ಕೊಟ್ಟೂರು ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ

| Published : Sep 24 2025, 01:01 AM IST

ಸಾರಾಂಶ

ಅಲಬೂರು ಗ್ರಾಮದ ರೈತ ಈರುಳ್ಳಿ ಬೆಳೆದು ಇದೀಗ ಸಾಲಗಾರನಾಗುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಟ್ಟೂರು: ತಾಲೂಕಿನ ಅಲಬೂರು ಗ್ರಾಮದ ರೈತ ಈರುಳ್ಳಿ ಬೆಳೆದು ಇದೀಗ ಸಾಲಗಾರನಾಗುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ರೈತನಿಗೆ ಈರುಳ್ಳಿ ಕಣ್ಣೀರು ತರಿಸಿದೆ.

ಅಲಬೂರು ಗ್ರಾಮದ ರೈತ ಕೊಚಾಲಿ ಮಂಜುನಾಥ ತನ್ನ ಗ್ರಾಮದ 9 ಎಕರೆ ಹೊಲದಲ್ಲಿ ಹತ್ತಾರು ಲಕ್ಷ ರುಪಾಯಿ ವ್ಯಯಿಸಿ ಈರುಳ್ಳಿ ಬೆಳೆ ಬೆಳೆದಿದ್ದ. ಇನ್ನೇನು ಕಟಾವು ಮಾಡಿ ಈರುಳ್ಳಿ ಮಾರಾಟ ಮಾಡಲು ಮುಂದಾಗುತ್ತಿದ್ದಂತೆ ಬೆಲೆ ಪಾತಾಳಕ್ಕೆ ಇಳಿದಿದೆ.

ಈರುಳ್ಳಿ ಮಾರಾಟ ಮಾಡಲು ಹೊರಟರೆ ಪ್ರತಿ ಚೀಲಕ್ಕೆ ದಲ್ಲಾಳಿಗಳು ₹50 ದರ ಹೇಳುತ್ತಿದ್ದಾರೆ. ರೈತನಿಗೆ ಯಾವುದೇ ಬಗೆಯ ಬೆಂಬಲ ಬೆಲೆ ಇಲ್ಲದಿರುವುದು ರೈತ ಕೊಚಾಲಿ ಮಂಜುನಾಥನನ್ನು ಕಂಗೆಡಿಸಿದೆ. ಇದರ ಜೊತೆಗೆ ಇದುವರೆಗೂ ತಾಲೂಕಿನಲ್ಲಿ ಖರೀದಿ ಕೇಂದ್ರ ಇಲ್ಲದಿರುವುದು ರೈತನ ದಿಕ್ಕು ತಪ್ಪಿಸುವಂತಾಗಿದೆ. ಇದರಿಂದ ರೈತ ಬೀದಿಗೆ ಬೀಳುವಂತಾಗಿದೆ.

ಕೊಟ್ಟೂರು ತಾಲೂಕು ಸೇರಿದಂತೆ ಜಿಲ್ಲೆಯ 15 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆದಿದ್ದಾರೆ. ಇವರಿಗೆ ಬೆಂಬಲ ಬೆಲೆಯ ಪ್ರೋತ್ಸಾಹವಾಗಲಿ ಇಲ್ಲವೇ ಖರೀದಿ ಕೇಂದ್ರಗಳು ಇಲ್ಲದೇ ಇರುವುದು ಅನ್ನದಾತ ರೈತರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ.

ಈರುಳ್ಳಿ ಬೆಳೆಗೆ ಈ ಹಿಂದೆ ಕುಮಾರಸ್ವಾಮಿ ಸರ್ಕಾರ ಖರೀದಿ ಕೇಂದ್ರವನ್ನು ಅಲ್ಲಲ್ಲಿ ಸ್ಥಾಪಿಸುವ ಮೂಲಕ ಮತ್ತು ನಂತರ ಬಂದ ಸದಾನಂದ ಗೌಡ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸಹ ಖರೀದಿ ಕೇಂದ್ರದ ಸ್ಥಾಪನೆಯಾಗಿದ್ದವು. ಈಗೀನ ಸಿದ್ದರಾಮಯ್ಯ ಸರ್ಕಾರ ಸಹ ಈ ಬಗ್ಗೆ ಗಮನ ಹರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಖರೀದಿ ಕೇಂದ್ರ ಸ್ಥಾಪಿಸುವ ಮೂಲಕ ಈರುಳ್ಳಿ ಬೆಳೆಗಾರರ ರಕ್ಷಣೆಗೆ ಮುಂದಾಗಬೇಕು ಎನ್ನುವುದು ರೈತರ ಒತ್ತಾಯವಾಗಿದೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಗಮನ ಹರಿಸಿ ನೊಂದ ಈರುಳ್ಳಿ ಬೆಳೆಗಾರರ ಸಹಾಯಕ್ಕೆ ಬಾರದಿದ್ದರೆ ಇವರೆಲ್ಲ ಆತ್ಮಹತ್ಯೆಯಂತಹ ಕೃತ್ಯಕ್ಕೆ ಮುಂದಾಗಲು ಪ್ರಚೋದನೆ ನೀಡದಂತಾಗುತ್ತದೆ ಎನ್ನುತ್ತಾರೆ ರಾಜ್ಯ ಈರುಳ್ಳಿ ಬೆಳೆಗಾರರ ಅಧ್ಯಕ್ಷ ಎಂ.ಸಿದ್ದೇಶ್.

ಈಗಾಗಲೇ ₹10 ಲಕ್ಷವನ್ನು ನಾನಾ ಮೂಲಗಳಿಂದ ಸಂಗ್ರಹಿಸಿ ನನ್ನ ಹೊಲದಲ್ಲಿ ಈರುಳ್ಳಿ ಬೆಳೆದಿದ್ದೆ. ಉತ್ತಮ ಬೆಲೆ ನಿರೀಕ್ಷಿಸಿದ್ದೆ. ಆದರೆ ಇದೀಗ ದರ ಕುಸಿದಿದೆ. ಈ ಬೆಲೆಗೆ ನಾವು ಬೆಳೆ ಮಾರಿದರೆ ಬೆಳೆಗೆ ಹಾಕಿದ ಅರ್ಧ ದುಡ್ಡಾದರೂ ನಮ್ಮ ಕೈಗೆ ಸೇರುತ್ತಿಲ್ಲ. ಬೀದಿಗೆ ಬೀಳುವ ಮುನ್ನ ಸರ್ಕಾರ ಗಮನ ಹರಿಸಿ ನಮ್ಮ ರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ ಅಲಬೂರು ರೈತ ಕೊಚಾಲಿ ಮಂಜುನಾಥ.