ಸಾರಾಂಶ
ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)
ನೇಕಾರ ಕಾಯಕದ ೨೧ ಪಂಗಡಗಳು ಸೇರಿಕೊಂಡು ನೇಕಾರ ಒಕ್ಕೂಟ ರಚನೆಗೊಂಡಿದ್ದು, ಸರ್ಕಾರಗಳ ಗಮನ ಸೆಳೆಯಲು ಕಡಿಮೆ ಜನಸಂಖ್ಯೆಯ ಅಶಕ್ತ ಸಮುದಾಯಗಳು ಸಂಘಟನೆ ಮತ್ತು ಸಾಮಾಜಿಕ ನ್ಯಾಯದ ತಳಹದಿಯಲ್ಲಿ ತಮ್ಮ ಸಮುದಾಯಕ್ಕೆ ಬೇಕಿರುವ ಸೌಲಭ್ಯಗಳನ್ನು ಸರ್ಕಾರದಿಂದ ಪಡೆಯಲು ಸಾಧ್ಯವಿದೆ ಎಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ ಹೇಳಿದರು.ಕರ್ನಾಟಕ ರಾಜ್ಯ ನೀಲಗಾರ ಸಮಾಜ ತೆರದಾಳ ಘಟಕ ಹಮ್ಮಿಕೊಂಡಿದ್ದ 8ನೇ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯದ ವಿವಿಧ ಪ್ರದೇಶಗಳಲ್ಲಿ ನೇಕಾರ ಮತದಾರರು ೬೦ ಲಕ್ಷಕ್ಕೂ ಅಧಿಕವಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಮತ್ತು ಬದಾಮಿ ಕ್ಷೇತ್ರಗಳಲ್ಲೂ ನೇಕಾರರು ನಿರ್ಣಾಯಕ ಸಂಖ್ಯೆಯಲ್ಲಿದ್ದರೂ ಇದೂವರೆಗೆ ರಾಜಕೀಯವಾಗಿ ನ್ಯಾಯ ಸಿಕ್ಕಿಲ್ಲ. ಒಂದು ಬಾರಿ ಮಾತ್ರ ಉಮಾಶ್ರೀಗೆ ಬೆಂಬಲಿಸಿದ್ದಾರೆ. ಮರಳಿ ಟಿಕೆಟ್ ಸಿಗಲಿಲ್ಲ. ಇದು ನೇಕಾರ ಸಮಾಜದಲ್ಲಿನ ಉಪಪಂಗಡಗಳಲ್ಲಿ ಸಂಘಟನೆಯ ಕೊರತೆ ಎತ್ತಿ ತೋರುತ್ತದೆ ಎಂದರು.
ನಮಗೆ ನ್ಯಾಯೋಚಿತವಾಗಿ ಸಿಗಬೇಕಾದ ಸೌಲಭ್ಯಗಳನ್ನು ನೀಡಲು ಸರ್ಕಾರ ಮುಂದಾಗುತ್ತಿಲ್ಲ. ಬೊಮ್ಮಾಯಿಯವರು ಸಿಎಂ ಆಗಿದ್ದಾಗ ನೇಕಾರ ಅಭಿವೃದ್ಧಿ ನಿಗಮ ಘೋಷಿಸಿದ್ದು ಬಿಟ್ಟರೆ ನಯಾಪೈಸೆ ಅನುದಾನ ನಿಗಮಕ್ಕೆ ದೊರಕಲಿಲ್ಲ. ನೇಕಾರ ಅಭಿವೃದ್ದಿ ನಿಗಮಕ್ಕೆ ಕನಿಷ್ಟ ₹ ೫೦ಕೋಟಿ ಅನುದಾನದ ಅಗತ್ಯವಿದೆ ಎಂದ ಅವರು, ಏಪ್ರಿಲ್‌ನಲ್ಲಿ ನೇಕಾರಿಕೆ ಪೂರಕ ಸಮುದಾಯಗಳಾದ ನೀಲಗಾರ, ಹಟಗಾರ ಸಮುದಾಯಗಳನ್ನು ಒಕ್ಕೂಟದಲ್ಲಿ ಸೇರ್ಪಡೆಗೊಳಿಸಲಾಗುವುದೆಂದು ಸೋಮಶೇಖರ ಘೋಷಿಸಿದರು.ಸಮಾವೇಶ ಉದ್ಘಾಟಿಸಿದ ಶಾಸಕ ಸಿದ್ದು ಸವದಿ, ಜಾತಿಗಣತಿ ದುರುದ್ದೇಶದಿಂದ ಕೂಡಿದ್ದು, ವೀರಶೈವ-ಲಿಂಗಾಯತ ಜಾತಿಯ ಉಪಪಂಗಡಗಳನ್ನು ಪ್ರತ್ಯೇಕವಾಗಿ ಗುರುತಿಸುವ ಮೂಲಕ ಸಂಖ್ಯಾಬಲ ಕ್ಷೀಣವಾಗುವಂತೆ ನೋಡುವ ಹುನ್ನಾರ ಅಡಗಿದೆ. ರಾಜ್ಯದಲ್ಲಿ ೨.೫ ಕೋಟಿಗೂ ಹೆಚ್ಚು ಲಿಂಗಾಯತರಿದ್ದಾರೆ. ಉಪಜಾತಿಗಳಿಂದಾಗಿ ಸಂಖ್ಯಾಬಲದಲ್ಲಿ ಭಾರೀ ವ್ಯತ್ಯಾಸವಾಗುತ್ತದೆ. ಸರ್ಕಾರವೇ ಮುಂದೆ ನಿಂತು ಇಂಥ ಷಡ್ಯಂತ್ರ್ಯ ರೂಪಿಸಿರುವುದು ಖಂಡನೀಯ ಎಂದರು.
