ಅರ್ಧದಷ್ಟು ಪಠ್ಯಪುಸ್ತಕ ಮಾತ್ರ ಪೂರೈಕೆ

| Published : May 31 2024, 02:15 AM IST

ಸಾರಾಂಶ

ಬೇಸಿಗೆಯ ರಜೆ ಮುಗಿದು ಶಾಲೆಗಳು ಇದೀಗ ತಾನೆ ಆರಂಭಗೊಂಡಿವೆ. ಆದರೆ, ತಾಲೂಕಿನಲ್ಲಿ ಅರ್ಧದಷ್ಟು ಮಾತ್ರ ಪಠ್ಯಪುಸ್ತಕಗಳು ಪೂರೈಕೆ ಆಗಿವೆ. ಆದರೆ, ಶಾಲಾ ಆರಂಭೋತ್ಸವದ ದಿನದಂದೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಬೇಕೆಂದು ಇಲಾಖೆಯಿಂದ ನಿರ್ದೇಶನವಿದೆ. ಹೀಗಾಗಿ ಬಂದಿರುವ ಅರ್ಧ ಪಠ್ಯಪುಸ್ತಕಗಳನ್ನು ಅರ್ಧ ಮಕ್ಕಳಿಗೆ ಹಂಚಿ ಇನ್ನರ್ಧ ಮಕ್ಕಳಿಗೆ ಹೇಗೆ ಬಿಡುವುದು ಎಂಬ ಗೊಂದಲ ಶಿಕ್ಷಕ ವರ್ಗದಲ್ಲಿ ಮನೆ ಮಾಡಿದೆ.

ಬಸವರಾಜ ನಂದಿಹಾಳ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಬೇಸಿಗೆಯ ರಜೆ ಮುಗಿದು ಶಾಲೆಗಳು ಇದೀಗ ತಾನೆ ಆರಂಭಗೊಂಡಿವೆ. ಆದರೆ, ತಾಲೂಕಿನಲ್ಲಿ ಅರ್ಧದಷ್ಟು ಮಾತ್ರ ಪಠ್ಯಪುಸ್ತಕಗಳು ಪೂರೈಕೆ ಆಗಿವೆ. ಆದರೆ, ಶಾಲಾ ಆರಂಭೋತ್ಸವದ ದಿನದಂದೇ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಬೇಕೆಂದು ಇಲಾಖೆಯಿಂದ ನಿರ್ದೇಶನವಿದೆ. ಹೀಗಾಗಿ ಬಂದಿರುವ ಅರ್ಧ ಪಠ್ಯಪುಸ್ತಕಗಳನ್ನು ಅರ್ಧ ಮಕ್ಕಳಿಗೆ ಹಂಚಿ ಇನ್ನರ್ಧ ಮಕ್ಕಳಿಗೆ ಹೇಗೆ ಬಿಡುವುದು ಎಂಬ ಗೊಂದಲ ಶಿಕ್ಷಕ ವರ್ಗದಲ್ಲಿ ಮನೆ ಮಾಡಿದೆ.

ಅಖಂಡ ಬಸವನಬಾಗೇವಾಡಿ ತಾಲೂಕಿನಲ್ಲಿರುವ ಎಲ್ಲ ೧ ರಿಂದ ೧೦ ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕಗಳು ಶೇ. ೫೪.೬೮ರಷ್ಟು ಮಾತ್ರ ಬಂದಿವೆ. ಇನ್ನು ಖಾಸಗಿ ಶಾಲೆಗಳ ಮಾರಾಟ ಪಠ್ಯಪುಸ್ತಕಗಳು ಶೇ.೭೧.೪೪ರಷ್ಟು ಬಂದಿವೆ. ಉಳಿದ ಪುಸ್ತಕಗಳು ಇನ್ನೂ ಬರಬೇಕಿವೆ. ಉರ್ದು ಮಾಧ್ಯಮ, ಆಂಗ್ಲ ಮಾಧ್ಯಮದ ಕೆಲ ಪಠ್ಯಪುಸ್ತಕಗಳು ಇನ್ನೂ ಬಂದಿಲ್ಲ. ಹೀಗಾಗಿ ಇನ್ನು ಅರ್ಧದಷ್ಟು ಪಠ್ಯಪುಸ್ತಕಗಳು ಪೂರೈಕೆ ಆಗಬೇಕಾಗಿರುವುದರಿಂದ ಬಂದಿರುವ ಪಠ್ಯಪುಸ್ತಕಗಳನ್ನು ಹಂಚುವುದು ಎಂದುವುದು ಗೊಂದಲಮಯವಾಗಿದೆ.

