ಆನ್‌ಲೈನ್‌ ಬೆಟ್ಟಿಂಗ್‌: ಕನ್ನಡ ಸಂಘಗಳಕಾರ್ಯಕರ್ತರಿಂದ ಕಚೇರಿಗೆ ಮುತ್ತಿಗೆ

| Published : Oct 06 2025, 01:00 AM IST

ಆನ್‌ಲೈನ್‌ ಬೆಟ್ಟಿಂಗ್‌: ಕನ್ನಡ ಸಂಘಗಳಕಾರ್ಯಕರ್ತರಿಂದ ಕಚೇರಿಗೆ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಿಷೇಧಿತ ಆನ್‌ಲೈನ್‌ ಬೆಟ್ಟಿಂಗ್‌ ನಡೆಸುತ್ತಿರುವ ಆರೋಪದಡಿ ‘ನಮ್ಮ ಕರ್ನಾಟಕ ಸೇನೆ’ ಯುವ ಘಟಕದ ಕಾರ್ಯಕರ್ತರು ಭಾನುವಾರ ಕೋರಮಂಗಲದ 4ನೇ ಬ್ಲಾಕ್‌ನ ಗೋಲ್ಡನ್‌ ಏಸಸ್‌ ಪೋಕರ್‌ ರೂಮ್‌ ಕಂಪನಿ ಕಚೇರಿಗೆ ನುಗ್ಗಿ ಪೀಠೋಪಕರಣಗಳು ಹಾಗೂ ಗೇಮಿಂಗ್‌ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಷೇಧಿತ ಆನ್‌ಲೈನ್‌ ಬೆಟ್ಟಿಂಗ್‌ ನಡೆಸುತ್ತಿರುವ ಆರೋಪದಡಿ ‘ನಮ್ಮ ಕರ್ನಾಟಕ ಸೇನೆ’ ಯುವ ಘಟಕದ ಕಾರ್ಯಕರ್ತರು ಭಾನುವಾರ ಕೋರಮಂಗಲದ 4ನೇ ಬ್ಲಾಕ್‌ನ ಗೋಲ್ಡನ್‌ ಏಸಸ್‌ ಪೋಕರ್‌ ರೂಮ್‌ ಕಂಪನಿ ಕಚೇರಿಗೆ ನುಗ್ಗಿ ಪೀಠೋಪಕರಣಗಳು ಹಾಗೂ ಗೇಮಿಂಗ್‌ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ಸಂಘಟನೆಯ ಕಾರ್ಯಕರ್ತರ ದಾಂಧಲೆ ವಿರುದ್ಧ ಕಂಪನಿ ಮಾಲೀಕ ಕೋರಮಂಗಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಸಂಘಟನೆಯ 10 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಪನಿ ಕಚೇರಿಗೆ ನುಗ್ಗಿ ಧ್ವಂಸ:

ಭಾನುವಾರ ಮಧ್ಯಾಹ್ನ ಹತ್ತಕ್ಕೂ ಹೆಚ್ಚು ಕಾರ್ಯಕರ್ತರು ಏಕಾಏಕಿ ಕಂಪನಿಯ ಕಚೇರಿಗೆ ನುಗ್ಗಿ ಕೈಗೆ ಸಿಕ್ಕಿ ವಸ್ತುಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ. ಕಚೇರಿಯ ಪೀಠೋಪಕರಣಗಳು ಹಾಗೂ ಗೇಮಿಂಗ್‌ ವಸ್ತುಗಳನ್ನು ಮುರಿದು ಧ್ವಂಸ ಮಾಡಿದ್ದಾರೆ. ಕಾರ್ಯಕರ್ತರು ಕಚೇರಿಗೆ ನುಗ್ಗಿ ಘೋಷಣೆ ಕೂಗಿದ ಕೂಡಲೇ ಜೂಜಾಟದಲ್ಲಿ ತೊಡಗಿದ್ದವರು ಸ್ಥಳದಿಂದ ಓಡಿ ಹೋಗಿದ್ದಾರೆ.ಈ ವೇಳೆ ಪ್ರತಿಭಟನಾಕಾರರು ಹಾಗೂ ಕಂಪನಿ ಸಿಬ್ಬಂದಿ ನಡುವೆ ವಾಗ್ವಾದ, ಮಾತಿನ ಚಕಮಕಿ ಸಹ ನಡೆದಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರತಿಭಟನಾಕಾರನ್ನು ಸಮಾಧಾನಪಡಿಸಿದರು. ಏನೇ ಇದ್ದರೂ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದರು.

ಸರ್ಕಾರ ಆನ್‌ಲೈನ್‌ ಬೆಟ್ಟಿಂಗ್ ನಿಷೇಧಿಸಿದ್ದರೂ ಈ ಗೋಲ್ಡನ್‌ ಏಸಸ್‌ ಪೋಕರ್‌ ರೂಮ್‌ನಲ್ಲಿ ಅಕ್ರಮವಾಗಿ ಜೂಜಾಟ ನಡೆಸಲಾಗುತ್ತಿದೆ. ಬೆಟ್ಟಿಂಗ್‌ನಿಂದ ಬಡವರು ಹಣ ಕಳೆದುಕೊಂಡು ನೇಣಿಗೆ ಶರಣಾಗುತ್ತಿದ್ದಾರೆ. ಎಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ. ನಿಷೇಧದ ನಡುವೆಯೂ ಅಕ್ರಮ ಬೆಟ್ಟಿಂಗ್‌ ದಂಧೆ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಇನ್ನು ಮುಂದೆಯೂ ಈ ರೀತಿಯ ಅಕ್ರಮ ಜೂಜಾಟದಲ್ಲಿ ತೊಡಗಿರುವ ಕಂಪನಿಗಳಿಗೆ ನುಗ್ಗಿ ಧ್ವಂಸ ಮಾಡುವುದಾಗಿ ಎಚ್ಚರಿಕೆ ನೀಡಿದರು.

ದೂರು-ಪ್ರತಿ ದೂರು

ನಮ್ಮ ಕರ್ನಾಟಕ ಸೇನೆ ಸದಸ್ಯರು ಗೋಲ್ಡನ್ ಏಸಸ್ ಪೋಕರ್ ರೂಂ ಕಂಪನಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿ ದಾಂಧಲೆ ನಡೆಸಿದ್ದಾರೆ ಎಂದು ಕಂಪನಿ ಮಾಲೀಕರು ದೂರು ನೀಡಿದ್ದಾರೆ. ಈ ಕಂಪನಿಯು ನಿಷೇಧಿತ ಆನ್‌ಲೈನ್‌ ಬೆಟ್ಟಿಂಗ್‌ ನಡೆಸುತ್ತಿದೆ ಎಂದು ಆರೋಪಿಸಿ ಸಂಘಟನೆ ಕಾರ್ಯಕರ್ತರು ಪ್ರತಿ ದೂರು ನೀಡಿದ್ದಾರೆ. ಈ ಸಂಬಂಧ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.