ಒಂದು ಕಡೆ ಮಳೆ ಕೈಕೊಟ್ಟು ಬರಗಾಲದ ಹೊಡೆತಕ್ಕೆ ಸಿಲುಕಿದ ಕೃಷಿ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅಲ್ಪಸ್ವಲ್ಪ ನೀರಾವರಿ ಆಶ್ರಯದಿಂದ ಬೆಳೆ ಉಳಿಸಿಕೊಂಡ ರೈತರು. ಈಗ ಫಸಲು ಕಟಾವಿಗೆ ಬರುವ ಹೊತ್ತಿನಲ್ಲಿ ಹೊಲಗಳಿಗೆ ಕಳ್ಳರ ಕಾಟ ಶುರುವಾಗಿರುವುದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.

ಬರದ ನಡುವೆಯೂ ಬೆಳೆದ ಬೆಳೆ ಉಳಿಸಿಕೊಳ್ಳಲು ರೈತರ ರಾತ್ರಿ ಕಾವಲು, ಉತ್ತಮ ಬೆಲೆ; ಕಟಾವಿಗೆ ಬಂದ ಫಸಲಿನ ಮೇಲೆ ಕಣ್ಣು

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಒಂದು ಕಡೆ ಮಳೆ ಕೈಕೊಟ್ಟು ಬರಗಾಲದ ಹೊಡೆತಕ್ಕೆ ಸಿಲುಕಿದ ಕೃಷಿ, ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಲ್ಲಿ ಅಲ್ಪಸ್ವಲ್ಪ ನೀರಾವರಿ ಆಶ್ರಯದಿಂದ ಬೆಳೆ ಉಳಿಸಿಕೊಂಡ ರೈತರು. ಈಗ ಫಸಲು ಕಟಾವಿಗೆ ಬರುವ ಹೊತ್ತಿನಲ್ಲಿ ಹೊಲಗಳಿಗೆ ಕಳ್ಳರ ಕಾಟ ಶುರುವಾಗಿರುವುದು ಅನ್ನದಾತರ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಕೆಂಪು ಮೆಣಸಿನಕಾಯಿ ಮತ್ತು ಈರುಳ್ಳಿ ಈ ಬಾರಿ ತೀವ್ರ ಬರಗಾಲದಿಂದ ಬಹುತೇಕ ಹಾನಿಗೀಡಾಗಿವೆ. ಅಲ್ಪಸ್ವಲ್ಪ ಮಳೆ ಹಾಗೂ ಕೃಷಿ ಹೊಂಡ, ಕೊಳವೆಬಾವಿಗಳ ನೀರಿನ ಆಸರೆಯಲ್ಲಿ ಬೆಳೆ ಉಳಿಸಿಕೊಂಡಿರುವ ರೈತರು ಇದೀಗ ಮತ್ತೊಂದು ಸಂಕಷ್ಟ ಎದುರಿಸುವಂತಾಗಿದೆ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ಮತ್ತು ಈರುಳ್ಳಿಗೆ ಉತ್ತಮ ದರ ದೊರೆಯುತ್ತಿರುವ ಹಿನ್ನೆಲೆ ಹೊಲದಲ್ಲಿಯೇ ಕಟಾವಿಗೆ ಬಂದಿರುವ ಫಸಲನ್ನು ಕಳ್ಳರು ಕದ್ದೊಯ್ಯುತ್ತಿರುವ ದೂರುಗಳು ರೈತರನ್ನು ಕಂಗೆಡಿಸಿವೆ.

ಸಾಮಾನ್ಯವಾಗಿ ಬೆಳೆ ಕಟಾವಿಗೆ ಬಂದಾಗ ರೈತರು ಕುಟುಂಬ ಸಮೇತ ಹೊಲದಲ್ಲಿ ದುಡಿದು ಫಸಲು ಮನೆಗೆ ತರುವ ಸಿದ್ಧತೆಯಲ್ಲಿರುತ್ತಾರೆ. ಆದರೆ ಈಗ ರಾತ್ರಿ ವೇಳೆ ಹೊಲಕ್ಕೆ ನುಗ್ಗುವ ಕಳ್ಳರು ಮೆಣಸಿನಕಾಯಿ ಗಿಡಗಳನ್ನೇ ಹಾಳು ಮಾಡಿ ಕಾಯಿಗಳನ್ನು ಕಿತ್ತುಕೊಂಡು ಹೋಗುತ್ತಿರುವುದರಿಂದ ರೈತರು ಬೆಳೆದ ಬೆಳೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ.

ಬರಗಾಲದ ನಡುವೆಯೂ ಮೂರು ಎಕರೆ ಪ್ರದೇಶದಲ್ಲಿ ಕೆಂಪು ಮೆಣಸಿನಕಾಯಿ ಬೆಳೆದಿರುವ ರೈತ ಮಹಿಳೆ ಸುಮಿತ್ರಾ ಈರಪ್ಪ ಕರ್ಕಿಕಟ್ಟಿ ಅವರ ಹೊಲದಲ್ಲಿಯೂ ಕಳ್ಳರ ಹಾವಳಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ಹೊಲಕ್ಕೆ ನುಗ್ಗುವ ಕಳ್ಳರು ಮೆಣಸಿನಕಾಯಿಗಳನ್ನು ಕಿತ್ತುಕೊಂಡು ಹೋಗುವುದಲ್ಲದೆ, ಗಿಡಗಳ ಟೊಂಗೆಗಳನ್ನು ಮುರಿದು ಹಾಕುತ್ತಿದ್ದಾರೆ. ಇದರಿಂದ ಉಳಿದಿರುವ ಫಸಲಿನ ಜತೆಗೆ ಗಿಡಗಳಿಗೂ ಹಾನಿಯಾಗುತ್ತಿದೆ.