ಅನುದಾನ ಬಿಡುಗಡೆಗೆ ಆದೇಶ:

ಎಲ್ಲ ಶಾಲೆಗಳಲ್ಲಿ ಶಾಲಾ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ. ಈಗಾಗಲೇ ಶೈಕ್ಷಣಿಕ ಚಟುವಟಿಕೆಗಳು ನಡೆಯಲು ಬೇಕಾದ ಅಗತ್ಯ ಕ್ರಮಗಳನ್ನು ಇಲಾಖೆಯ ಕೈಗೊಂಡಿದೆ. ಎಲ್ಲ ವಲಯದ ಶಾಲಾ ಮುಖ್ಯ ಶಿಕ್ಷಕರ ಸಭೆ ಕರೆದು ಶಾಲೆಗೆ ಮೂಲಭೂತ ಸೌಲಭ್ಯ ಸೇರಿದಂತೆ ಯಾವುದೇ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಎಲ್ಲ ಶಾಲೆಗಳಿಗೆ ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ. ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡಲು ಆಯಾ ಕ್ಲಸ್ಟರ್‌ಗಳಿಗೆ ವಿತರಿಸಲಾಗುತ್ತಿದೆ. ಆಯಾ ಕ್ಲಸ್ಟರ್ ಸಿಆರ್‌ಪಿಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸುತ್ತಾರೆ. ಶಿಕ್ಷಣ ಇಲಾಖೆಯ ಆಯುಕ್ತರು ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿ ಮಾಡಲು ಆಯಾ ಶಾಲೆಯ ಮುಖ್ಯಗುರುಗಳಿಗೆ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ.

---

ಕೋಟ್‌

ಶಿಕ್ಷಣ ಇಲಾಖೆಯ ಆಯುಕ್ತರು ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ಖರೀದಿ ಮಾಡಲು ಆಯಾ ಶಾಲೆಯ ಮುಖ್ಯಗುರುಗಳಿಗೆ ಅನುದಾನ ಬಿಡುಗಡೆ ಮಾಡಲು ಆದೇಶ ಮಾಡಿದ್ದಾರೆ. ಇಲಾಖೆಯ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಮಾಡಿದೆ. ಈ ಪುಸ್ತಕದಲ್ಲಿ ಬರುವ ಶೈಕ್ಷಣಿಕ ಅವಧಿಯಲ್ಲಿ ಶಾಲೆಯಲ್ಲಿ ಕೈಗೊಳ್ಳಬೇಕಾದ ಎಲ್ಲ ಶೈಕ್ಷಣಿಕ ಚಟುವಟಿಕೆಗಳನ್ನು ಒಳಗೊಂಡಿದೆ. ಇದರಂತೆ ಆಯಾ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು ಕೈಗೊಂಡು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಮುಂದಾಗಬೇಕು. ಗುಣಮಟ್ಟದ ಶಿಕ್ಷಣ ನೀಡುವಂತೆ ಎಲ್ಲ ಶಿಕ್ಷಕರು ಗಮನ ಹರಿಸುವಂತೆ ಈಗಾಗಲೇ ಸೂಚಿಸಲಾಗಿದೆ.

-ವಸಂತ ರಾಠೋಡ, ಕ್ಷೇತ್ರಶಿಕ್ಷಣಾಧಿಕಾರಿ

---

ಅಖಂಡ ತಾಲೂಕಿನಲ್ಲಿ ೧ ರಿಂದ ೧೦ ತರಗತಿಯವರೆಗಿನ ಉಚಿತ ಪಠ್ಯಪುಸ್ತಕ ೮,೬೨,೪೬೬ ಬೇಡಿಕೆ ಪೈಕಿ ೪,೭೧,೫೯೬ (ಶೇ.೫೪.೬೮) ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಮಾರಾಟ ಪಠ್ಯಪುಸ್ತಕ ೧,೯೬,೭೭೧ ಬೇಡಿಕೆ ಪೈಕಿ ೧,೨೧,೨೮೨ (ಶೇ.೭೧.೪೪) ಪೂರೈಕೆಯಾಗಿವೆ. ಇನ್ನೂ ಆಂಗ್ಲ ಮಾಧ್ಯಮ, ಉರ್ದು ಮಾಧ್ಯಮದ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಪೂರೈಕೆಯಾಗಿಲ್ಲ. ಇನ್ನೂ ಪಠ್ಯಪುಸ್ತಕಗಳು ಪೂರೈಕೆಯಾಗಬೇಕಿದೆ.

