ಸಾರಾಂಶ
ಧಾರವಾಡ:
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧಾರವಾಡ ಜಿಲ್ಲೆಯ ಪಾತ್ರ ಮಹತ್ವದ್ದು. ಜಿಲ್ಲೆಯ ಹೋರಾಟಗಾರರು, ಘಟನೆಗಳು, ಚಳವಳಿ ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೆರವು ನೀಡಿದ ಸಂಘ, ಸಂಸ್ಥೆಗಳ ಕುರಿತು ಜಿಲ್ಲೆಯ ಜನರಲ್ಲಿ, ಯುವ ಸಮೂಹದಲ್ಲಿ ಅರಿವು ಮೂಡಿಸುವ ಮತ್ತು ಸ್ವಾಭಿಮಾನ ಹೆಮ್ಮೆ ಪಡುವಂತೆ ಇತಿಹಾಸ ತೋರಿಸುವ ವಿಶೇಷ ಕಾರ್ಯಕ್ರಮಗಳನ್ನು ಆ. 1ರಿಂದ 14ರ ವರೆಗೆ ಜಿಲ್ಲಾಡಳಿತ ಹಮ್ಮಿಕೊಂಡಿದೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನವಾಗಿದ್ದು, ಜಿಲ್ಲೆಯ ಐತಿಹಾಸಿಕ ಹಿನ್ನೋಟ, ಭವ್ಯ ಭವಿಷ್ಯದ ಮುನ್ನೋಟ ಆಶಯದಲ್ಲಿ ಸ್ವಾತಂತ್ಯೋತ್ಸವದ ಪಾಕ್ಷಿಕ ದಿನಾಚರಣೆ ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ಸ್ವಾತಂತ್ರ್ಯ ಇತಿಹಾಸದ ಪುಟಗಳಲ್ಲಿ ಧಾರವಾಡ ಜಿಲ್ಲೆ ವಿಶೇಷವಾಗಿ ದಾಖಲಾಗಿದೆ. ಅಸಹಕಾರ ಚಳವಳಿಯಿಂದ ಹಿಡಿದು ಚಲೇಜಾವ ಚಳವಳಿ ವರೆಗೆ ಜಿಲ್ಲೆಯ ಅನೇಕ ಮಹನೀಯರು ಭಾಗವಹಿಸಿ, ತಮ್ಮ ಆಸ್ತಿ, ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಹುತಾತ್ಮರ ಸ್ಮಾರಕಗಳು, ಸಂಸ್ಥೆಗಳು ಇಂದಿಗೂ ಇವೆ. ಇವುಗಳ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲೆಯ ಇತಿಹಾಸ, ಸ್ಮಾರಕ, ಶಾಸನ, ಶಿಲ್ಪಕಲೆಗಳ ಬಗ್ಗೆ ಅಧ್ಯಯನ ಮಾಡಿರುವ ಇತಿಹಾಸ ತಜ್ಞರ, ಸಂಶೋಧಕರ ಮತ್ತು ಪ್ರಾಧ್ಯಾಕರ ಸಹಕಾರದಿಂದ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಸಂಘಟಿಸಲು ಚಿಂತಿಸಲಾಗಿದೆ ಎಂದರು.77 ವಿಶೇಷ ಉಪನ್ಯಾಸ:
ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣ, ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ 77ನೇ ಸ್ವಾತಂತ್ರೋತ್ಸವದ ನಿಮಿತ್ತ 77 ವಿಶೇಷ ಉಪನ್ಯಾಸ ಆಯೋಜನೆ, ಪುರಾತತ್ವ ಇಲಾಖೆಯಿಂದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ವಿಶೇಷ ಛಾಯಾಚಿತ್ರ ಪ್ರದರ್ಶನ, ಹೊರಾಟಗಾರರ ಭಾವಚಿತ್ರಗಳ ಪ್ರದರ್ಶನ, ಪಾರಂಪಕರಿಕ ನಡಿಗೆ, ರಂಗಾಯಣದಿಂದ ನಾಟಕ, ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ವಿಶೇಷ ರೂಪಕ, ಹೋರಾಟಗಾರರ ವೇಷ ಭೂಷಣ ಸ್ಪರ್ಧೆ, ಲಾವಣಿ, ಗೀಗಿ, ಹಂತಿ ಹಾಡುಗಳ ಜಾನಪದ ಸ್ವಾತಂತ್ರ್ಯ ವೈಭವ ಮುಂತಾದ ವಿಭಿನ್ನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಅನೇಕರ ಸಲಹೆ ಪ್ರಕಾರ ಧಾರವಾಡ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ನೆನವುಗಳ ಪುಸ್ತಕವನ್ನು ವಿಚಾರ ಸಂಕಿರಣ ಮತ್ತು ವಿಶೇಷ ಉಪನ್ಯಾಸಗಳ ಸಂಕಲನ ಪ್ರಕಟಿಸಲು ಜಿಲ್ಲಾಡಳಿತ ಮುಂದಿನ ದಿನಗಳಲ್ಲಿ ಕ್ರಮವಹಿಸಲಿದೆ ಎಂದು ದಿವ್ಯಪ್ರಭು ಹೇಳಿದರು.ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ, ಮೋಡಿತಜ್ಞ ಡಾ. ಎಂ.ವೈ. ಸಾವಂತ ಮಾತನಾಡಿ, ಸ್ವಾತಂತ್ರ್ಯ ಪೂರ್ವದ ಸಶಸ್ತ್ರ ಬಂಡಾಯದಿಂದ ಚಲೇಜಾವ ಚಳವಳಿ ವರೆಗೆ ಅವಿಭಜಿತ ಧಾರವಾಡ ಜಿಲ್ಲೆ ಪ್ರಮುಖ ಪಾತ್ರ ವಹಿಸಿದೆ. ಈ ಕುರಿತು ಕರಾರುವಕ್ಕು ದಾಖಲೆಗೆ ಜಿಲ್ಲಾಡಳಿತದ ಈ ಪ್ರಯತ್ನ ಸಹಕಾರಿ ಆಗಲಿದೆ. ಸಕ್ರಿಯವಾಗಿ ಭಾಗವಹಿಸಿ, ಸಹಕಾರ ನೀಡುತ್ತೇನೆ ಎಂದರು.
ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಪ್ರೊ. ಈರಣ್ಣ ಪತ್ತಾರ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಲಿದಾನವಾದ ಅನೇಕರ ಸ್ಮಾರಕಗಳು, ಹೋರಾಟಕ್ಕೆ ಸಹಾಯ ಮಾಡಿದ ಅಡುಗುದಾನ ಕಟ್ಟಡಗಳು ಜಿಲ್ಲೆಯಲ್ಲಿವೆ. ಆಧುನಿಕತೆಗೆ ವಾಲಿದರೂ ಅವುಗಳಲ್ಲಿ ಐತಿಹಾಸಿಕತೆ ಕುರುಹು ಸ್ವಲ್ಪ ಮಟ್ಟಿಗಾದರೂ ಉಳಿದಿದೆ. ಸಾಕಷ್ಟು ಸಂದರ್ಭದಲ್ಲಿ ಧಾರವಾಡ ಜಿಲ್ಲೆಯ ಇತಿಹಾಸ ದಾಖಲಿಸುವ ನಮ್ಮ ಪ್ರಯತ್ನ ಪೂರ್ಣಗೊಂಡಿಲ್ಲ. ಈ ಕುರಿತು ಜಿಲ್ಲಾಡಳಿತ ಮುತುವರ್ಜಿ ವಹಿಸಿದ್ದು, ಹೆಮ್ಮೆ ಮೂಡಿಸಿದೆ ಎಂದು ಹೇಳಿದರು.ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಮಂಜುಳಾ ಎಲಿಗಾರ, ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ವಿವಿಧ ಶಾಲಾ ಮಕ್ಕಳಿಂದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ವಿಶೇಷ ರೂಪಕ ಪ್ರದರ್ಶನ ಮತ್ತು ಮೊರಬ, ಉಪ್ಪಿನಬೆಟ್ಟಗೇರಿ, ಹೆಬ್ಬಳ್ಳಿ, ಅದರಗುಂಚಿ ಗ್ರಾಮಗಳಲ್ಲಿ ಸ್ವಾತಂತ್ರ್ಯ ಹೊರಾಟಗಾರರ ಕುರುಹುಗಳಿವೆ. ಅವುಗಳ ಬಗ್ಗೆ ಜಿಲ್ಲೆಯ ಜನರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ಕವಿವಿ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ವಿ.ಎಲ್. ಪಾಟೀಲ, ಸಂಶೋಧಕ ಪ್ರೊ. ಜೆ.ಎಂ. ನಾಗಯ್ಯ, ಕವಿವಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಾರುತಿ, ಜಿಪಂ ಯೋಜನಾ ನಿರ್ದೇಶಕ ದೀಪಕ ಮಡಿವಾಳರ, ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಪ್ರಕಾಶ ಹೊಸಮನಿ, ಡಿಡಿಪಿಯು ಸುರೇಶ ಕೆ.ಪಿ., ಜಾನಪದ ತಜ್ಞ ಡಾ. ರಾಮು ಮೂಲಗಿ, ಜಾನಪದ ಸಂಶೋಧನ ಸಂಸ್ಥೆಯ ವಿಶ್ವೇಶ್ವರಿ ಹಿರೇಮಠ, ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ, ಬಿಇಒ ಅಶೋಕ ಸಿಂಧಗಿ, ಉದಯ ಯಂಡಿಗೇರಿ ಸೇರಿದಂತೆ ರೋಟರಿ, ಲೈನ್ಸ್ ಸಂಸ್ಥೆಯ ಪ್ರತಿನಿಧಿಗಳು ಇದ್ದರು.