ಸಾರಾಂಶ
ಈಗಿನ ಶಿಕ್ಷಣದ ಪದ್ಧತಿಗಳಲ್ಲೂ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆಘಾತಕಾರಿ ತೊಂದರೆಯುಂಟಾಗುವ ಸಾಧ್ಯತೆ ಇದೆ.
ಕನ್ನಡಪ್ರಭ ವಾರ್ತೆ ರಾಮನಗರ
ಇಂಗ್ಲೀಷ್ ಭಾಷೆಯ ವ್ಯಾಮೋಹ ಹಾಗೂ ಪರ ಭಾಷಿಕರ ಹಾವಳಿಯಿಂದಾಗಿ ಕನ್ನಡ ಭಾಷೆಗೆ ಧಕ್ಕೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಪರ ಭಾಷಿಕರಿಗೆ ಕನ್ನಡ ಕಲಿಸುವ ಸಲುವಾಗಿಯೇ ಕನ್ನಡ ಕಲಿಕಾ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಶೈಲೇಶ್ ಕಾಕೋಳು ಅಭಿಪ್ರಾಯಪಟ್ಟರು.ನಗರದ ನ್ಯೂ ಎಕ್ಸ್‌ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕಮತಗಿ ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ ಆಯೋಜಿಸಿದ್ದ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿರುವ ಇತರೆ ಭಾಷಿಕರಿಗೆ ಕನ್ನಡವನ್ನು ಕಲಿಸಿ ಅವರನ್ನು ಕನ್ನಡಿಗರನ್ನಾಗಿಯೇ ಮಾಡಬೇಕಾಗಿದೆ ಎಂದರು.ಈಗಿನ ಶಿಕ್ಷಣದ ಪದ್ಧತಿಗಳಲ್ಲೂ ಕನ್ನಡವನ್ನು ಕಡೆಗಣಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆಘಾತಕಾರಿ ತೊಂದರೆಯುಂಟಾಗುವ ಸಾಧ್ಯತೆ ಇದೆ. ಇಂಗ್ಲಿಷ್ ಶಾಲೆಗಳಲ್ಲಿ ಕನ್ನಡವನ್ನು ಮಾತನಾಡಿದರೆ ದಂಡ ವಿಧಿಸುವ ಕ್ರಮಗಳು ನಡೆಯುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕುವ ಕೆಲಸ ನಡೆಯಬೇಕಿದೆ ಎಂದು ಹೇಳಿದರು.ದಿನೇ ದಿನೇ ಕನ್ನಡದ ಹಲವಾರು ಪದಗಳು ಗ್ರಾಮ್ಯ ಪದಗಳು ಮಾತುಗಳು ನಮ್ಮ ಕಣ್ಣ ಮುಂದೆಯೇ ಮಾಯವಾಗುತ್ತಿವೆ. ಏಕೆಂದರೆ ಆ ಮಾತುಗಳ ಜಾಗಕ್ಕೆ ಇಂಗ್ಲಿಷ್ ಭಾಷೆಯು ಬಂದು ಸೇರಿಕೊಂಡಿದೆ. ಇಂಗ್ಲಿಷ್ ಭಾಷೆಯು ಎಲ್ಲರ ಕನ್ನಡಿಗರ ನಾಲಿಗೆಯಲ್ಲಿ ನಲಿದಾಡುತ್ತಿರುತ್ತದೆ. ಇಂಗ್ಲೀಷ್ ಭಾಷೆಯು ಕನ್ನಡದ ಸ್ಥಾನವನ್ನು ಅಕ್ರಮಿಸಿಕೊಂಡಿದೆ. ಹೀಗಾಗಿ ಕನ್ನಡಿಗರು ಹಾಗೂ ಕನ್ನಡದ ಸಾಹಿತಿಗಳು ಕನ್ನಡಕ್ಕೆ ಹೆಚ್ಚಿನ ಒತ್ತುಕೊಟ್ಟು ಕೆಲಸ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.ಶಾಸ್ತ್ರೀಯ ಸ್ಥಾನಮಾನ ಪಡೆದುಕೊಂಡಿರುವ ಸಂಪದ್ಭರಿತವಾದ ಕನ್ನಡ ಭಾಷೆಯನ್ನು ಸಂರಕ್ಷಿಸಿ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ. ಕನ್ನಡಿಗನು ಕನ್ನಡದ ಮೇಲೆ ಭಾಷಾಭಿಮಾನ ಪ್ರೀತಿ ಗೌರವ ತೋರಿಸುವುದು ಬಹಳ ಅವಶ್ಯಕತೆ ಇದೆ. ಇಲ್ಲದೆ ಹೋದರೆ ಕನ್ನಡ ನಶಿಸುವ ಹಾಗೂ ಇತರೆ ಭಾಷೆಗಳ ಧಾಳಿಗೆ ಸಿಲುಕಿ ಬಲಹೀನವಾಗುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಕರ್ನಾಟಕ ಘನ ಸರ್ಕಾರ ಸಂಘ ಸಂಸ್ಥೆಗಳು, ಈಗಿನಿಂದಲೇ ಕಾರ್ಯ ಪ್ರವೃತ್ತರಾಗಿ ಸಂರಕ್ಷಿಸುವ ಕಾರ್ಯಕ್ಕೆ ಮಗ್ನರಾಗಬೇಕಾಗಿದೆ ಎಂದು ಶೈಲೇಶ್ ಕಾಕೋಳು ಸಲಹೆ ನೀಡಿದರು.ಚುಟುಕು ಸಾಹಿತ್ಯದಿಂದ ಅನುಪಮ ಕೊಡುಗೆ:ಕನ್ನಡ ಸರಸ್ವತ ಲೋಕಕ್ಕೆ ಚುಟುಕು ಸಾಹಿತ್ಯ ತನ್ನದೇ ಆದ ಅನುಪಮ ಕೊಡುಗೆಗಳನ್ನು ಕೊಟ್ಟಿದೆ. ಸಾಹಿತ್ಯದಿಂದ ನಾವು ಕನ್ನಡವನ್ನು ಜಾಗೃತಗೊಳಿಸಬಹುದಾಗಿದೆ. ಅದರಂತೆಯೇ ಚುಟುಕು ಸಾಹಿತ್ಯದಿಂದಲೂ ಸಹ ಹೆಚ್ಚಿನ ಜಾಗೃತಿಯನ್ನು ಮೂಡಿಸಬಹುದಾಗಿದೆ. ