ಸಾರಾಂಶ
- 27 ಅಡಿ ಆಳದ ಕೆರೆಯಲ್ಲೀಗ 25.5 ಅಡಿ ನೀರು ಸಂಗ್ರಹ । 2.61 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಕೆರೆ
- - - - ಕಗತೂರು ಗ್ರಾಮದ ಸುತ್ತಮುತ್ತಲ ಗ್ರಾಮಗಳಲ್ಲಿನ ನೂರಾರು ಎಕರೆ ಕೃಷಿಭೂಮಿ ಜಲಾವೃತ- ಹಿನ್ನೀರು ವ್ಯಾಪ್ತಿ ಗ್ರಾಮಗಳ ನೂರಾರು ಎಕರೆ ಕೃಷಿಭೂಮಿ, ಕೆಲ ಬಡಾವಣೆಗಳಿಗೆ ನೀರು ನುಗ್ಗುವ ಸಾಧ್ಯತೆ
- 24 ಗಂಟೆಗಳ ಯಾವುದೇ ಕ್ಷಣದಲ್ಲಿ ಸೂಳೆಕೆರೆ ನೀರು ಕೋಡಿ ಬೀಳುವ ಸಂಭವ- ಕೆರೆಗೆ ಹರಿಯುತ್ತಿರುವ ಹಿರೇಹಳ್ಳ, ಹರಿದ್ರಾವತಿ ಹಳ್ಳ, ಭದ್ರಾ ನಾಲೆ ನೀರು
- ಚನ್ನಗಿರಿ ತಾಲೂಕು, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು, ಸಿರಿಗೆರೆ ಪ್ರದೇಶಗಳಿಗೂ ನೀರು ಪೂರೈಕೆ- - - ಬಾ.ರಾ.ಮಹೇಶ್, ಚನ್ನಗಿರಿ ಕನ್ನಡಪ್ರಭ ವಾರ್ತೆ ಚನ್ನಗಿರಿ
ಸತತ ಮಳೆಯಿಂದಾಗಿ ಏಷ್ಯಾದಲ್ಲೇ 2ನೇ ಅತಿ ದೊಡ್ಡ ಕೆರೆ ಎನಿಸಿರುವ ಚನ್ನಗಿರಿ ತಾಲೂಕಿನ ಸೂಳೆಕೆರೆ ಸಂಪೂರ್ಣ ತುಂಬಿದ್ದು, ಕೋಡಿ ಬೀಳಲು ಕೇವಲ ಒಂದೂವರೆ ಅಡಿಯಷ್ಟು ಮಾತ್ರ ಬಾಕಿಯಿದೆ. ಶಾಂತಿ ಸಾಗರ ಎಂದೂ ಕರೆಯಲಾಗುವ ಈ ಸೂಳೆಕೆರೆ, 2021-22ರಲ್ಲಿ ಕೋಡಿ ಬಿದ್ದಿತ್ತು. ಆದರೆ, 2023ರಲ್ಲಿ ಮಳೆ ಕೊರತೆಯಿಂದ ಕೆರೆ ಸಂಪೂರ್ಣ ಸೊರಗಿತ್ತು.ಸೂಳೆಕೆರೆಯ ವಿಸ್ತೀರ್ಣ 539.13 ಚದರ ಮೈಲಿಯಷ್ಟು ವಿಸ್ತರಿಸಿಕೊಂಡಿದ್ದು, 27 ಅಡಿಯಷ್ಟು ಆಳ ಹೊಂದಿದೆ. ಈಗಾಗಲೇ 24.5 ಅಡಿಯಷ್ಟು ನೀರು ಸಂಗ್ರಹವಾಗಿದೆ. ಸೂಳೆಕೆರೆಗೆ ಜಲ ಸಂಪನ್ಮೂಲವಾಗಿರುವ ಹಿರೇಹಳ್ಳ ಮತ್ತು ಹರಿದ್ರಾವತಿ ಹಳ್ಳದ ನೀರು ಕೆರೆಗೆ ರಭಸವಾಗಿ ಹರಿದುಬರುತ್ತಿದೆ. ಇದರಿಂದ ಮತ್ತು ಕೆರೆಯ ಪಕ್ಕದಲ್ಲಿಯೇ ಹಾದುಹೋಗಿರುವ ಭದ್ರಾನಾಲೆಯ ನೀರು ಸೇರುತ್ತಿರುವುದರಿಂದ 24 ಗಂಟೆಗಳ ಯಾವುದೇ ಕ್ಷಣದಲ್ಲಾದರೂ ಸೂಳೆಕೆರೆ ನೀರು ಕೋಡಿ ಬೀಳಲಿದೆ.
