ಸಾರಾಂಶ
ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ದೊಡ್ಡ ಮಹಾನಗರ ಪ್ರದೇಶದ ಈರುಳ್ಳಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಈರುಳ್ಳಿ ಬೆಳೆಗೆ ಅಂಟಿದ ಮಂಗಮಾರಿ ಹಾಗೂ ಕೊಳೆ ರೋಗ ತಡೆಗಟ್ಟಲು ಸಾಧ್ಯವಾಗದೇ ಅವಧಿಗೂ ಮುನ್ನವೇ ಈರುಳ್ಳಿ ಕಟಾವಿಗೆ ರೈತರು ಮುಂದಾಗಿದ್ದಾರೆ. ಮಾರುಕಟ್ಟೆಯಲ್ಲಿ ನಿತ್ಯ ಈರುಳ್ಳಿ ಬೆಲೆ ಏರಿಳಿತದಿಂದ ಆತಂಕಗೊಂಡಿರುವ ರೈತರು, ಮಾರುಕಟ್ಟೆಯಲ್ಲಿ ಈರುಳ್ಳಿಗೆ ತುಸು ಬೆಲೆ ಹೆಚ್ಚು ಇರುವಾಗಲೇ ಕಟಾವು ಮಾಡಿ, ದೂರದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ದೊಡ್ಡ ಮಹಾನಗರ ಪ್ರದೇಶದ ಈರುಳ್ಳಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.ತಾಲೂಕಿನಲ್ಲಿ ಈ ಬಾರಿ 900 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಕಳೆದ 20 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿದೆ. ಇದರಿಂದಾಗಿ ಈರುಳ್ಳಿ ಬೆಳೆಯ ಬೇರುಗಳನ್ನು ತಿನ್ನುವ ಹುಳು ಕಾಟ ಹೆಚ್ಚಾಗಿದೆ. ಜತೆಗೆ ಕೊಳೆ ರೋಗವೂ ಕೆಲವೆಡೆ ಕಂಡು ಬಂದಿದೆ.
ಈರುಳ್ಳಿ ಬೆಳೆಯಲು ಎಕರೆಯೊಂದಕ್ಕೆ ರೈತರು ₹70ರಿಂದ ₹80 ಸಾವಿರ ವೆಚ್ಚ ಮಾಡಿದ್ದಾರೆ. ಮಾರುಕಟ್ಟೆಯಲ್ಲಿನ ಬೆಲೆ ಏರಿಳಿತದಿಂದ ಬೆಳೆಗಾರರಿಗೆ ಆತಂಕ ಎದುರಾಗಿದೆ. ರಾಜ್ಯದಲ್ಲಿ 30 ಲಕ್ಷ ರೈತರು ಈರುಳ್ಳಿ ಬೆಳೆಯುತ್ತಿದ್ದಾರೆ. ಈರುಳ್ಳಿ ಬೆಳೆಗೆ ಬರುವ ರೋಗ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಾಕಿದ ಬಂಡವಾಳವೂ ಬರುತ್ತಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಸೇರಿದಂತೆ ಇನ್ನಿತರ ಕಾರಣಗಳಿಗೆ ಲಕ್ಷಾಂತರ ರೈತರು ಈರುಳ್ಳಿ ಬೆಳೆಯಿಂದ ವಿಮುಖರಾಗುತ್ತಿದ್ದಾರೆ.ಕೇಂದ್ರ ಈರುಳ್ಳಿ ಖರೀದಿ ಮಾಡಲಿ:
ಕೇಂದ್ರ ಸರ್ಕಾರ ಈರುಳ್ಳಿ ಬೆಳೆಗಾರರಿಗೆ ತಾರತಮ್ಯ ಮಾಡುತ್ತಿದೆ. ಇಡೀ ದೇಶದಲ್ಲಿ ಗುಜರಾತ್ ಮತ್ತು ಮಹಾರಾಷ್ಟ್ರ 2 ರಾಜ್ಯಗಳಲ್ಲಿ ಮಾತ್ರ ಈರುಳ್ಳಿ ಖರೀದಿ ಕೇಂದ್ರಗಳಿವೆ. ಜತೆಗೆ ಎಲ್ಲ ಬೆಳೆಗೂ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ ಈರುಳ್ಳಿಯನ್ನು ಕೈ ಬಿಟ್ಟಿದ್ದಾರೆ. 38 ಸಾವಿರ ಮೆಟ್ರಿಕ್ ಟನ್ ಈರುಳ್ಳಿಯನ್ನು ಕೆಜಿಗೆ ₹25ರಂತೆ ರೈತರಿಂದ ಕೇಂದ್ರ ಖರೀದಿ ಮಾಡಿ, ಕೆಜಿಗೆ ₹35ನಂತೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಅತ್ತ ಹೊರ ದೇಶಗಳಿಗೆ ಈರುಳ್ಳಿ ರಫ್ತು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಏರಿಳಿತವಾಗುತ್ತಿದೆ. ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹7 ಸಾವಿರದಂತೆ ಈರುಳ್ಳಿ ಖರೀದಿ ಮಾಡಲಿ, ಜತೆಗೆ ಬೆಂಗಳೂರಿನಲ್ಲಿ ಈರುಳ್ಳಿ ಖರೀದಿ ಕೇಂದ್ರ ತೆರೆಯಬೇಕೆಂದು ಸಾಕಷ್ಟು ಬಾರಿ ಹೋರಾಟ ಮಾಡಿದ್ದರೂ ಈವರೆಗೆ ರೈತರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಸಿದ್ದೇಶ ಉತ್ತಂಗಿ.ಎರಡು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹1.40 ಲಕ್ಷ ಖರ್ಚು ಮಾಡಿದ್ದು, ರೋಗಕ್ಕೆ ಹೆದರಿ ಅವಧಿಗೂ ಮುನ್ನವೇ ಕಟಾವು ಮಾಡಿದ್ದೇನೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದೇನೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತವಾದರೆ ಹಾಕಿದ ಬಂಡವಾಳವೂ ಬರುವುದಿಲ್ಲ. ಕೇಂದ್ರ ಸರ್ಕಾರ ಈ ಕುರಿತು ಉತ್ತಮ ನಿರ್ಧಾರ ಕೈಗೊಳ್ಳಬೇಕು ಎನ್ನುತ್ತಾರೆ ಉತ್ತಂಗಿ ಈರುಳ್ಳಿ ಬೆಳೆಗಾರ ಕೊಟ್ರೇಶ.
ತಾಲೂಕಿನಲ್ಲಿ 900 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಕಳೆದ ಬಾರಿಗಿಂತ ಈ ಬಾರಿ ಉತ್ತಮ ಇಳುವರಿ ಇದೆ. ರೋಗಬಾಧೆ ಕಾಣಿಸಿಕೊಂಡಿಲ್ಲ. ಮಳೆ ಹೆಚ್ಚಾದರೆ ಈರುಳ್ಳಿಗೆ ತಿರುಗುಣಿ, ಕೊಳೆ ರೋಗ ಬರುತ್ತದೆ. ಆದರೆ ಈ ಬಾರಿ ಅಂತಹ ರೋಗ ಕಂಡು ಬಂದಿಲ್ಲ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿ ಹೂವಿನಹಡಗಲಿ ಚಂದ್ರಕುಮಾರ.