು ಒನ್ ಟೈಂ ಸೆಟಲ್ಮೆಂಟ್ ಅವಕಾಶ: ದಿನೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಬ್ಯಾಂಕ್ ಸಾಲ ಸುಸ್ಥಿದಾರ ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತಮ್ಮ ಜಮೀನು ಹರಾಜು ಹಾಕುವ ಮೂಲಕ ಜೀವನವೇ ಅಸ್ಥಿರವಾಗುವ ಒತ್ತಡದಲ್ಲಿದ್ದವರಿಗೆ ಕೇಂದ್ರ ಸರ್ಕಾರ ದೊಡ್ಡದೊಂದು ರಿಲೀಫ್ ನೀಡಿದೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದ್ದಾರೆ.

- ಸಾಲ ಮರು ಪಾವತಿಗೆ ಕಾಲಾವಕಾಶ ನೀಡುವುದು, ಎನ್‌ಪಿ ಆದವರಿಗೂ ಸಾಲ ನೀಡಲು ಸೂತ್ರ ರೂಪಿಸಲು ತೀರ್ಮಾನ,

--

- 26 ಮತ್ತು 27 ರಂದು ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಕೆನರಾ ಬ್ಯಾಂಕ್‌ನ ರೀಜಿನಲ್ ಆಫೀಸಿನಲ್ಲಿ ಕೆನರಾ ಅದಾಲತ್

- ಅದಾಲತ್‌ನಲ್ಲಿ ಕಾಫಿ ಬೆಳೆಗಾರರ ಸಾಲದ ಸಮಸ್ಯೆ ಇತ್ಯರ್ಥಕ್ಕೆ ಅವಕಾಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬ್ಯಾಂಕ್ ಸಾಲ ಸುಸ್ಥಿದಾರ ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತಮ್ಮ ಜಮೀನು ಹರಾಜು ಹಾಕುವ ಮೂಲಕ ಜೀವನವೇ ಅಸ್ಥಿರವಾಗುವ ಒತ್ತಡದಲ್ಲಿದ್ದವರಿಗೆ ಕೇಂದ್ರ ಸರ್ಕಾರ ದೊಡ್ಡದೊಂದು ರಿಲೀಫ್ ನೀಡಿದೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಹೇಳಿದ್ದಾರೆ.

ಬಹು ವರ್ಷಗಳಿಂದ ಕಾಫಿ ಬೆಳೆಗಾರರನ್ನು ಕಾಡುತ್ತಿದ್ದ ಈ ಸಮಸ್ಯೆಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕೇಂದ್ರ ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಕಳೆದ ಒಂದು ವರ್ಷದ ಹಿಂದೆಯೇ ಮನವಿ ನೀಡಿ ಚರ್ಚಿಸಲಾಗಿತ್ತು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಡಿ. 17 ರಂದು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿಯವರ ನೇತೃತ್ವದಲ್ಲಿ ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಾ. ಮಂಜುನಾಥ್, ಕೋಲಾರ ಜಿಲ್ಲೆ ಸಂಸದ ಜೆಡಿಎಸ್‌ನ ಮಲ್ಲೇಶ್ ಬಾಬು, ಕರ್ನಾಟಕ ಗ್ರೋವರ್ ಫೆಡರೇಷನ್ ಅಧ್ಯಕ ಡಾ.ಎಚ್.ಟಿ ಮೋಹನ್ ಕುಮಾರ್ ಮತ್ತು ಆಲ್ ಇಂಡಿಯಾ ಕ್ಯೂರಿಂಗ್ ಅಸೋಸಿಯೇಷನ್ ಅಧ್ಯಕ್ಷ ಎ.ಎನ್. ದೇವರಾಜ್ ತಂಡ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಕಾಫಿ ಬೆಳೆಗಾರರ ಬಹು ವರ್ಷಗಳ ಸಮಸ್ಯೆಯಾದ ಸರ್ಫೇಸಿ ಕಾಯ್ದೆ ಮತ್ತು ವಿವಿಧ ಸಮಸ್ಯೆಗಳ ಕುರಿತು ಚರ್ಚೆ ನಡೆಸಲಾಯಿತು ಎಂದರು.

