ಜ್ಞಾನ ಸಂಪಾದಿಸಿದಲ್ಲಿ ಮಾತ್ರ ಸಮಾಜಮುಖಿಯಾಗಲು ಸಾಧ್ಯ

| Published : Sep 10 2025, 01:03 AM IST

ಸಾರಾಂಶ

ಅಕ್ಷರ ಕಲಿತು ಜ್ಞಾನವನ್ನು ಬೆಳೆಸಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡರೆ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಚಿಕ್ಕಮಗಳೂರು: ಅಕ್ಷರ ಕಲಿತು ಜ್ಞಾನವನ್ನು ಬೆಳೆಸಿಕೊಂಡು ಉತ್ತಮ ನಿರ್ಧಾರಗಳನ್ನು ತೆಗೆದುಕೊಂಡರೆ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿ.ಎಸ್.ಇ.ಆರ್.ಟಿ.), ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ವ್ಯಕ್ತಿಯ ಬದುಕನ್ನು ರೂಪಿಸಿಕೊಳ್ಳಲು ಶಿಕ್ಷಣ ನೆರವಾಗುತ್ತದೆ. ಅಲ್ಲದೆ ಬದುಕು ಹೇಗಿರಬೇಕೆಂಬುದನ್ನು ಕಲಿಸುವುದೇ ಶಿಕ್ಷಣ. ಸಾಕ್ಷರತೆ ಎಂಬುದು ನಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತದೆ ಎಂದರು. ಕೇರಳ, ಗೋವಾ ಸಣ್ಣ ರಾಜ್ಯಗಳಾಗಿದ್ದರೂ ಬಹಳ ಹಿಂದೆಯೇ ಶೇ.100ರಷ್ಟು ಸಾಕ್ಷರತೆಯನ್ನು ಸಾಧಿಸಿವೆ. ಆದರೆ, ನಮ್ಮ ಕರ್ನಾಟಕ ಬೇರೆ ಬೇರೆ ವಿಷಯದಲ್ಲಿ ಇಡೀ ದೇಶಕ್ಕೆ ಪ್ರಥಮ ಸ್ಥಾನದಲ್ಲಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಿಂದ ಶೋಷಿತ ವರ್ಗ ಹಾಗೂ ಸಮಾಜದ ಬಡವರನ್ನು ಮುನ್ನೆಲೆಗೆ ತರುವ ಪ್ರಯತ್ನ ನಡೆದಿದೆ. ಸುಮಾರು 1990ನೇ ಇಸವಿಯಲ್ಲಿ ಈ ಜಿಲ್ಲೆಯ ದಿವಂಗತ ಸುಂದ್ರೇಶ್‌ರವರು ಸಾಕ್ಷರತೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಸರಸ್ವತಿಯ ಆರಾಧಕರಾದ ನಾವು ಇಂದಿನ ದಿನವನ್ನು ಸಾಕ್ಷರತಾ ದಿನವನ್ನಾಗಿ ಆಚರಿಸುತ್ತಿದ್ದೇವೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಾವು ಶಿಕ್ಷಣ ಪಡೆದು ನಮ್ಮವರಿಗೂ ಶಿಕ್ಷಣ ಕಲಿಸುವುದೇ ಸಾಕ್ಷರತಾ ದಿನಾಚರಣೆಯ ಮುಖ್ಯ ಉದ್ದೇಶ. ಕೇರಳ ಸಂಪೂರ್ಣವಾಗಿ ಅಕ್ಷರಸ್ಥವಾಗಿ ದಶಕಗಳೇ ಕಳೆದಿವೆ. ಆದರೆ ನಾವಿನ್ನೂ ಸಂಪೂರ್ಣವಾಗಿ ಸಾಕ್ಷರರಾಗಿಲ್ಲ ಎಂದು ವಿಷಾದಿಸಿದರು. ಇತ್ತೀಚಿನ ದಿನಗಳಲ್ಲಿ ಪೋಷಕರು ದುಡಿದು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುತ್ತಿದ್ದಾರೆ. ಹಿಂದೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಏಕೆಂದರೆ ಆಗ ಬಸ್ಸಿನ ವ್ಯವಸ್ಥೆ ಇರಲಿಲ್ಲ. ಬಾಲ್ಯ ವಿವಾಹಕ್ಕೆ ಬಲಿಯಾಗಿ ಶಿಕ್ಷಣವನ್ನು ಅರ್ಧದಲ್ಲೆ ಬಿಡುವ ಪರಿಸ್ಥಿತಿ ಅಂದಿನ ಕಾಲದಲ್ಲಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಎಲ್ಲಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ. ಶಿಕ್ಷಣ ಪಡೆದವರು ತಮ್ಮ ಸುತ್ತಮುತ್ತಲಿನ ಅನಕ್ಷರಸ್ಥರಿಗೆ ಕನಿಷ್ಠ ತಮ್ಮ ಸಹಿ ಮಾಡುವುದನ್ನು ಕಲಿಸಿದರೆ ಈ ಸಾಕ್ಷರತಾ ದಿನಾಚರಣೆಗೆ ಒಂದು ತೂಕ ಹೆಚ್ಚಾಗುತ್ತದೆ ಎಂದರು. ಸಂಪನ್ಮೂಲ ವ್ಯಕ್ತಿ ವೀರಭದ್ರಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ರವೀಶ್, ಡಯಟ್ ಪ್ರಾಂಶುಪಾಲ ವೈ.ಬಿ.ಸುಂದ್ರೇಶ್‌, ಸಾಕ್ಷರತಾ ಇಲಾಖೆಯ ಜಿಲ್ಲಾ ನೋಡೆಲ್‌ ಅಧಿಕಾರಿ ಮಂಜನಾಯ್ಕ್, ಸಂಪನ್ನೂಲ ವ್ಯಕ್ತಿ ಲೋಕೇಶ್ ಉಪಸ್ಥಿತರಿದ್ದರು.