-ಪಿ.ಬಿ.ದೊಡಮನಿ, ಪಠ್ಯಪುಸ್ತಕ ಪೂರೈಕೆ ಮಾಡುವ ಉಸ್ತುವಾರಿ ಶಿಕ್ಷಕ

---

ಬಾಕ್ಸ್‌

ಆರಂಭೋತ್ಸವದಂದೇ ಪಠ್ಯಪುಸ್ತಕ,

ಸಮವಸ್ತ್ರ ವಿತರಣೆಗೆ ಆದೇಶ

ರಾಜ್ಯದಲ್ಲಿ ಮೇ ೨೯ ರಿಂದ ಶಾಲೆಗಳು ಆರಂಭಗೊಂಡು ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿವೆ. ಮೊದಲ ದಿನ ಶಾಲಾ ಸ್ವಚ್ಛತೆ, ಎರಡನೇ ದಿನ ಶಾಲೆ ಪ್ರವೇಶಕ್ಕೆ ಜಾಥಾ ನಡೆಸಿ ಮೇ ೩೧ ರಂದು ಶಾಲಾ ಆರಂಭೋತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಶಾಲಾ ಆರಂಭೋತ್ಸವದ ದಿನ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಬೇಕೆಂದು ಇಲಾಖೆಯಿಂದ ನಿರ್ದೇಶನವಿದೆ. ಇನ್ನೂ ಕೆಲ ಶಾಲೆಗಳಿಗೆ ಪಠ್ಯಪುಸ್ತಕಗಳು ತಲುಪಬೇಕಿದೆ. ಈಗಾಗಲೇ ಬಹುತೇಕ ಎಲ್ಲ ಶಾಲೆಗಳಿಗೆ ಎರಡು ಜೊತೆ ಸಮವಸ್ತ್ರ ತಲುಪಿಸಲಾಗಿದೆ. ಈಗಾಗಲೇ ಬಂದಿರುವ ಪಠ್ಯಪುಸ್ತಕಗಳ ವಿತರಣೆ ಕಾರ್ಯ ಭರದಿಂದ ಮಾಡುತ್ತಿರುವುದು ಗುರುವಾರ ಪಟ್ಟಣದ ಶಾಸಕರ ಮಾದರಿ ಗಂಡುಮಕ್ಕಳ ಪ್ರಾಥಮಿಕ ಶಾಲೆ ಹಾಗೂ ಹೆಣ್ಣುಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಪಠ್ಯಪುಸ್ತಕ ಸಂಗ್ರಹ ಕೋಣೆಯ ಮುಂಭಾಗ ಕಂಡುಬಂದಿತ್ತು.

---

ಕಳೆದ ವರ್ಷ ಕೂಡಾ ಸಮಸ್ಯೆಯಾಗಿತ್ತು

ಮೇ 31ರಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪ್ರಾರಂಭೋತ್ಸವ ಮಾಡಬೇಕು ಎಂಬ ಆದೇಶವಿದೆ. ಹೀಗಾಗಿ ಶಿಕ್ಷಕ ಸಿಬ್ಬಂದಿ ಮಕ್ಕಳ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಪಠ್ಯಪುಸ್ತಕಗಳು ಪೂರ್ಣ ಪ್ರಮಾಣದಲ್ಲಿ ಪೂರೈಕೆ ಆಗಬೇಕಿತ್ತು. ಆದರೆ, ತಾಲೂಕಿನಲ್ಲಿ ಅರ್ಧ ಮಾತ್ರ ಪೂರೈಕೆ ಮಾಡಿದೆ. ಕಳೆದ ವರ್ಷ ಕೂಡಾ ಪಠ್ಯಪುಸ್ತಕಗಳನ್ನು ಸಮಪರ್ಕವಾಗಿ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತೀವ್ರ ಪರದಾಟ ಅನುಭವಿಸಿ ಶೈಕ್ಷಣಿಕ ಹಿನ್ನೆಡೆ ಅನುಭವಿಸಿದ್ದರು. ಆದರೆ, ಈ ಸಾರಿಯೂ ಪಠ್ಯಪುಸ್ತಕಗಳು ಸಮಪರ್ಕವಾಗಿ ಪೂರೈಕೆ ಆಗದೇ ಇರುವುದು ಖೇದಕರ ಸಂಗತಿ.