ಈಗಾಗಲೇ ಕಗತೂರು ಗ್ರಾಮದ ಸುತ್ತಮುತ್ತಲ ಗ್ರಾಮಗಳಲ್ಲಿನ ನೂರಾರು ಎಕರೆ ಕೃಷಿಭೂಮಿ ಜಲಾವೃತವಾಗಿದೆ. ಕೆರೆಯಲ್ಲಿ 2.61 ಟಿ.ಎಂ.ಸಿ. ನೀರು ಹಿಡಿಯುವ ಸಾಮಥ್ಯವಿದೆ. ಈಗಾಗಲೇ 27 ಅಡಿಗಳ ಪೂರ್ಣಮಟ್ಟ ತುಂಬುವ ಹಂತದಲ್ಲಿದೆ. ಈ ಕೆರೆಯ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಕೆರೆಗೆ ಅಧಿಕ ನೀರು ಹರಿದುಬರುತ್ತಿದೆ.ಕೆರೆಯ ಹಿನ್ನೀರಿನ ದಡಗಳಲ್ಲಿ ಕಗತೂರು, ಅರಶಿನಘಟ್ಟ, ಬಸವರಾಜಪುರ, ಸೇವಾನಗರ, ಕೆರೆಬಿಳಚಿ, ಸೋಮಲಾಪುರ, ಜಕ್ಕಲಿ, ಗೊಲ್ಲರಹಳ್ಳಿ, ಚಿಕ್ಕೂಡ, ರಾಮಗೊಂಡನಹಳ್ಳಿ, ಇಟ್ಟಿಗೆ, ಹಿರೇಉಡ, ಕೊಂಡದಹಳ್ಳಿ, ನಿಂಬಾಪುರ ಗ್ರಾಮಗಳಿವೆ. ಈ ಗ್ರಾಮದ ನೂರಾರು ಎಕರೆ ಕೃಷಿಭೂಮಿ ಮತ್ತು ಕೆಲ ಬಡಾವಣೆಗಳಿಗೆ ನೀರು ನುಗ್ಗುವ ಹಂತದಲ್ಲಿದೆ. ಈ ಬಗ್ಗೆ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮಗಳನ್ನು ವಹಿಸಿ, ಸೂಳೆಕೆರೆ ಅಚ್ಚುಕಟ್ಟು ಪ್ರದೇಶಗಳಿಗೆ ಭೇಟಿ ನೀಡಿ ಜನರು ಅಗತ್ಯ ಮುಂಜಾಗ್ರತೆ ವಹಿಸುವಂತೆ ಮಾಡಬೇಕಾಗಿದೆ.
ಸೂಳೆಕೆರೆಯ ನೀರು ಚನ್ನಗಿರಿ ತಾಲೂಕು ಸೇರಿದಂತೆ ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು, ಸಿರಿಗೆರೆ ಪ್ರದೇಶಗಳಿಗೂ ಕುಡಿಯುವ ನೀರಿನ ಪೂರೈಸುವ ಜಲಮೂಲವಾಗಿದೆ. ಅಲ್ಲದೇ, ನೂರಾರು ಎಕರೆಗಳ ಬೆಳೆಗಳಿಗೆ ನೀರುಣಿಸುವ ಬೃಹತ್ ಕೆರೆಯಾಗಿರುವ ಸೂಳೆಕೆರೆ ಈ ಭಾಗದ ಜನರ ಜೀವಸೆಲೆಯೂ ಆಗಿದೆ.- - -
ಬಾಕ್ಸ್ * ಸೂಳೆಕೆರೆ ಒತ್ತುವರಿ ಜಾಗ ಸರ್ವೆಗೆ ಸರ್ಕಾರಕ್ಕೆ ವರದಿ ಬೃಹತ್ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯ್ ಪ್ರತಿಕ್ರಿಯಿಸಿ, ಕೆರೆಗೆ ಸಂಬಂಧಪಟ್ಟ ಜಾಗವನ್ನು ಸುತ್ತಮುತ್ತಲ ಗ್ರಾಮದ ಜನರು ಒತ್ತುವರಿ ಮಾಡಿಕೊಂಡಿದ್ದಾರೆ. ಕೆರೆಗೆ 23 ಅಡಿ ನೀರು ಬರುತ್ತಿದ್ದಂತೆಯೇ ಕೆರೆ ಇರುವಿಕೆಯ ಜಾಗವನ್ನು ನೀರು ಆವರಿಸುವ ಮೂಲಕ ಕೆರೆಯೇ ಗಡಿಯನ್ನು ಗುರುತಿಸಿಕೊಳ್ಳುತ್ತಿದೆ. ಕೆರೆ ಜಾಗವನ್ನು ಸರ್ವೆ ಮಾಡಲು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದಿದ್ದಾರೆ. ಇತಿಹಾಸ ಹಿನ್ನೆಲೆ ಹೊಂದಿರುವ ಸೂಳೆಕೆರೆಗೆ ಸಂಬಂಧಪಟ್ಟಂತೆ ಕೆರೆಯ ಅಚ್ಚುಕಟ್ಟು ಪ್ರದೇಶ, ನೀರಿನ ಸಂಗ್ರಹಣೆ ಸಾಮರ್ಥ್ಯ, ಕೆರೆಯ ಆಳ ಮತ್ತು ಅಗಲ, ಈ ಬಗ್ಗೆ ವಿಚಾರ ತಿಳಿಸುವ ನಾಮಫಲಕವನ್ನು ಸಾರ್ವಜನಿಕರ ಮಾಹಿತಿಗಾಗಿ ಅಳವಡಿಸಲು ಸಹ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಅಭಿಯಂತರರು ತಿಳಿಸಿದ್ದಾರೆ.- - - -22ಕೆಸಿಎನ್‌ಜಿ4: ಸತತ ಮಳೆಯಿಂದ ಭರ್ತಿಯಾಗಿರುವ ಸೂಳೆಕೆರೆ ಕೋಡಿ ಬೀಳುವ ಹಂತದಲ್ಲಿದೆ.