ಮುಂಜಾನೆಯೇ ಆರಂಭವಾದ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.
ಬಳ್ಳಾರಿ: ಸರ್ಕಾರಿ ಆಸ್ತಿಗಳ ಸಂರಕ್ಷಣೆ ಹಾಗೂ ಸಾರ್ವಜನಿಕ ಜಮೀನುಗಳ ಒತ್ತುವರಿ ತೆರವಿಗೆ ಮುಂದಾಗಿರುವ ಬಳ್ಳಾರಿ ಜಿಲ್ಲಾಡಳಿತ, ಸೋಮವಾರ ಬೆಳ್ಳಂಬೆಳಗ್ಗೆ ಜೆಸಿಬಿ ಯಂತ್ರಗಳೊಂದಿಗೆ ಕಾರ್ಯಾಚರಣೆ ನಡೆಸಿ ನಗರದ ಗೌತಮ್ ನಗರ ಬಡಾವಣೆಯಲ್ಲಿ ಸುಮಾರು 4 ಎಕರೆ ಸರ್ಕಾರಿ ಜಮೀನನ್ನು ವಶಕ್ಕೆ ಪಡೆದಿದೆ. ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ ತೆರವುಗೊಳಿಸುವುದರ ಜತೆಗೆ ಸಮಾಜಮುಖಿ ಉದ್ದೇಶಕ್ಕಾಗಿ ಮಂಜೂರು ಮಾಡಿದ್ದ ಜಮೀನಿನ ಮಂಜೂರಾತಿ ರದ್ದುಪಡಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.ನಗರದ ಗೌತಮ್ ನಗರ ಬಡಾವಣೆಯ ಸರ್ವೇ ನಂ.607/1ಎ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಈ ಕಾರ್ಯಾಚರಣೆ ನಡೆಸಿದೆ. ಈ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಸುಮಾರು 1 ಎಕರೆ 23 ಸೆಂಟ್ಸ್ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ದೊಡ್ಡದಾದ ಕಾಂಪೌಂಡ್ ನಿರ್ಮಿಸಲಾಗಿತ್ತು. ಅಷ್ಟೇ ಅಲ್ಲದೆ ಸಾರ್ವಜನಿಕರ ಸಂಚಾರಕ್ಕೆ ಮೀಸಲಾಗಿದ್ದ ರಸ್ತೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ.
ಸೋಮವಾರ ಬೆಳಗ್ಗೆ ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳು, ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕಾಂಪೌಂಡ್ ಗೋಡೆ ತೆರವುಗೊಳಿಸಿದರು. ಈ ಮೂಲಕ ಸಾರ್ವಜನಿಕ ರಸ್ತೆ ಹಾಗೂ ಸರ್ಕಾರಿ ಜಮೀನನ್ನು ಒತ್ತುವರಿಯಿಂದ ಮುಕ್ತಗೊಳಿಸಿ ಜಿಲ್ಲಾಡಳಿತದ ವಶಕ್ಕೆ ಪಡೆದುಕೊಂಡರು. ಮುಂಜಾನೆಯೇ ಆರಂಭವಾದ ಕಾರ್ಯಾಚರಣೆಯಲ್ಲಿ ಕಂದಾಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.14 ವರ್ಷಗಳ ಹಿಂದಿನ ಜಮೀನು ಮಂಜೂರಾತಿ ರದ್ದು: ಇದೇ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಸುಮಾರು 14 ವರ್ಷಗಳ ಹಿಂದೆ ಹಿಂದುಳಿದ ಹಾಗೂ ಬೌದ್ಧಿಕ ವಿಕಲಚೇತನ ಮಕ್ಕಳ ಕಲ್ಯಾಣಕ್ಕಾಗಿ ಆರೋಗ್ಯ ನಿಕೇತನ ಟ್ರಸ್ಟ್ಗೆ 2 ಎಕರೆ 77 ಸೆಂಟ್ಸ್ ಸರ್ಕಾರಿ ಜಮೀನನ್ನು ಮಂಜೂರು ಮಾಡಲಾಗಿತ್ತು. ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಸಮಾಜಮುಖಿ ಚಟುವಟಿಕೆ ನಡೆಸುವ ಉದ್ದೇಶದಿಂದ ಈ ಜಮೀನು ನೀಡಲಾಗಿತ್ತು. ಆದರೆ, ಸರ್ಕಾರದ ನಿಯಮಗಳ ಪ್ರಕಾರ ಮಂಜೂರಾದ ಜಮೀನನ್ನು ಎರಡು ವರ್ಷಗಳೊಳಗೆ ನಿಗದಿತ ಉದ್ದೇಶಕ್ಕೆ ಬಳಸಿಕೊಳ್ಳಬೇಕಿತ್ತು. ಜಮೀನು ಮಂಜೂರಾಗಿ ಸುಮಾರು 14 ವರ್ಷಗಳು ಕಳೆದಿದ್ದರೂ ನಿಗದಿತ ಅವಧಿಯಲ್ಲಿ ಉದ್ದೇಶಿತ ಕಾರ್ಯ ಆರಂಭಿಸದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಸರ್ಕಾರಿ ಜಮೀನು ಮಂಜೂರಾತಿಯ ಷರತ್ತು ಪಾಲಿಸದ ಹಿನ್ನೆಲೆ ಸಂಬಂಧಪಟ್ಟ ದಾಖಲೆ ಪರಿಶೀಲಿಸಿ ಎಲ್ಲ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ಮಂಜೂರಾತಿ ರದ್ದುಪಡಿಸಲಾಗಿದೆ. ಇದೀಗ 2 ಎಕರೆ 77 ಸೆಂಟ್ಸ್ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ಒಂದೇ ಸರ್ವೇ ನಂಬರ್ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಹಾಗೂ ಉದ್ದೇಶಿತ ಕಾರ್ಯಕ್ಕೆ ಬಳಕೆಯಾಗದೆ ಉಳಿದಿದ್ದ ಒಟ್ಟಾರೆ ಸುಮಾರು 4 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಆಸ್ತಿಗಳ ರಕ್ಷಣೆಗೆ ಜಿಲ್ಲಾಡಳಿತ ಕೈಗೊಂಡಿರುವ 17ನೇ ಕಾರ್ಯಾಚರಣೆ ಇದಾಗಿದೆ.
ಟಾಸ್ಕ್ಫೋರ್ಸ್ನಿಂದ 150 ಎಕರೆ ಜಮೀನು ವಶ: ಬಳ್ಳಾರಿ ಜಿಲ್ಲೆಯಲ್ಲಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕ ಆಸ್ತಿ ಸಂರಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಗಮನ ಹರಿಸಿದೆ. ಈ ಉದ್ದೇಶಕ್ಕಾಗಿ ಜಿಲ್ಲೆಯಲ್ಲಿ ಟಾಸ್ಕ್ಫೋರ್ಸ್ ರಚಿಸಲಾಗಿದ್ದು, ಅದರ ಮೂಲಕ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.ಟಾಸ್ಕ್ಫೋರ್ಸ್ ರಚನೆಯಾದ ಬಳಿಕ ಇದುವರೆಗೆ ಜಿಲ್ಲೆಯಲ್ಲಿ 150 ಎಕರೆಗೂ ಅಧಿಕ ಸರ್ಕಾರಿ ಜಮೀನನ್ನು ಒತ್ತುವರಿದಾರರಿಂದ ಮುಕ್ತಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ತಿಳಿಸಿದರು. ಸರ್ಕಾರಿ ಜಮೀನುಗಳು ಸಾರ್ವಜನಿಕ ಆಸ್ತಿಯಾಗಿದ್ದು, ಅವುಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು ಅಥವಾ ಮಂಜೂರಾದ ಜಮೀನನ್ನು ನಿಗದಿತ ಉದ್ದೇಶಕ್ಕೆ ಬಳಸದೆ ಇರುವುದು ಗಂಭೀರ ವಿಚಾರವಾಗಿದೆ. ಇಂತಹ ಪ್ರಕರಣ ಗುರುತಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂಬ ಸಂದೇಶ ಜಿಲ್ಲಾಡಳಿತದ ಈ ಕ್ರಮ ರವಾನಿಸಿದೆ. ಕಾರ್ಯಾಚರಣೆಯಲ್ಲಿ ಟಾಸ್ಕ್ಫೋರ್ಸ್ನ ಸದಸ್ಯರೂ ಆಗಿರುವ ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ., ಬಳ್ಳಾರಿ ತಹಶೀಲ್ದಾರ್ ನರಸಪ್ಪ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು. ಪ್ರಭಾವಿಗಳ ಬೆಂಬಲದಿಂದ ನೂರಾರು ಕೋಟಿ ಮೌಲ್ಯದ ಸರ್ಕಾರಿ ಜಾಗ ಅತಿಕ್ರಮಿಸಿದ್ದ ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಂಡಿರುವ ಜಿಲ್ಲಾಡಳಿತ ನಡೆಯ ಬಗ್ಗೆ ಜಿಲ್ಲಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.
