ಸಾರಾಂಶ
ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಅನರ್ಹರ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಮಾಡುವ ಸರ್ಕಾರದ ಆದೇಶದ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಕೇವಲ 362 ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದ್ದರೆ, 2015 ತೆರಿಗೆ ಪಾವತಿದಾರರ ಕಾರ್ಡ್‌ಗಳನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಪಡಿತರ ಚೀಟಿ ಪರಿಷ್ಕರಣೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರವು, ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರ ಕಾರ್ಡ್‌ಗಳನ್ನಷ್ಟೇ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಎಪಿಎಲ್‌ಗೆ ಪರಿವರ್ತನೆಗೊಂಡ 362 ಕಾರ್ಡ್‌ಗಳ ಪೈಕಿ ಕೆಲವು ಸರ್ಕಾರಿ ನೌಕರರೂ ನುಸುಳಿಕೊಂಡಿದ್ದು, ಅವರನ್ನು ಹೊರತುಪಡಿಸಿ ಉಳಿದವರ ಕಾರ್ಡ್ ವಾಪಸಾಗುವ ಸಾಧ್ಯತೆಗಳಿವೆ.ಶೇ.5ರಷ್ಟೂ ಬಿಸಿ ತಟ್ಟಿಲ್ಲ: ಇದಕ್ಕೂ ಮೊದಲು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ 54,093 ಬಿಪಿಎಲ್ ಕಾರ್ಡ್‌ಗಳನ್ನು ಪರಿಶೀಲನೆ ನಡೆಸುವಂತೆ ರಾಜ್ಯದಿಂದ ಜಿಲ್ಲಾ ಆಹಾರ ಇಲಾಖೆಗೆ ಸೂಚನೆ ಬಂದಿತ್ತು. ಪರಿಶೀಲನೆ ನಡೆಸಿದ ಅಧಿಕಾರಿಗಳು ಅದರಲ್ಲಿ 36,679 ಕಾರ್ಡ್‌ಗಳನ್ನು ಬಿಪಿಎಲ್ ಆಗಿಯೇ ಉಳಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಉಳಿದಂತೆ ಎಪಿಎಲ್‌ಗೆ ಪರಿವರ್ತನೆ ಮಾಡಿದ 362 ಮತ್ತು ಅಮಾನತಿನಲ್ಲಿ ಇರಿಸಿದ 2015 ಕಾರ್ಡ್‌ಗಳು ಸೇರಿ ಒಟ್ಟು 2377 ಕುಟುಂಬಗಳಿಗೆ ಅಂದರೆ ಶೇ.4.39 ಮಾತ್ರ ಪರಿಷ್ಕರಣೆಯ ಬಿಸಿ ತಟ್ಟಿದೆ.ಅಧಿಕ ಆದಾಯ ಸರ್ಟಿಫಿಕೆಟ್: 362 ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿದ್ದ ಕುಟುಂಬಗಳ ಸದಸ್ಯರು 1.20 ಲಕ್ಷ ರು.ಗಿಂತ ಹೆಚ್ಚಿನ ಆದಾಯ ಪ್ರಮಾಣಪತ್ರ ಪಡೆದುಕೊಂಡಿರುವುದು ಪರಿಶೀಲನೆ ವೇಳೆ ದೃಢಪಟ್ಟಿದ್ದರಿಂದ ಅವುಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಕಾರ್ಡ್‌ಗಳನ್ನು ಪರಿಶೀಲನೆ ನಡೆಸದೆ ಪರಿವರ್ತನೆ ಮಾಡಿಲ್ಲ. ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಯ ಅಧಿಕೃತ ವರದಿಯ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.4800 ತೆರಿಗೆ ಪಾವತಿದಾರರು!: ದ.ಕ. ಜಿಲ್ಲೆಯಲ್ಲಿ ಒಟ್ಟು 4800 ಆದಾಯ ತೆರಿಗೆ ಪಾವತಿದಾರರ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವ ಕುರಿತು ಪರಿಶೀಲಿಸುವಂತೆ ಜಿಲ್ಲೆಗೆ ರಾಜ್ಯ ಆಹಾರ ಇಲಾಖೆಯಿಂದ ದಾಖಲೆ ಬಂದಿತ್ತು. ಅದರಂತೆ ಇದುವರೆಗೆ 2015 ಕಾರ್ಡ್‌ಗಳನ್ನು ಅಧಿಕಾರಿಗಳು ತಾತ್ಕಾಲಿಕವಾಗಿ ಅಮಾನತು ಮಾಡಿದ್ದಾರೆ. ಕಾರ್ಡ್ ಅಮಾನತುಗೊಂಡವರಿಗೆ ಮೆಸೆಜ್ ಇನ್ನಿತರ ವಿಧಾನಗಳ ಮೂಲಕ ಮಾಹಿತಿ ನೀಡಲಾಗಿದೆ. ತಾವು ಆದಾಯ ತೆರಿಗೆ ಪಾವತಿದಾರರಲ್ಲ ಎನ್ನುವ ದಾಖಲೆ ನೀಡಿದರೆ ಮಾತ್ರ ಅಂಥವರ ಅಮಾನತನ್ನು ಹಿಂಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಗೃಹಲಕ್ಷ್ಮಿ ಫಲಾನುಭವಿಗಳಿಗೆ ಆಗದ ಸಮಸ್ಯೆ
ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿಯ ನೋಂದಣಿ ನಿಬಂಧನೆಯಲ್ಲಿ ತೆರಿಗೆ ಪಾವತಿದಾರರಾಗಿರಬಾರದು ಎಂಬುದೂ ಸೇರಿತ್ತು. ಇದೀಗ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸಂದರ್ಭ ಅಧಿಕಾರಿಗಳ ಪರಿಶೀಲನೆ ವೇಳೆ ದ.ಕ. ಜಿಲ್ಲೆಯ 4800 ತೆರಿಗೆ ಪಾವತಿದಾರ (ಬಿಪಿಎಲ್) ಕುಟುಂಬಗಳ ಪೈಕಿ 3500 ಕುಟುಂಬಗಳ ಮಹಿಳೆಯರ ಗೃಹಲಕ್ಷ್ಮಿ ಅರ್ಜಿ ಹಿಂದೆಯೇ ತಿರಸ್ಕೃತವಾಗಿರುವುದು ತಿಳಿದುಬಂದಿದೆ. ಕಾರ್ಡ್ ಪರಿಷ್ಕರಣೆಯಿಂದ ಜಿಲ್ಲೆಯಲ್ಲಿ ಯಾವ ಗ್ಯಾರಂಟಿ ಫಲಾನುಭವಿಗಳಿಗೂ ಸಮಸ್ಯೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.