ಒಒಡಿ: ಠಾಣೆಗಳಲ್ಲಿ ಠಿಕಾಣಿ ಹೂಡಿದ ಪೊಲೀಸ್‌ ಸಿಬ್ಬಂದಿ!

| Published : Jul 19 2024, 12:50 AM IST

ಒಒಡಿ: ಠಾಣೆಗಳಲ್ಲಿ ಠಿಕಾಣಿ ಹೂಡಿದ ಪೊಲೀಸ್‌ ಸಿಬ್ಬಂದಿ!
Share this Article
  • FB
  • TW
  • Linkdin
  • Email

ಸಾರಾಂಶ

ಒಂದೇ ಠಾಣೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿ ಬೇರೆಡೆಗೆ ಪೊಲೀಸ್‌ ಸಿಬ್ಬಂದಿ ವರ್ಗಾವಣೆ ಆಗಿದ್ದರೂ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಕೆಲವೇ ದಿನಗಳಲ್ಲಿ ಮತ್ತೆ ಅದೇ ಠಾಣೆಗೆ ಮರಳಿ ಬರುತ್ತಿದ್ದಾರೆ. ಇದು ಇದೀಗ ಕೆಲ ಸಿಬ್ಬಂದಿಗಳ ಅಪಸ್ಪರಕ್ಕೆ ಕಾರಣವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಏಕಕಾಲಕ್ಕೆ 203ಕ್ಕೂ ಅಧಿಕ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಆಡಳಿತಕ್ಕೆ ಚುರುಕು ಮುಟ್ಟಿಸಿರುವ ಪೊಲೀಸ್‌ ಕಮಿಷನರ್‌ ಅವರಿಗೆ ಇದೀಗ ಬೇರೆ ಬೇರೆ ಠಾಣೆಗಳಲ್ಲಿ ಒಒಡಿ ಮೇಲೆ (ಎರವಲು ಸೇವೆ) ಇರುವ ಸಿಬ್ಬಂದಿ ಕಣ್ಣಿಗೆ ಕಾಣಿಸುತ್ತಿಲ್ಲವೇ?

ಇಂಥ ಪ್ರಶ್ನೆ ಇದೀಗ ಪೊಲೀಸ್‌ ಕಮಿಷನರೇಟ್‌ನಲ್ಲೇ ಎದ್ದಿದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದೇ ಠಾಣೆಯಲ್ಲಿ ಠಿಕಾಣಿ ಹೂಡಬೇಕು ಎಂಬ ಇರಾದೆಯಿಂದ ಕೆಲ ಸಿಬ್ಬಂದಿಗಳು ಒಒಡಿ ಆದೇಶ ಪಡೆದು ತಮಗೆ ಯಾವುದು ಬೇಕೋ ಆ ಠಾಣೆಗಳಲ್ಲೇ ಠಿಕಾಣಿ ಹೂಡಿರುವುದುಂಟು. ಅಂಥವರಿಗೆ ಬಿಸಿ ಮುಟ್ಟಿಸಿ ಎಂಬುದು ಸಿಬ್ಬಂದಿಗಳ ಒಕ್ಕೊರಲಿನ ಆಗ್ರಹ.

ಆಗಿರುವುದೇನು?:

ಐದು ವರ್ಷಗಳ ಕಾಲ ಒಂದೇ ಠಾಣೆಯಲ್ಲೇ ಕೆಲಸ ಮಾಡಿದ್ದರೆ ಅಂಥ ಪಿಸಿ, ಎಚ್‌ಸಿಗಳನ್ನು ಬೇರೆಡೆ ವರ್ಗ ಮಾಡಬೇಕೆನ್ನುವುದು ಸರ್ಕಾರದ ನಿಯಮ. ಇದನ್ನು ಕಮಿಷನರೇಟ್‌ ಪಾಲನೆಯನ್ನೂ ಮಾಡುತ್ತದೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ 200ಕ್ಕೂ ಅಧಿಕ ಸಿಬ್ಬಂದಿಗಳನ್ನು ವರ್ಗ ಮಾಡಿ ಆದೇಶಿಸಲಾಗಿದೆ.

ಇದೇ ರೀತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಯಾರ್‍ಯಾರು ಒಂದೇ ಠಾಣೆಯಲ್ಲೇ 5 ವರ್ಷ ಕೆಲಸ ನಿರ್ವಹಿಸುತ್ತಿರುತ್ತಾರೋ ಅವರನ್ನು ವರ್ಗಾವಣೆ ಮಾಡಿದ್ದುಂಟು. ಆದರೆ ಮತ್ತೆ ಆ ಸಿಬ್ಬಂದಿಗಳಲ್ಲಿ ಕೆಲವರು ಕೆಲವೇ ದಿನಗಳಲ್ಲೇ ಒಒಡಿ ಆದೇಶ ಪಡೆದು ಮತ್ತೆ ತಮ್ಮ ಹಳೆಯ ಠಾಣೆಗಳಲ್ಲೇ ಕೆಲಸ ನಿರ್ವಹಿಸಲು ಹೋಗುತ್ತಾರೆ.

