ಕರ್ತವ್ಯನಿರತ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ಖಂಡಿಸಿ ಒಪಿಡಿ ಬಂದ್

| Published : Feb 26 2025, 01:05 AM IST

ಸಾರಾಂಶ

ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯ ವಿದ್ಯಾರ್ಥಿ ಮೇಲೆ ಬೆಳಗಿನ ಜಾವ ೨ ಗಂಟೆ ಸಮಯದಲ್ಲಿ ರೋಗಿಯ ಕಡೆಯವರು ಹಲ್ಲೆ ಮಾಡಿರುವುದನ್ನು ಖಂಡಿಸಿ ಓಪಿಡಿ ಸೇವೆ ಬಂದ್ ಮಾಡಿ ಆಸ್ಪತ್ರೆ ಆವರಣದಲ್ಲಿ ಹಿಮ್ಸ್ ಆಸ್ಪತ್ರೆಯ ಸಾತ್ನಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ತೋಳಿಗೆ ಕಪ್ಪು ಪಟ್ಟಿ ಹಾಕಿ ಪ್ರತಿಭಟನೆ ನಡೆಸಿದರು. ವೈದ್ಯ ರಂಜನ್ ಕುಮಾರ ಅವರನ್ನು ಒದ್ದು ಕಪಾಳಮೋಕ್ಷ ಮಾಡಿ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದೇ ರೀತಿ ಮುಂದುವರೆದರೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯ ವಿದ್ಯಾರ್ಥಿ ಮೇಲೆ ಬೆಳಗಿನ ಜಾವ ೨ ಗಂಟೆ ಸಮಯದಲ್ಲಿ ರೋಗಿಯ ಕಡೆಯವರು ಹಲ್ಲೆ ಮಾಡಿರುವುದನ್ನು ಖಂಡಿಸಿ ಓಪಿಡಿ ಸೇವೆ ಬಂದ್ ಮಾಡಿ ಆಸ್ಪತ್ರೆ ಆವರಣದಲ್ಲಿ ಹಿಮ್ಸ್ ಆಸ್ಪತ್ರೆಯ ಸಾತ್ನಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮಂಗಳವಾರ ತೋಳಿಗೆ ಕಪ್ಪು ಪಟ್ಟಿ ಹಾಕಿ ಪ್ರತಿಭಟನೆ ನಡೆಸಿದರು.

ತಡರಾತ್ರಿ ೨ ಗಂಟೆ ಸಮಯದಲ್ಲಿ ಚಿಕಿತ್ಸೆಗೆಂದು ಬಂದಿದ್ದ ಕೆಲ ಯುವಕರು ಚಿಕಿತ್ಸೆ ನೀಡುತ್ತಿರುವಾಗಲೇ ವಿನಾಕಾರಣ ಕ್ಯಾತೆ ತೆಗೆದು ವೈದ್ಯರ ಮೇಲೆ ಹಲ್ಲೆ ಮಾಡಿದ್ದರು. ಚಿಕಿತ್ಸೆಗೆ ಬಂದ ರೋಗಿ ಕಡೆಯವರಿಂದ ಕರ್ತವ್ಯ ನಿರತ ವೈದ್ಯ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ರಾತ್ರಿ ಸುಮಾರು ೨ ಗಂಟೆಯ ಸಮಯದಲ್ಲಿ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ದಿಢೀರ್ ತಮ್ಮ ಕರ್ತವ್ಯ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ನಂತರ ಹೊರ ರೋಗಿ ವಿಭಾಗ ಬಂದ್ ಮಾಡಿ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ಹಾಗೂ ಜಿಲ್ಲಾಧಿಕಾರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ವೈದ್ಯ ರಂಜನ್ ಕುಮಾರ ಅವರನ್ನು ಒದ್ದು ಕಪಾಳಮೋಕ್ಷ ಮಾಡಿ ಹೊಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಇದೇ ರೀತಿ ಮುಂದುವರೆದರೇ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಇದೇ ವೇಳೆ ಸಾತ್ನಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳ ಸಂಘದ ಮುಖಂಡ ಗಗನ್ ಮಾತನಾಡಿ, ತಡರಾತ್ರಿ ವೇಳೆ ಕಾರ್ಯನಿರತ ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಬಂದಿದ್ದ ನಾಲ್ವರು ವೈದ್ಯರಿಗೆ ಪ್ರಶ್ನೆ ಮಾಡಲು ಮುಂದಾಗಿದ್ದು, ಈ ವೇಳೆ ಸ್ವಲ್ಪ ತಡೆಯಿರಿ ಎಂದು ವೈದ್ಯರು ಹೇಳಿದ್ದು, ರೋಗಿಗಳು ಅದನ್ನೇ ಸಹಿಸಲಾಗದೇ ವೈದ್ಯರ ಕಣ್ಣು, ಇತರೆ ಜಾಗಗಳ ಮೇಲೆ ಹಲ್ಲೆ ಮಾಡಿದ ಪರಿಣಾಮ ಚಿಕಿತ್ಸೆಯಲ್ಲಿದ್ದಾರೆ. ಸಮಾಜಕ್ಕೆ ಆರೋಗ್ಯ ಕೊಡುವ ವೈದ್ಯರು ನಾವು. ಆದರೆ ಈಗ ಸಮಾಜಕ್ಕೆ ಆರೋಗ್ಯ ನೀಡುವ ವೈದ್ಯರಿಗೆ ಸಮಸ್ಯೆಗಳಿವೆ. ಜೀವದ ಮೇಲೆ ನಂಬಿಕೆ ಇಲ್ಲದೇ ಜೀವ ಭಯದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು. ಈ ರೀತಿ ಆದರೇ ಜೀವ ಭಯದ ಜೊತೆ ಇನ್ನೊಬ್ಬರ ಜೀವ ಉಳಿಸಲು ಆಗುವುದಿಲ್ಲ. ಮತ್ತೊಂದು ಜೀವ ಉಳಿಸಬೇಕಾದರೇ ಭಯಬಿಟ್ಟು ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಬೇಕು. ನಮ್ಮ ಕೆಲಸದ ವೇಳೆ ನಮ್ಮ ರಕ್ಷಣೆ ನಮ್ಮ ಹಕ್ಕು. ನಮ್ಮ ಆಡಳಿತಾಧಿಕಾರಿಗಳು, ಪೊಲೀಸ್ ಇಲಾಖೆ ಎಲ್ಲರಿಂದ ರಕ್ಷಣೆ ಕೋರುತ್ತೇವೆ. ವೈದ್ಯರ ಮೇಲೆ ಹಲ್ಲೆ ಮಾಡಿದವರ ಮೇಲೆ ಒಂದು ರೀತಿ ಮಾದರಿ ಶಿಕ್ಷೆ ಆಗಬೇಕು. ಮುಂದೆ ಈ ರೀತಿ ಘಟನೆ ನಡೆದರೇ ಅವರಿಗೆ ಗೊತ್ತಾಗಬೇಕು. ಕೇವಲ ಪೇಪರ್, ಬಾಯಿ ಮಾತಿಗೆ ಮುಗಿದು ಹೋಗಬಾರದು ಎಂದು ಹೇಳಿದರು.

