ಹೊಸಕೋಟೆ: ದೇಶದ ಜನರಿಗೆ ರೋಟಿ ಕಪಡಾ ಮಕಾನ್ ಕೊಡುವಂತಹ ಏಕೈಕ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ದೇಶದ ಜನರಿಗೆ ರೋಟಿ ಕಪಡಾ ಮಕಾನ್ ಕೊಡುವಂತಹ ಏಕೈಕ ಸರ್ಕಾರ ಎಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ವರದಾಪುರದಲ್ಲಿ ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿಯಿಂದ ನಿರ್ಮಿಸಿರುವ ಮನೆಗಳನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, 1970ರಲ್ಲಿ ದೇಶಕ್ಕೆ ಏನು ಬೇಕು ಎನ್ನುವ ಸಂದರ್ಭದಲ್ಲಿ ರೋಟಿ, ಕಪಡಾ, ಮಕಾನ್ ಬೇಕು ಎನ್ನುತ್ತಿದ್ದರು. ಅಂದಿನಿಂದ ಇಂದಿನವರೆಗೂ ದೇಶದ ಜನರಿಗೆ ಈ ಮೂರನ್ನು ಕೊಡುವಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಬೇರೆ ಯಾವ ಸರ್ಕಾರಗಳಿಂದಲೂ ಕೊಡಲು ಸಾಧ್ಯವಾಗಲಿಲ್ಲ. ಅದರಂತೆ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹೊಸಕೋಟೆ ತಾಲೂಕಿಗೆ 494 ಮನೆಗಳು ಮಂಜೂರಾಗಿದ್ದು ನಗರದ ವರದಾಪುರದಲ್ಲಿ 10 ಗುಂಟೆ ಜಾಗದಲ್ಲಿ 45 ಮನೆಗಳನ್ನು ನಿರ್ಮಿಸಿ ಹಸ್ತಾಂತರ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸೂಕ್ತ ಜಾಗ ಗುರುತಿಸಿ ಮತ್ತಷ್ಟು ಮನೆಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.ಬಿಎಂಆರ್‌ಡಿಎ ಸದಸ್ಯ ಸುಬ್ಬರಾಜು ಮಾತನಾಡಿ, ಶಾಸಕ ಶರತ್ ಬಚ್ಚೇಗೌಡರು ಹೊಸಕೋಟೆ ಕ್ಷೇತ್ರದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಹಿಂದೆ ಮಾಜಿ ಸಂಸದ ಬಚ್ಚೇಗೌಡರು ಶಾಸಕರಾಗಿ ಸಚಿವರಾಗಿ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಬಡವರಿಗೆ ಅಗತ್ಯ ನಿವೇಶನ ಹಾಗೂ ಸೂರು ಕಟ್ಟಿಸಿ ಕೊಡುತ್ತಿದ್ದರು. ಈಗ ಶರತ್ ಬಚ್ಚೇಗೌಡರು ಕೂಡ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಈ ವೇಳೆ ಟೌನ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಬೈರೇಗೌಡ, ಬಿಎಂಆರ್‌ಡಿಎ ಅಧ್ಯಕ್ಷ ಕೇಶವಮೂರ್ತಿ, ಸದಸ್ಯ ಸುಬ್ಬರಾಜು, ಮಾಜಿ ಅಧ್ಯಕ್ಷ ವಿಜಯ್ ಕುಮಾರ್, ಟೌನ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್, ನಿರ್ದೇಶಕ ಗೋಪಾಲ್, ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಮತ್ತಿತರರು ಹಾಜರಿದ್ದರು.ಫೋಟೋ : 24 ಹೆಚ್‌ಎಸ್‌ಕೆ 1 ಮತ್ತು 2
ಹೊಸಕೋಟೆಯ ವರದಾಪುರದಲ್ಲಿ ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರ್ಮಿಸಿರುವ ಮನೆಗಳ ಫಲಾನುಭವಿಗಳಿಗೆ ಶಾಸಕ ಶರತ್ ಬಚ್ಚೇಗೌಡ ಹಸ್ತಾಂತರಿಸಿದರು.