ಇಲ್ಲಿನ ಗೌತಮ್ ನಗರದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಮುಗಿಯುತ್ತಿದ್ದಂತೆ ಕಟ್ಟಡಗಳ ಅವಶೇಷಗಳಲ್ಲಿದ್ದ ಕಬ್ಬಿಣದ ವಸ್ತು ಹೊತ್ತೊಯ್ಯಲು ಜನರು ಮುಗಿಬಿದ್ದ ಪ್ರಸಂಗ ನಡೆದಿದೆ. ಒತ್ತುವರಿ ತೆರವುಗೊಳಿಸಿದ ಸ್ಥಳಗಳಲ್ಲಿ ಕಾಂಪೌಂಡ್ ವಾಲ್ಗಳಿಗೆ ಅಳವಡಿಸಲಾಗಿದ್ದ ಕಬ್ಬಿಣದ ಗ್ರಿಲ್ಗಳು, ರಾಡ್ಗಳು ಸೇರಿದಂತೆ ವಿವಿಧ ಕಬ್ಬಿಣದ ವಸ್ತು ಕೆಲವರು ಹೊತ್ತೊಯ್ದರು. ತೆರವು ಕಾರ್ಯಾಚರಣೆಯ ವೇಳೆ ಕಟ್ಟಡಗಳ ಅವಶೇಷಗಳಡಿ ಬಿದ್ದಿದ್ದ ಕಬ್ಬಿಣದ ವಸ್ತುಗಳನ್ನೂ ಬಿಡದೆ ಸಂಗ್ರಹಿಸಿದರು. ತೆರವು ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ಸ್ಥಳಕ್ಕೆ ಧಾವಿಸಿದ ಕೆಲವರು ಕೈಗೆ ಸಿಕ್ಕ ಕಬ್ಬಿಣದ ವಸ್ತು ಸಂಗ್ರಹಿಸುವುದರಲ್ಲಿ ನಿರತರಾದರು. ತಮ್ಮ ಮನೆ ಬಳಕೆಗೆ ಉಪಯೋಗಿಸಿಕೊಳ್ಳುವ ಉದ್ದೇಶದಿಂದ ಕೆಲವರು ವಸ್ತುಗಳನ್ನು ತೆಗೆದುಕೊಂಡರೆ ಇನ್ನು ಕೆಲವರು ಗುಜರಿಗೆ ಹಾಕಿದರೆ ಒಂದಷ್ಟು ಹಣ ಸಿಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಹೊತ್ತೊಯ್ದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ಕಬ್ಬಿಣದ ವಸ್ತು ತೆಗೆದುಕೊಂಡು ಹೋಗದಂತೆ ಎಚ್ಚರಿಕೆ ನೀಡಿದರೂ ಜನರು ಕಿವಿಗೊಡಲಿಲ್ಲ.