ಪ್ರತಿ ಠಾಣೆಗಳಲ್ಲುಂಟು:

ಉದಾಹರಣೆಗೆ ಒಂದು ಠಾಣೆಯಲ್ಲಿ ಒಬ್ಬ ಸಿಬ್ಬಂದಿ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಕೆಲಸ ನಿರ್ವಹಿಸುತ್ತಿರುತ್ತಾರೆ. ಆತನನ್ನು ಪೊಲೀಸ್‌ ಕಮಿಷನರೇಟ್‌ನಿಂದ ಬೇರೆ ಠಾಣೆಗೆ ವರ್ಗಾಯಿಸುತ್ತಾರೆ. ಆದರೆ ಆತ ಮತ್ತೆ ಹಳೆಯ ಠಾಣೆಯಲೇ ಕೆಲಸ ನಿರ್ವಹಿಸಬೇಕೆಂದರೆ ಶಾಸಕರದೋ, ಸಚಿವರದೋ ಅಥವಾ ಹಿರಿಯ ಅಧಿಕಾರಿಗಳ ಶಿಫಾರಸ್ಸಿನಿಂದ ಒಒಡಿ ಆದೇಶ ಪಡೆಯುತ್ತಾನೆ. ಮತ್ತೆ ಹಳೆಯ ಠಾಣೆಗೆ ತೆರಳಿ ಕೆಲಸಕ್ಕೆ ಹಾಜರಾಗುತ್ತಾನೆ. ಬರೀ ವರ್ಗಾವಣೆಯ ಆದೇಶ ಮಾತ್ರ ಹೊರಬರುತ್ತದೆ. ಆದರೆ ಒಒಡಿ ಆದೇಶ ಹೊರಬರುವುದೇ ಇಲ್ಲ. ಹೀಗಾಗಿ ಯಾವ ಸಿಬ್ಬಂದಿ ಒಒಡಿಯಡಿ ಠಾಣೆಯಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂಬುದು ಎಲ್ಲರಿಗೂ ಗೊತ್ತಾಗುವುದಿಲ್ಲ. ಇದರಿಂದಾಗಿ ವರ್ಗಾವಣೆಯಾಗಿ ಕೆಲವೇ ದಿನಗಳಲ್ಲಿ ತಮ್ಮ ಶಿಫಾರಸು ಬಳಸಿ ಮರಳಿ ಅದೇ ಠಾಣೆಗೆ ಒಒಡಿ ನೆರವಿನಿಂದ ಬರುವುದರಿಂದ ವರ್ಗಾವಣೆ ಮಾಡಿಯೂ ಉಪಯೋಗವಿಲ್ಲದಂತಾಗುತ್ತದೆ.

ಕಳೆದ ವರ್ಷವಂತೂ ಈ ರೀತಿಯ ಒಒಡಿ ಪ್ರಕರಣಗಳು ಪೊಲೀಸ್‌ ಕಮಿಷನರೇಟ್‌ನಲ್ಲಿ ಸಾಕಷ್ಟು ಪ್ರಕರಣಗಳಿವೆ. ಪ್ರತಿ ಠಾಣೆಯಲ್ಲೂ ಒಒಡಿ ಮೇಲೆ ಕೆಲಸ ಮಾಡುವವರ ಸಂಖ್ಯೆ ಎರಡಾದರೂ ಇದೆ. ಅದರಲ್ಲೂ ಟ್ರಾಫಿಕ್‌ ಠಾಣೆಗಳಲ್ಲಿ ಇದು ಇನ್ನು ಜಾಸ್ತಿಯಿದೆ ಎಂದು ಮೂಲಗಳು ತಿಳಿಸುತ್ತವೆ.

ನಿಜವಾಗಿ ಪೊಲೀಸ್‌ ಕಮಿಷನರೇಟ್‌ ಆಡಳಿತಕ್ಕೆ ಬಿಸಿ ಮುಟ್ಟಿಸಬೇಕೆಂದರೆ ಮೊದಲು ಯಾರ್‍ಯಾರು ಒಒಡಿ ಮೇಲೆ ಯಾವ್ಯಾವ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೋ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಬೇಕು. ಅವರಿಗೆ ಯಾವ ಠಾಣೆಗೆ ವರ್ಗವಾಗಿರುತ್ತದೆಯೋ ಅಲ್ಲಿಗೇ ಕಳುಹಿಸಬೇಕು. ಅಂದಾಗ ಮಾತ್ರ ಅಪರಾಧ ಪ್ರಕರಣಗಳು ಕಡಿಮೆಯಾಗುತ್ತವೆ. ಆಡಳಿತಕ್ಕೂ ಚುರುಕು ಮುಟ್ಟುತ್ತದೆ ಎಂಬುದು ಪೊಲೀಸ್‌ ಕಮಿಷನರೇಟ್‌ನಲ್ಲಿನ ಕೆಲ ಪ್ರಾಮಾಣಿಕ ಸಿಬ್ಬಂದಿಯ ಅಂಬೋಣ.

ಈ ನಿಟ್ಟಿನಲ್ಲಿ ನೂತನ ಕಮಿಷನರ್‌ ಶಶಿಕುಮಾರ ಕ್ರಮ ಕೈಗೊಳ್ಳುವರೇ? ಕಾಯ್ದು ನೋಡಬೇಕಷ್ಟೇ!