ವಿಧಿಯಾಟದಲ್ಲಿ ಅರ್ಹರು ಮಾತ್ರ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗ್ತಾರೆ : ಸಚಿವ ಶಿವಾನಂದ ಪಾಟೀಲ

| N/A | Published : Feb 04 2025, 12:32 AM IST / Updated: Feb 04 2025, 12:07 PM IST

ವಿಧಿಯಾಟದಲ್ಲಿ ಅರ್ಹರು ಮಾತ್ರ ಮುಖ್ಯಮಂತ್ರಿ, ಪ್ರಧಾನಮಂತ್ರಿ ಆಗ್ತಾರೆ : ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

  ಬಸವನಬಾಗೇವಾಡಿ ನನಗೂ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಆಸೆಯಿರುತ್ತದೆ. ಆದರೆ, ಅರ್ಹರು ಪ್ರಧಾನಿಯೋ ಅಥವಾ ಮುಖ್ಯಮಂತ್ರಿ ಆಗುತ್ತಾರೆ ಎಂದು   ಸಚಿವ ಶಿವಾನಂದ ಪಾಟೀಲ ಹೇಳಿದರು.

 ಬಸವನಬಾಗೇವಾಡಿ : ನನಗೂ ಸೇರಿದಂತೆ ಎಲ್ಲರಿಗೂ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗುವ ಆಸೆಯಿರುತ್ತದೆ. ಆದರೆ, ಅರ್ಹರು ಪ್ರಧಾನಿಯೋ ಅಥವಾ ಮುಖ್ಯಮಂತ್ರಿ ಆಗುತ್ತಾರೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಿ.ವ್ಹಿ.ಕಿರಸೂರ ಅವರ ವಯೋನಿವೃತ್ತಿ ಪ್ರಯುಕ್ತ ಹಮ್ಮಿಕೊಂಡಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯನು ಎಷ್ಟೇ ಆಸೆ ಹೊಂದಿದ್ದರೂ ಭಗವಂತನು ಅವನು ಏನು ಆಗಬೇಕೆಂದು ನಿರ್ಧಾರ ಮಾಡಿರುತ್ತಾನೋ ಅದೇ ಅಗುತ್ತದೆ. ಕೆಲವೊಮ್ಮೆ ಅರ್ಹರು ಮುಖ್ಯಮಂತ್ರಿ, ಪ್ರಧಾನಮಂತ್ರಿ ಸೇರಿದಂತೆ ಕೆಲ ಹುದ್ದೆಗಳು ಸಿಗುವುದಿಲ್ಲ. ಇದು ವಿಧಿಯಾಟ. ವ್ಯಕ್ತಿ ಬದುಕಿನಲ್ಲಿ ಅನೇಕ ಮೆಟ್ಟಿಲು ಏರುತ್ತಾನೆ. ಕೆಲವೊಮ್ಮೆ ಇಳಿಯುತ್ತಾನೆ. ಜೀವನದಲ್ಲಿ ಏರಿಳಿತ ಇರುತ್ತದೆ. ಕೆಲವರ ಜೀವನದಲ್ಲಿ ಮಾತ್ರ ಸದಾ ಏರಿಕೆಯಾಗುವುದನ್ನು ಕಾಣುತ್ತೇವೆ ಎಂದರು.

ದೇಶ ಕಟ್ಟುವಲ್ಲಿ ಅಭಿಯಂತರರ ಪಾತ್ರ ಹಿರಿದು. ನಾಡಿನಲ್ಲಿ ಸಾಕಷ್ಟು ಅಭಿಯಂತರರು ನೀಡಿದ ಸೇವೆ ಸದಾ ಸ್ಮರಣೀಯ. ಅದರಲ್ಲಿಯೂ ಡಾ.ವಿಶ್ವೇಶ್ವರಯ್ಯ. ಬಾಳೆಕುಂದ್ರಿಯಂತಹ ಅಭಿಯಂತರರು ಸದಾ ಕಿರಿಯ ಅಭಿಯಂತರರಿಗೆ ಸ್ಪೂರ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ ನನ್ನ ಅವಧಿಯಲ್ಲಿ ಅನೇಕ ಅಭಿಯಂತರರು ಉತ್ತಮ ಕೆಲಸ ಮಾಡುವ ಮೂಲಕ ಸದಾ ನೆನಪಿನಲ್ಲಿದ್ದಾರೆ ಎಂದು ಸ್ಮರಿಸಿದರು.

ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಮಾತನಾಡಿ, ಮನುಷ್ಯನ ವ್ಯಕ್ತಿತ್ವ ಗುರುತಿಸುವುದು ಅವನು ಮಾಡಿದ ಸೇವೆಯಿಂದ. ನಿವೃತ್ತಿಯಾಗುತ್ತಿರುವ ಜಿ.ವ್ಹಿ.ಕಿರಸೂರ ಅವರು ಬದ್ಧತೆಯಿಂದ ಕಾರ್ಯನಿರ್ವಹಿಸುವ ಜೊತೆಗೆ ಎಲ್ಲರೊಂದಿಗೆ ಉತ್ತಮ ಬಾಂಧವ್ಯವಿಟ್ಟುಕೊಂಡು ಕಾರ್ಯನಿರ್ವಹಿಸಿದ್ದರಿಂದಾಗಿ ಅವರ ನಿವೃತ್ತಿ ಕಾರ್ಯಕ್ರಮಕ್ಕೆ ಜನತೆ ಸೇರಿದ್ದಾರೆ. ಅದ್ದೂರಿಯಾಗಿ ಬೀಳ್ಕೋಡುಗೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಆಲಮಟ್ಟಿ ಆಣೆಕಟ್ಟಿನ ಅಧೀಕ್ಷಕ ಅಭಿಯಂತರ ವ್ಹಿ.ಆರ್.ಹಿರೇಗೌಡರ ಮಾತನಾಡಿ, ಮನುಷ್ಯನಿಗೆ ಸರ್ಕಾರಿ ನೌಕರಿ ಸಿಗುವದು ಅನಿಶ್ಚಿತವಾದರೆ, ನೌಕರಿ ಸಿಕ್ಕ ನಂತರ ನಿವೃತ್ತಿ ನಿಶ್ಚಿತವಾಗುತ್ತದೆ. ಸರ್ಕಾರಿ ವೃತ್ತಿಯಲ್ಲಿ ನಿಷ್ಠೆಯಿಂದ ಜನರ ಸೇವೆ ಮಾಡುವದು ಬಹಳ ಮುಖ್ಯ. ಸಚಿವ ಶಿವಾನಂದ ಪಾಟೀಲ ಅವರ ನಿರೀಕ್ಷೆಗೆ ತಕ್ಕಂತೆ ಅಧಿಕಾರಿಗಳು ಕಾರ್ಯ ಮಾಡುವುದು ಮುಖ್ಯ ಎಂದರು.

ಜಿ.ವ್ಹಿ.ಕಿರಸೂರ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿ, ನಾನು ೧೯೮೬ರಲ್ಲಿ ಸರ್ಕಾರಿ ಸೇವೆ ಸೇರಿದ ನಂತರ ವಿವಿಧ ಇಲಾಖೆಯಲ್ಲಿ ಅಭಿಯಂತರನಾಗಿ ಪ್ರಾಮಾಣಿಕ ಸೇವೆ ಮಾಡಿದ ತೃಪ್ತಿಯಿದೆ. 1995 ರಲ್ಲಿ ವಿಜಯಪುರ ಜಿಲ್ಲೆಗೆ ಬಂದ ನಂತರ ಇಲ್ಲಿಯವರೆಗೂ ಬೇರೆ ಯಾವುದೇ ಜಿಲ್ಲೆಗೆ ವರ್ಗಾವಣೆಯಾಗಿಲ್ಲ. ಕೋವಿಡ್ ಕಾಲದಲ್ಲೂ ಸಾಕಷ್ಟು ಸೇವೆ ಒದಗಿಸಿದ್ದೇನೆ ಎಂದು ಸ್ಮರಿಸಿದರು.

ನಿವೃತ್ತ ಅಧೀಕ್ಷಕ ಅಭಿಯಂತರ ಎಸ್.ಬಿ.ಪಾಟೀಲ, ಸೋಮನಾಥ ಕೊಳಗೇರಿ ಮಾತನಾಡಿದರು. ಇಲಾಖೆಯ ತಾಂತ್ರಿಕ ಸಲಹೆಗಾರ ಬಿ.ಕೆ.ಜಂಗಮಶೆಟ್ಟಿ, ಕಿರಸೂರ ಕುಟುಂಬಸ್ಥರು, ಗಾಯಕ ವಿರೇಶ ವಾಲಿ ಪ್ರಾರ್ಥಿಸಿದರು. ಸಹಾಯಕ ಅಭಿಯಂತರ ಡಿ.ಬಿ.ಕಲಬುರ್ಕಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಭಜಂತ್ರಿ ಪರಿಚಯಿಸಿದರು. ಶೃತಿ ಜಾಧವ ನಿರೂಪಿಸಿದರು. ನಿವೃತ್ತಿಯಾದ ಜಿ.ವ್ಹಿ.ಕಿರಸೂರ ಅವರನ್ನು ಸಚಿವ ಶಿವಾನಂದ ಪಾಟೀಲ ಸೇರಿದಂತೆ ಲೋಕೋಪಯೋಗಿ ಇಲಾಖೆಯ ಸಿಬ್ಬಂದಿ, ಗುತ್ತಿಗೆದಾರರು, ವಿವಿಧ ಅಭಿಯಂತರರು, ಅಧಿಕಾರಿಗಳು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ನೂತನವಾಗಿ ನಿರ್ಮಿಸಿದ ಲೋಕೋಪಯೋಗಿ ಇಲಾಖೆಯ ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.