ಸಾರಾಂಶ
ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ.
ವಿದ್ಯಾನಿಕೇತನ ಪಬ್ಲಿಕ್ ಶಾಲೆ ವಾರ್ಷಿಕೋತ್ಸವದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯಕನ್ನಡಪ್ರಭ ವಾರ್ತೆ ಗಂಗಾವತಿ
ಶಿಕ್ಷಣದಿಂದ ಮಾತ್ರ ಸಮಾಜದ ಬದಲಾವಣೆ ಸಾಧ್ಯ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಹೇಳಿದರು. ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ 2024-25ನೇ ಸಾಲಿನ ಪೂರ್ವ ಪ್ರಾಥಮಿಕದಿಂದ 6ನೇ ತರಗತಿ ವರೆಗಿನ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಶಿಕ್ಷಣದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಸಮಾಜದಲ್ಲಿ ಇಂದು ನೈತಿಕ ಮೌಲ್ಯಗಳು ಅಧಃಪತನ ಹೊಂದುತ್ತಿದ್ದು, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಅವರು, ವಿದ್ಯಾರ್ಥಿಗಳು ಪಠ್ಯಕ್ರಮದ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲೂ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು. ಉತ್ತಮವಾದ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಎಲ್ಲ ಕ್ಷೇತ್ರಗಳಲ್ಲಿಯೂ ಶ್ರೇಷ್ಠ ಸಾಧನೆ ಮಾಡುವ ಕಡೆಗೆ ಗಮನ ನೀಡಬೇಕು. ನಮ್ಮ ನಾಡಿನಲ್ಲಿ ಹಲವಾರು ಸಂತರು, ಶರಣರು, ವಚನಕಾರರು ಜನ್ಮ ತಾಳಿದ್ದು, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಶಾಲೆಯಲ್ಲಿ ವಚನ ವೈಭವ ಎಂಬ ಶೀರ್ಷಿಕೆಯ ಅಡಿಯಲ್ಲಿ ವಚನ-ವಾಚನ ಕಾರ್ಯಕ್ರಮವನ್ನು ಪ್ರತಿದಿನ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ವಾಣಿಜ್ಯೋದ್ಯಮಿಗಳಾದ ಪ್ರಭಾಕರ ಚೆನ್ನುಪಾಟಿ, ದಂಡು ವೆಂಕಟಪತಿರಾಜು, ಸುಬ್ಬಾರಾವ್, ಗಡ್ಡಿ ಮುದುಕಪ್ಪ, ನಗರಸಭೆ ಸದಸ್ಯ ಎಫ್. ರಾಘವೇಂದ್ರ, ಶಾಲೆಯ ಉಪಾಧ್ಯಕ್ಷ ನೆಕ್ಕಂಟಿ ಆದರ್ಶ, ಶಾಲೆಯ ಮುಖ್ಯ ನಿರ್ದೇಶಕ ಎಚ್.ಕೆ. ಚಂದ್ರಮೋಹನ, ಶಾಲೆಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನರೇಶ ವೈ., ಶೈಕ್ಷಣಿಕ ಮುಖ್ಯಸ್ಥರಾದ ಕೃಷ್ಣವೇಣಿ ಎಸ್., ಜಿ. ನಾಗೇಶ್ವರರಾವ್, ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಅಭಿಷೇಕ, ಶಾಲೆಯ ಪ್ರಾಂಶುಪಾಲೆ ಸುಭದ್ರಾದೇವಿ ಉಪಸ್ಥಿತರಿದ್ದರು.