ಮಾರುಕಟ್ಟೆ ಬೆಲೆಯೇ ಕಳ್ಳರ ಕಣ್ಣಿಗೆ ಗುರಿ:

ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುತ್ತಿರುವುದರಿಂದ ಹೊಲದಲ್ಲಿರುವ ಫಸಲಿಗೂ ಬೇಡಿಕೆ ಹೆಚ್ಚಾಗಿದೆ. ಇದೇ ಕಳ್ಳರಿಗೆ ಆಕರ್ಷಣೆಯಾಗಿದ್ದು, ರೈತರ ಶ್ರಮದ ಫಲವನ್ನು ಕದಿಯುವ ಪ್ರಯತ್ನಗಳು ನಡೆಯುತ್ತಿವೆ. ದೊಡ್ಡ ಪ್ರಮಾಣದಲ್ಲಿ ಕೃಷಿ ಮಾಡುವ ರೈತರು ಟ್ರ್ಯಾಕ್ಟರ್ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ಬಳಸಿಕೊಂಡು ರಾತ್ರಿ ಹೊತ್ತು ಹೊಲದಲ್ಲಿ ಕಾವಲು ಕಾಯಲು ಸಾಧ್ಯವಿದೆ. ಆದರೆ ಸಣ್ಣ ಮತ್ತು ಮಧ್ಯಮ ರೈತರಿಗೆ ಕುಟುಂಬದ ಸದಸ್ಯರನ್ನೇ ನಂಬಿಕೊಂಡು ಕಾವಲು ಕಾಯಬೇಕಾದ ಅನಿವಾರ್ಯತೆ ಇದೆ.ಈ ಬಾರಿ ಮಳೆ ಸರಿಯಾಗಿ ಬರಲಿಲ್ಲ. ಆದರೂ ಕೃಷಿ ಹೊಂಡ ಮತ್ತು ಕೊಳವೆಬಾವಿ ನೀರಿನ ನೆರವಿನಿಂದ ಮೂರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದೇವೆ. ಬೆಳೆ ಉಳಿಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಈಗ ಫಸಲು ಕಟಾವಿಗೆ ಬರುವ ಸಮಯದಲ್ಲಿ ರಾತ್ರಿ ಹೊತ್ತು ಕಳ್ಳರು ಹೊಲಕ್ಕೆ ನುಗ್ಗಿ ಕಾಯಿಗಳನ್ನು ಕಿತ್ತುಕೊಂಡು ಹೋಗುತ್ತಿದ್ದಾರೆ. ಗಿಡಗಳ ಟೊಂಗೆಗಳನ್ನು ಮುರಿದು ಹಾಳು ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಚೆನ್ನಾಗಿದೆ ಎಂಬ ಕಾರಣಕ್ಕೆ ನಮ್ಮ ಬೆಳೆಗೂ ಕಳ್ಳರ ಕಣ್ಣು ಬಿದ್ದಿದೆ. ಬೆಳೆ ಉಳಿಸಿಕೊಳ್ಳುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದೇ ಈಗ ದೊಡ್ಡ ಕೆಲಸವಾಗಿದೆ.

ಸುಮಿತ್ರಾ ಈರಪ್ಪ ಕರ್ಕಿಕಟ್ಟಿ ಮೆಣಸಿನಕಾಯಿ ಬೆಳೆದಿರುವ ರೈತ ಮಹಿಳೆ

ಬರಗಾಲದಿಂದ ರೈತರು ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅಲ್ಪಸ್ವಲ್ಪ ನೀರಿನ ಆಸರೆಯಲ್ಲಿ ಬೆಳೆದಿರುವ ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಗಳೇ ರೈತರಿಗೆ ಕೊನೆಯ ಆಸರೆಯಾಗಿವೆ. ಈಗ ಕಟಾವಿಗೆ ಬಂದಿರುವ ಬೆಳೆಗಳನ್ನೂ ಕಳ್ಳರು ಕದ್ದೊಯ್ಯುತ್ತಿದ್ದರೆ ರೈತರು ಯಾರನ್ನು ನಂಬಬೇಕು? ಹಗಲು ಹೊಲದಲ್ಲಿ ದುಡಿದು ರಾತ್ರಿ ಇಡೀ ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆ ಹೊಲಗಳಲ್ಲಿ ನಡೆಯುತ್ತಿರುವ ಕಳ್ಳತನದ ಬಗ್ಗೆ ಗಂಭೀರವಾಗಿ ಗಮನಹರಿಸಿ, ರಾತ್ರಿ ಗಸ್ತು ಹೆಚ್ಚಿಸಬೇಕು. ರೈತರ ಬೆಳೆಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು.

ಮಲ್ಲಣ್ಣ ದಾದ್ಮಿ ರೈತ ಮುಖಂಡ