ಸಾರಾಂಶ
ಯಲ್ಲಾಪುರ: ಮತ್ತೆ ಮತ್ತೆ ಕಾಡುವ ಸಂಗತಿಗಳು ಬರವಣಿಗೆಯಲ್ಲಿ ಅಭಿವ್ಯಕ್ತಿಗೊಳ್ಳುವುದು ಉತ್ತಮ ಕವಿತೆ ಸೃಷ್ಟಿಯಾಗಲು ಕಾರಣವಾಗುತ್ತದೆ. ಕವಿ ಸಹೃದಯಿಯಾಗಿದ್ದು ಮೌನವನ್ನು ಮಾತನಾಡಿಸುವ ಜಾಣ್ಮೆ ಹೊಂದಿರಬೇಕು ಎಂದು ಲೇಖಕಿ ಅಕ್ಷತಾ ಕೃಷ್ಣಮೂರ್ತಿ ತಿಳಿಸಿದರು.
ತಾಲೂಕಿನ ವಜ್ರಳ್ಳಿ ಸಮೀಪದ ಬೀಗಾರ್ ಕಲ್ಮನೆಯ ಶಿವರಾಮ ಗಾಂವ್ಕರರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಯುಗಾದಿ ಸಾಹಿತ್ಯೋತ್ಸವದ ಸಮಾರೋಪದಲ್ಲಿ ಮಾತನಾಡಿದರು.ಕಳೆದ ೧೭ ವರ್ಷಗಳ ಹಿಂದೆ ಓದಿನ ನಂತರ ವೃತ್ತಿಗಾಗಿ ಅಣಶಿಯಂತಹ ಕಾಡಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ತೆಗೆದುಕೊಂಡ ನಿರ್ಣಯವೇ ನನಗೆ ಬರವಣಿಗೆಯ ಶಕ್ತಿಯಾಗಲು ಸಹಾಯಕವಾಯಿತು. ಮುಗ್ಧ ಬದುಕಿನ ನಿತ್ಯದ ನೋಟಗಳು ಅಕ್ಷರದ ರೂಪು ಪಡೆದವು. ಬರವಣಿಗೆಯ ದಿಕ್ಕು ಒಮ್ಮೆ ಹೊಳೆದರೆ ಅಂತಹ ಆನಂದದಿಂದ ಹೊರಬರಲು ಅಸಾಧ್ಯ. ಪ್ರಕೃತಿ ಜತೆ ಬೆಳೆದ ನನಗೆ ಸದಾಕಾಲ ಬದುಕಿನ ಹೋರಾಟದಲ್ಲಿ ಮಿಂದೆದ್ದವರು, ಸವಾಲುಗಳಿಗೆ ಉತ್ತರ ಹುಡುಕ ಹೊರಟವರು ಎದುರಾಗುತ್ತಾರೆ. ಮಕ್ಕಳಲ್ಲಿನ ಕುತೂಹಲಗಳು, ಪ್ರಶ್ನೆಗಳು ನನ್ನ ಬರವಣಿಗೆಯ ಮೂಲಕ ಆ ಸಂದರ್ಭದಲ್ಲಿ ಪ್ರಕಟವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಲ್ಲಾಪುರದ ಸ.ಪ.ಪೂ. ಕಾಲೇಜು ಉಪನ್ಯಾಸಕ ಶ್ರೀಪಾದ ಭಟ್ಟ ಮಾತನಾಡಿ, ಸಾಹಿತ್ಯ ಓದುವುದು ಸುಲಭ. ಆದರೆ ಬರವಣಿಗೆ ಕಾರ್ಯ ಕಷ್ಟ. ಸಾಹಿತ್ಯಕ್ಕೆ ಜೀವನಾನುಭವದ ಅರಿವು ಅಗತ್ಯ ಎಂದರು.ಶಿಕ್ಷಕ ರವೀಂದ್ರ ಗಾಂವ್ಕರ ಲೇಖಕಿಯನ್ನು ಪರಿಚಯಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಡೆದ ಅಕ್ಷತಾ ಕೃಷ್ಣಮೂರ್ತಿಯವರ ಸಾಹಿತ್ಯ ಕೃತಿಗಳ ಅವಲೋಕನದಲ್ಲಿ ''''''''ಕೋಳ್ಕಂಬ'''''''' ಕವನ ಸಂಕಲನದ ಕುರಿತು ಶಿಕ್ಷಕ ಸಣ್ಣಪ್ಪ ಭಾಗ್ವತ, ''''''''ಕೇದಗೆಯ ಕಂಪು'''''''' ವಿಮರ್ಶಾ ಕೃತಿಯ ಕುರಿತಾಗಿ ದತ್ತಾತ್ರೇಯ ಭಟ್ಟ ಕಣ್ಣಿಪಾಲ, ನುಡಿಚಿತ್ರ ''''''''ಇಸ್ಕೂಲು'''''''' ಕೃತಿಯ ಕುರಿತಾಗಿ ಕವಯತ್ರಿ ರೇಖಾ ಭಟ್ಟ ಹೊನ್ನಗದ್ದೆ ಮಾತನಾಡಿದರು.
ಸಾಹಿತ್ಯ ಸಂಘಟಕ, ಕವಿ ಶಿವರಾಮ ಗಾಂವ್ಕರ ಕಲ್ಮನೆ, ಜಿ.ಎನ್. ಕೋಮಾರ, ಡಾ. ಡಿ.ಕೆ. ಗಾಂವ್ಕರ್ ಉಪಸ್ಥಿತರಿದ್ದರು. ವಿಜಯಶ್ರೀ ಹೆಗಡೆ ಪ್ರಾರ್ಥಿಸಿದರು. ಉದಯ ಹೆಗಡೆ ಸ್ವಾಗತಿಸಿದರು. ವಿನಯಶ್ರೀ ಗಾಂವ್ಕರ ನಿರ್ವಹಿಸಿ, ವಂದಿಸಿದರು.