ಕೆಪಿಸಿಸಿ ಕಿಸಾನ್ ಘಟಕದ ರಾಜ್ಯ ಸಂಚಾಲಕ, ರಾಜ್ಯ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಮಾತನಾಡಿ, ಸಮಾಜ ಸಂಘಟನೆ ವೃದ್ಧಿಸಿಕೊಂಡಲ್ಲಿ ಶೈಕ್ಷಣಿಕ, ರಾಜಕೀಯ ಪ್ರಾಶಸ್ತ್ಯ ಪಡೆಯಲು ಮತ್ತು ಸಮುದಾಯದ ಜನತೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯ. ಕ್ಷೇತ್ರದಲ್ಲಿನ ನೀಲಗಾರ ಸಮಾಜದ ಸಮುದಾಯಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ₹ 10ಕೋಟಿ ಅನುದಾನ ಒದಗಿಸಲು ಮತ್ತು ಮುಂದಿನ ರಾಜ್ಯಮಟ್ಟದ ಸಮಾವೇಶಕ್ಕೆ ವೈಯಕ್ತಿಕವಾಗಿ ₹ 1 ಲಕ್ಷ ನೀಡುವ ಭರವಸೆ ನೀಡಿದರು.ಚಿಕ್ಕಾಲಗುಂಡಿ ಶಿವಶರಣಾನಂದ ಶ್ರೀ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಗೌರವಾಧ್ಯಕ್ಷ ಶಿವಾನಂದ ಶಿರೋಳ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗಣೇಶ ಜಯರಾಮ, ಶಿವಾನಂದ ನಿವರಗಿ, ಜಯಶ್ರೀ ಶಿರೋಳ, ಆರತಿ ಸೋರಗಾಂವಿ, ಶಾಂತಾ ಮಂಡಿ, ರಾಜೇಶ ಗುಳೇದಗುಡ್ಡ ಡಾ,.ಪ್ರದೀಪ ಹನಗಂಡಿ ವೇದಿಕೆಯಲ್ಲಿದ್ದರು.
ಪ್ರೊ.ಚಂದ್ರಕಾಂತ ಹೊಸೂರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಾಡಿದರು. ಅಪೂರ್ವ ಸೋರಗಾಂವಿ ನಿರೂಪಿಸಿದರು. ಸಮಾರಂಭದಲ್ಲಿ ಅಶೋಕ ವಿಜಾಪುರ, ಬಾಬು ಸೋರಗಾಂವಿ, ಗಂಗಾಧರ ಹುಲ್ಯಾಳ, ವೀರೇಂದ್ರ ಸೋರಗಾವಿ, ಈರಪ್ಪ ಯಾದವಾಡ, ಪರಪ್ಪ ನೀಲವಾಣಿ, ಅಶೋಕ ಮಹಾಲಿಂಗಪುರ, ಕೈಲಾಸಪತಿ ನೀಲವಾಣಿ, ಹನುಮಂತ ನೀವರಗಿ, ಆರತಿ ಶಿರೋಳ ಸೇರಿದಂತೆ ಸಹಸ್ರಾರು ಜನರು ಉಪಸ್ಥಿತರಿದ್ದರು.