ಭದ್ರಾ ಜಲಾಶಯ ಭರ್ತಿಗೆ ೩-೪ ಅಡಿ ಮಾತ್ರ ಬಾಕಿ

| Published : Jul 28 2025, 12:30 AM IST

ಸಾರಾಂಶ

ತಾಲೂಕಿನ ಜೀವ ಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು ಕೇವಲ ೩-೪ ಅಡಿ ಮಾತ್ರ ಬಾಕಿ ಉಳಿದಿದೆ. ಈ ಬಾರಿ ನಿರೀಕ್ಷೆಗಿಂತ ಬಹುಬೇಗನೆ ಭರ್ತಿಯಾಗುತ್ತಿದ್ದು, ಇದರಿಂದಾಗಿ ಜಲಾಶಯ ನಂಬಿಕೊಂಡಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ.

ಭದ್ರಾವತಿ: ತಾಲೂಕಿನ ಜೀವ ಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಲು ಕೇವಲ ೩-೪ ಅಡಿ ಮಾತ್ರ ಬಾಕಿ ಉಳಿದಿದೆ. ಈ ಬಾರಿ ನಿರೀಕ್ಷೆಗಿಂತ ಬಹುಬೇಗನೆ ಭರ್ತಿಯಾಗುತ್ತಿದ್ದು, ಇದರಿಂದಾಗಿ ಜಲಾಶಯ ನಂಬಿಕೊಂಡಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ.

ಭಾನುವಾರ ಬೆಳಗ್ಗೆ ಜಲಾಶಯದ ನೀರಿನ ಮಟ್ಟ ೧೮೦.೬ ಅಡಿ ತಲುಪಿದೆ. ಒಟ್ಟು ೧೮೬ ಅಡಿ ಎತ್ತರದ ಜಲಾಶಯ ಸಂಜೆ ವೇಳೆಗೆ ಮತ್ತಷ್ಟು ಭರ್ತಿಯಾಗಿದ್ದು, ಇದರಿಂದಾಗಿ ಸೋಮವಾರ ಅಥವಾ ಮಂಗಳವಾರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ನಿರೀಕ್ಷೆ ಇದೆ. ಪ್ರಸ್ತುತ ಜಲಾಶಯದ ಒಳ ಹರಿವು ೩೯,೦೧೭ ಕ್ಯೂಸೆಕ್ ಇದ್ದು, ಇಷ್ಟೆ ಪ್ರಮಾಣ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ತೀರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ನಗರದ ಹೃದಯ ಭಾಗದಲ್ಲಿ ಹರಿಯುತ್ತಿರುವ ಭದ್ರಾ ನದಿ ಪ್ರವಾಹ ಉಂಟು ಮಾಡಿದ್ದು, ಭಾನುವಾರ ಬೆಳಿಗ್ಗೆ ಹೊಸಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದೆ. ನಂತರ ಪುನಃ ನೀರಿನ ಪ್ರಮಾಣ ಕಡಿಮೆಯಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ ಬೆಳಿಗ್ಗೆ ಸ್ವಲ್ಪ ಮಳೆಯಾಗಿದ್ದು, ನಂತರ ಸಂಜೆವರೆಗೂ ಮಳೆಯಾಗಿಲ್ಲ. ಕಳೆದ ವರ್ಷದ ಇದೆ ದಿನ ೧೭೮ ಅಡಿ ನೀರು ಸಂಗ್ರಹವಾಗಿತ್ತು.