ಸಚಿವರು, ಸಂಬಂಧಪಟ್ಟ ಇಲಾಖೆಯೊಂದಿಗೆ ಮತ್ತು ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಈಗಿರುವ ಸಮಸ್ಯೆಗೆ ಸೂಕ್ತ ರೀತಿಯ ಪರಿಹಾರ ಕಂಡುಕೊಳ್ಳಲು ಸೂಚಿಸುವ ಮೂಲಕ ನಮ್ಮ ಬೇಡಿಕೆಗೆ ಗೌರವ ನೀಡಿದರು. ಕೇಂದ್ರ ಹಣಕಾಸು ಸಚಿವರ ನಿರ್ದೇಶನದ ಮೇರೆಗೆ, ಹಣಕಾಸು ಇಲಾಖೆ ಕಾರ್ಯದರ್ಶಿ ನಾಗರಾಜ್ ಅವರು ಕೆನರಾ ಬ್ಯಾಂಕ್ ಎಂಡಿ ಸತ್ಯನಾರಾಯಣ ರಾಜು ಅವರನ್ನು ಸಂಪರ್ಕಿಸಿದ ಹಿನ್ನಲೆಯಲ್ಲಿ ಶುಕ್ರವಾರ ಅವರನ್ನು ಭೇಟಿ ಮಾಡಿ ಸೂಕ್ತ ರೀತಿಯಲ್ಲಿ ಫಾರ್ಮುಲ ತಯಾರಿಸಿ ಸಾಲವನ್ನು ಒನ್ ಟೈಮ್ ಸೆಟಲ್ಮೆಂಟ್‌ಗೆ ಕೂಡಲೇ ಸಾಲದ ಶೇ. 5 ರಷ್ಟನ್ನು ಪಾವತಿಸುವುದು. ಸಾಲದ ಉಳಿದ ಮೊತ್ತವನ್ನು ಪಾವತಿಸಲು 6 ತಿಂಗಳ ಕಾಲಾವಕಾಶ ನೀಡಬೇಕು ಮತ್ತು ಎನ್‌ಪಿ ಆದವರಿಗೆ ಸರಳ ಬಡ್ಡಿ ದರದಲ್ಲಿ ಸಾಲದ ಮೊತ್ತ ನಿಗದಿಪಡಿಸುವ ಮತ್ತು ಮುಂದಿನ ದಿನಗಳಲ್ಲಿ ಎನ್‌ಪಿ ಆದವರಿಗೂ ಸಾಲ ನೀಡುವ ಸೂತ್ರದ ಅಳವಡಿಕೆಗೆ ಒಪ್ಪಿಕೊಳ್ಳಲಾಯಿತು ಎಂದರು.ಸೂತ್ರ ರೂಪಿಸಲು ಡಿ. 26 ಮತ್ತು 27 ರಂದು ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಯ ಕೆನರಾ ಬ್ಯಾಂಕ್‌ನ ರೀಜಿನಲ್ ಆಫೀಸಿನಲ್ಲಿ ಕೆನರಾ ಅದಾಲತ್ ಏರ್ಪಡಿಸಲಿದ್ದು, ಅಂದು ಎಲ್ಲಾ ಕಾಫಿ ಬೆಳೆಗಾರರು ಕೆನರಾ ಅದಾಲತ್‌ನಲ್ಲಿ ಭಾಗವಹಿಸಿ ಇರುವ ಸಾಲದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

-- ಬಾಕ್ಸ್--

ನಾಳೆ ಬೆಳೆಗಾರರ ಸಮಾವೇಶ

ಕರ್ನಾಟಕ ಗ್ರೋವರ್ಸ್ ಫೆಡರೇಷನ್ ಸಕಲೇಶಪುರದ ಎಪಿಎಂಸಿ ಆವರಣದಲ್ಲಿ ಡಿ. 23 ರಂದು ಹಮ್ಮಿಕೊಂಡಿರುವ ಬೆಳೆಗಾರರ ಸಮಾವೇಶದಲ್ಲಿ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಸಚಿವರಾದ ಪಿಯೂಷ್ ಗೋಯಲ್ ಮತ್ತು ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಭಾಗವಹಿದುವರು. ಈ ಸಂದರ್ಭದಲ್ಲಿ ಕಾಫಿ ಉದ್ಯಮದ ವಿವಿಧ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಕಾಫಿ ಬೆಳೆಗಾರರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.ಪೋಟೋ ಫೈಲ್‌ ನೇಮ್‌ 21 ಕೆಸಿಕೆಎಂ 3