ಸಾರಾಂಶ
ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾತಾ ಇಲ್ಲದ ಆಸ್ತಿಗಳಿಗೆ ಹೊಸದಾಗಿ ಖಾತಾ ನೀಡುವ ಸಂಬಂಧ ನೂತನ ವೆಬ್‌ಸೈಟ್ ಅಭಿವೃದ್ದಿಪಡಿಸಲಾಗಿದ್ದು, ಆಸ್ತಿ ಮಾಲೀಕರು ಆನ್‌ಲೈನ್ ಮೂಲಕ ಸ್ವಯಂ ಚಾಲಿತವಾಗಿ ಖಾತಾ ಪಡೆಯುವ ವ್ಯವಸ್ಥೆ ಜಾರಿ ಮಾಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಲಕ್ಷಾಂತರ ಆಸ್ತಿಗಳಿಗೆ ಕೈ ಬರಹದ ಖಾತಾ ಕೂಡ ಹೊಂದಿಲ್ಲ. ಅಂತಹ ಆಸ್ತಿಗಳ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ ಆನ್‌ಲೈನ್ ಮೂಲಕ ಖಾತಾ ನೀಡುವ ವ್ಯವಸ್ಥೆಗೆ ಚಾಲನೆ ನೀಡಿದೆ. ನಿಗದಿತ ದಾಖಲೆಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಿ ಖಾತಾ ಪಡೆಯಬಹುದಾಗಿದೆ. ಅದರಂತೆ ಖಾತಾ ಇಲ್ಲದ ಆಸ್ತಿ ಮಾಲೀಕರು www.BBMP.karnataka.gov.in/NewKhata ವೆಬ್‌ಸೈಟ್‌ನಲ್ಲಿ ಖಾತಾಗಾಗಿ ಅರ್ಜಿ ಸಲ್ಲಿಸಿ, ನಂತರ ತಾವೇ ಹೊಸ ಬಿಬಿಎಂಪಿ ಖಾತಾ ರಚಿಸಿಕೊಂಡು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಈಗಾಗಲೇ ಖಾತಾ ಹೊಂದಿದ್ದು ಇ-ಖಾತಾ ಪಡೆಯಬೇಕಾದ ಆಸ್ತಿ ಮಾಲೀಕರು ಹೊಸದಾಗಿ ಖಾತಾ ಪಡೆಯಲು ಪ್ರಯತ್ನಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ನಕಲಿ ಖಾತಾ ಪಡೆಯುವ ಪ್ರಯತ್ನ ಮಾಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದೆ ಎಂದೂ ಬಿಬಿಎಂಪಿ ಎಚ್ಚರಿಕೆ ನೀಡಿದೆ.
ಆನ್‌ಲೈನ್ ಮೂಲಕ ಹೊಸದಾಗಿ ಖಾತಾ ಪಡೆಯುವ ಆಸ್ತಿ ಮಾಲೀಕರು, ಆಧಾರ್ ಸಂಖ್ಯೆ, ನೋಂದಣಿ ಪತ್ರದ ಸಂಖ್ಯೆ, ಆಸ್ತಿಯ ಛಾಯಾಚಿತ್ರ, ಆಸ್ತಿಯ ಋಣಭಾರ ಪ್ರಮಾಣಪತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಿಗದಿತ ದಾಖಲೆಗಳನ್ನು ಸಲ್ಲಿಸಿದ ನಂತರ ವೆಬ್‌ಸೈಟ್‌ನಲ್ಲಿ ಸ್ವಯಂ ಪ್ರೇರಿತವಾಗಿ ಖಾತಾ ಪ್ರಮಾಣಪತ್ರ ಸೃಷ್ಟಿಯಾಗಲಿದ್ದು, ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.