ಈರುಳ್ಳಿ ಬೆಳೆಗಾರರ ಸಮಸ್ಯೆ ಪರಿಹರಿಸುವ ಕಾರ್ಯವಾಗಲಿ: ಈರುಳ್ಳಿ ಬೆಳೆಗಾರರು,

| Published : Aug 05 2024, 12:34 AM IST

ಈರುಳ್ಳಿ ಬೆಳೆಗಾರರ ಸಮಸ್ಯೆ ಪರಿಹರಿಸುವ ಕಾರ್ಯವಾಗಲಿ: ಈರುಳ್ಳಿ ಬೆಳೆಗಾರರು,
Share this Article
  • FB
  • TW
  • Linkdin
  • Email

ಸಾರಾಂಶ

ಈರುಳ್ಳಿ ಬೆಳೆಗಾರರ ಹಾಗೂ ವ್ಯಾಪಾರಿಗಳ ಸಭೆಯಲ್ಲಿ ಕೇಂದ್ರ ಅಧ್ಯಯನ ತಂಡದ ಎದುರು ಈರುಳ್ಳಿ ಬೆಳೆಗಾರರು ಸಮಸ್ಯೆಗಳ ಸರಮಾಲೆ ತೆರೆದಿಟ್ಟರು.

ಹುಬ್ಬಳ್ಳಿ: ಈರಳ್ಳಿ ದರ ಸ್ಥಿರಗೊಳಿಸುವುದು, ಬೆಳೆ ಮೇಲೆ ಹಾಕಿರುವ ರಫ್ತು ಮೇಲಿನ ನಿರ್ಬಂಧ ತೆರವುಗೊಳಿಸುವುದು, ಈರುಳ್ಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದು, ರೈತರು, ವ್ಯಾಪಾರಿಗಳು, ಮಾರಾಟಗಾರರಿಗೆ ಯಾವುದೇ ರೀತಿ ಆರ್ಥಿಕ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈರುಳ್ಳಿ ಬೆಳೆಗಾರರು ಹಾಗೂ ವ್ಯಾಪಾರಿಗಳು ಕೇಂದ್ರ ಅಧ್ಯಯನ ತಂಡಕ್ಕೆ ಸಲ್ಲಿಸಿದರು.

ನಗರದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಚೇರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈರುಳ್ಳಿ ಬೆಳೆಗಾರರ ಹಾಗೂ ವ್ಯಾಪಾರಿಗಳ ಸಭೆಯಲ್ಲಿ ಕೇಂದ್ರ ಅಧ್ಯಯನ ತಂಡದ ಎದುರು ಸಮಸ್ಯೆಗಳ ಸರಮಾಲೆ ತೆರೆದಿಟ್ಟರು.

ಈ ವೇಳೆ ಎಪಿಎಂಸಿ ಈರುಳ್ಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ ಮಾತನಾಡಿ, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬಂದ ವೇಳೆ ರಪ್ತು ಮಾಡುವ ಉದ್ದೇಶದಿಂದ ವ್ಯಾಪಾರಿಗಳು ಈರುಳ್ಳಿ ಖರೀದಿಸಿದ ವೇಳೆ ರಾತ್ರೋರಾತ್ರಿ ರಫ್ತಿಗೆ ನಿರ್ಬಂಧ ಹೇರಲಾಗುತ್ತಿದೆ. ಸರ್ಕಾರದ ಈ ನಿರ್ಧಾರದಿಂದ ವ್ಯಾಪಾರಿಗಳಿಗೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ. ಗದಗನಲ್ಲಿ ಈ ರೀತಿಯ ಆದೇಶಗಳಿಂದಾಗಿ ಸಂಕಷ್ಟ ಅನುಭವಿಸಿದ ಶೇ. 50ರಷ್ಟು ವ್ಯಾಪಾರಿಗಳು ಈರುಳ್ಳಿ ವ್ಯಾಪಾರವನ್ನೇ ತೊರೆದಿದ್ದಾರೆ. ಇಂತಹ ಆದೇಶಗಳಿಂದ ರೈತರ ಮೇಲೂ ಪರಿಣಾಮ ಬೀರುತ್ತಿದೆ. ರಫ್ತು ನಿಷೇಧದ ಕುರಿತಾಗಿ ವ್ಯಾಪಾರರಿಗೆ ಒಂದು ವಾರದ ಮೊದಲು ಮಾಹಿತಿ ನೀಡಬೇಕು ಎಂದು ಮನವಿ ಮಾಡಿದರು.

ದೇಶದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬೆಳೆಯುವ ಈರುಳ್ಳಿಗೆ ವಿದೇಶದಲ್ಲಿ ಭಾರಿ ಬೇಡಿಕೆ ಇದೆ. ಬಾಂಗ್ಲಾದೇಶ, ಗಲ್ಫ್‌ ದೇಶಗಳು, ಶ್ರೀಲಂಕಾ ಸೇರಿದಂತೆ ವಿವಿಧೆಡೆ ರಫ್ತು ಮಾಡಲಾಗುತ್ತಿತ್ತು. ರಫ್ತು ಶುಲ್ಕ ಹೆಚ್ಚು ಪಾವತಿಸಿದರೂ, ವ್ಯಾಪಾರ ಚೆನ್ನಾಗಿತ್ತು. ಇನ್ನಾದರೂ ರಫ್ತಿನ ಮೇಲಿನ ನಿರ್ಬಂಧ ತೆಗೆಯಬೇಕು. ಇಲ್ಲವಾದರೆ ರೈತರು ಈರುಳ್ಳಿ ಬೆಳೆಯುವುದನ್ನೇ ಸ್ಥಗಿತಗೊಳಿಸುತ್ತಾರೆ. ಆಗ, ವಿದೇಶದಿಂದ ದೇಶಕ್ಕೆ ಎಷ್ಟೇ ಈರುಳ್ಳಿ ಆಮದು ಮಾಡಿಕೊಂಡರೂ ಸಾಲುವುದಿಲ್ಲ ಎಂದರು.

ಶಿರಗುಪ್ಪಿಯ ಈರುಳ್ಳಿ ಬೆಳೆಗಾರ ಪ್ರಕಾಶ ಮಾತನಾಡಿ, ಈರುಳ್ಳಿ ಬೆಳೆಯಲು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ. ಆದರೆ, ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಬೆಳೆ ಹಾಳಾಗಿ, ಮಾಡಿರುವ ಖರ್ಚು ಮರಳಿ ಬಾರದಂತಾಗುತ್ತಿದೆ. ಇದರಿಂದಾಗಿ ಹಲವು ರೈತರು ಕೈಸುಟ್ಟುಕೊಂಡು, ಈರುಳ್ಳಿ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಸರ್ಕಾರ ಈರುಳ್ಳಿ ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಕಾರ್ಯಕ್ಕೆ ಆದ್ಯತೆ ನೀಡಲಿ ಎಂದು ಸಲಹೆ ನೀಡಿದರು.

ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯುವುದರಿಂದ, ಕಟಾವು ಮಾಡಿದ ನಂತರ ಹೆಚ್ಚು ಸಮಯ ಸಂಗ್ರಹಿಸಿಡಲಾಗದು. ದರ ಏರಿಳಿತವಾಗುತ್ತಲೇ ಇರುತ್ತದೆ. ಕನಿಷ್ಠ ಮೂರು ತಿಂಗಳವರೆಗಾದರೂ ದರ ಸ್ಥಿರತೆ ಕಾಯ್ದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎಂದರು.

ಈ ವೇಳೆ ಕೇಂದ್ರ ಅಧ್ಯಯನ ತಂಡದ, ಕೃಷಿ ಹಾಗೂ ರೈತರ ಕಲ್ಯಾಣ ಇಲಾಖೆಯ ಉನ್ನತಾಧಿಕಾರಿ ಮನೋಜ್‌ ಕೆ., ಪಂಕಜ ಕುಮಾರ, ಮುಖೇಶ ಕುಮಾರ ಮಾತನಾಡಿ, ಈರುಳ್ಳಿ ಬೆಳೆಗಾರರು, ವ್ಯಾಪಾರಿಗಳು ನೀಡಿದ ಸಲಹೆ ಸೂಚನೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ನಿಮ್ಮೆಲ್ಲ ಬೇಡಿಕೆ, ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಲಾಗುವುದು ಎಂದರು.

ಈ ವೇಳೆ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣವರ, ಚನ್ನು ಹೊಸಮನಿ ಸೇರಿದಂತೆ ಹಲವರಿದ್ದರು.