ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಉಳಿಯುತ್ತದೆ ಎಂದು ಶ್ರೀ ಸಿದ್ದಾರ್ಥ ಗೌತಮ ಗ್ರಾಮಾಂತರ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾಗಿದ್ದ ಉಮೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ ನಾವು ಗಳಿಸಿದ ಆಸ್ತಿ, ಅಂತಸ್ತು, ಸಂಪತ್ತು ಯಾವುದೂ ಕೊನೆಯವರೆಗೂ ಉಳಿಯೊಲ್ಲ. ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಉಳಿಯುತ್ತದೆ ಎಂದು ಶ್ರೀ ಸಿದ್ದಾರ್ಥ ಗೌತಮ ಗ್ರಾಮಾಂತರ ಪ್ರೌಢ ಶಾಲೆ ಮುಖ್ಯ ಶಿಕ್ಷಕರಾಗಿದ್ದ ಉಮೇಶ್ ಹೇಳಿದರು. ಅವರು ಭಾನುವಾರ ತಾಲೂಕಿನ ಗಿಡಗನಹಳ್ಳಿಯ ಸಮುದಾಯ ಭವನದಲ್ಲಿ ಶ್ರೀ ಸಿದ್ದಾರ್ಥ ಗೌತಮ ಗ್ರಾಮಾಂತರ ಪ್ರೌಢ ಶಾಲೆಯ ೨೦೦೦-೦೧ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ೨೫ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿದರು. ಜೀವನದಲ್ಲಿ ಗುರಿ, ಚಲ, ಗುರುವಿನ ಆಶೀರ್ವಾದ ಇದ್ದರೆ ಮಾತ್ರವೇ ವಿದ್ಯೆ ಕಲಿತು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ವಿಜ್ಞಾನ ತಂತ್ರಜ್ಞಾನ ಮುಂದುವರಿದ ಈ ಕಾಲದಲ್ಲಿ ವಿಶ್ವವೇ ಒಂದು ಗ್ರಾಮದಂತಾಗಿದೆ. ಉದ್ಯೋಗ ಇನ್ನಿತರೆ ಕಾರಣಗಳಿಗಾಗಿ ಹುಟ್ಟಿದ ಊರು ಬಿಟ್ಟು ಬೇರೆಲ್ಲೋ ನೆಲೆಸಿದವರು. ತಮ್ಮ ದಿನನಿತ್ಯದ ಒತ್ತಡ ಜೀವನದಲ್ಲಿ ಹುಟ್ಟಿದ ಊರು, ಹೆತ್ತವರು, ಅಕ್ಷರ ಕಲಿಸಿದ ಗುರುಗಳನ್ನು ನೆನೆಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಿರಿಯ ವಿದ್ಯಾರ್ಥಿಗಳೆಲ್ಲರನ್ನೂ ಒಟ್ಟುಗೂಡಿಸುವ, ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕುವಂತಹ ಸುಂದರ ಕ್ಷಣಗಳಿಗೆ ಸಾಕ್ಷಿಯಾದ ಇಂತಹ ಕಾರ್ಯಕ್ರಮಗಳು ಪ್ರಸ್ತುತ ದಿನಮಾನಗಳಲ್ಲಿ ಅಗತ್ಯವಿದೆ. ಆ ಮೂಲಕ ಹಳೆಯ ಮೆಲುಕು ಹಾಕಲು ಸಾಧ್ಯವಾಗುತ್ತದೆ ಎಂದರು.

ನಿವೃತ್ತ ಶಿಕ್ಷಕರಾದ ಹನುಮಂತರಾಯಪ್ಪ ಮಾತನಾಡಿ, ಗುರುಗಳು ಶಿಷ್ಯರ ಭವಿಷ್ಯ ರೂಪಿಸುತ್ತಾರೆ ಮತ್ತು ಅಂಧಕಾರವನ್ನು ದೂರ ಮಾಡುವ ಮಾರ್ಗದರ್ಶಕರಾಗಿರುತ್ತಾರೆ. ಗುರುವಂದನಾ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಗುರುಗಳ ಋಣ ತೀರಿಸುವ ಭಾವನೆಯನ್ನು ಬೆಳೆಸುತ್ತದೆ ಎಂದರು.ಕಾರ್ಯಕ್ರಮದಲ್ಲಿ ೨೦೦೦-೦೧ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಂಡಪ್ಪ, ಹನುಮಂತರಾಯಪ್ಪ, ಕೃಷಮೂರ್ತಿ, ಮಲ್ಲಿಕಾರ್ಜುನ, ರಾಜಣ್ಣ, ಪತ್ರಕರ್ತ ದೇವರಾಜು, ಗೋವಿಂದಪ್ಪ ಶಿವಲಿಂಗಪ್ಪ, ನಾಗರಾಜ್, ನಿವೃತ್ತ ಶಿಕ್ಷಕರು ಹಾಗೂ ಕಲಾವಿದರಾದ ಕೆಂಪರಾಜು, ಮುಖಂಡರಾದ ರಂಗನಾಥ್, ಗ್ರಾ.ಪಂ. ಸದಸ್ಯರಾದ ರಾಧ ಸ್ವಾಮಿ, ಆರ್.ಕೆ.ರಂಗನಾಥ್, ಹಳೆಯ ವಿದ್ಯಾರ್ಥಿಗಳಾದ ಕುಸುಮ ಜಯರಾಮ್, ಶ್ರೀರಂಗಯ್ಯ, ಎಚ್, ಭಾಗ್ಯ ರಾಜ್, ಉಲ್ಗಭೋವಿ, ಉಮೇಶ್, ರಾಧ, ಭಾಗ್ಯ ಎಸ್, ಶಿವಪ್ರಸಾದ್, ಗೋವಿಂದಪ್ಪ ಸೇರಿದಂತೆ ಹಲವರು ಹಾಜರಿದ್ದರು.