ಡಾ. ತೇಜಸ್ ಮಾಧ್ಯಮದೊಂದಿಗೆ ಮಾತನಾಡಿ, ರಾತ್ರಿ ೧:೪೫ರ ಸಮಯದಲ್ಲಿ ನಾಲ್ವರು ಕುಡಿದ ನಶೆಯಲ್ಲಿ ನಮ್ಮ ಬಳಿ ನಡೆದುಕೊಂಡು ಬರುತ್ತಾರೆ. ನಮ್ಮ ವೈದ್ಯರು ಎಮರ್ಜೆನ್ಸಿ ನೋಡಲು ಹೋಗುತ್ತಿರುವ ವೇಳೆ ಈ ನಾಲ್ಕು ಜನ ಎದುರಾಗುತ್ತಾರೆ. ನಮಗೆ ಪೆಟ್ಟು ಆಗಿದೆ ಸ್ವ]ಇಲ್ಪ ನೋಡಿ ಎಂದಾಗ ಒಳಗೆ ಬರಲು ವೈದ್ಯರು ಹೇಳುತ್ತಾರೆ. ಇಷ್ಟಕ್ಕೆ ತಕ್ಷಣ ಏಕವಚನದಲ್ಲಿ ಹಾಗೂ ಅವಾಚ್ಯ ಪದಗಳಿಂದ ಮಾತಾಡಿದರು. ಇದನ್ನ ಕರ್ತವ್ಯ ನಿರತ ವೈದ್ಯರು ಪ್ರಶ್ನೆ ಮಾಡಿದಕ್ಕೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಕೇಳಿದಕ್ಕೆ ಮಹಿಳಾ ವೈದ್ಯರ ಮೇಲೂ ಹಲ್ಲೆ ಮಾಡಿದ್ದಾರೆ ಎಂದು ದೂರಿದರು. ನೀವೆಲ್ಲಾ ಹೊರಗೆ ಬನ್ನಿ ನಿಮ್ಮನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ ಎಂದರು. ಈ ಹಲ್ಲೆ ಎಫ್.ಐ.ಆರ್. ಆಗಿದೆ. ಆದರೆ ಮುಂದೆ ವೈದ್ಯರ ಮೇಲೆ ಯಾರೂ ಹಲ್ಲೆ ಮಾಡಬಾರದು ಆ ರೀತಿ ಅವರ ಮೇಲೆ ಶಿಕ್ಷೆ ವಿಧಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈಗಾಗಲೇ ಪೊಲೀಸರು ಅವರನ್ನೆಲ್ಲಾ ಬಂಧಿಸಿದ್ದಾರೆ ಎಂದು ನಡೆದ ಘಟನೆ ಬಗ್ಗೆ ಮಾಹಿತಿ ನೀಡಿದರು.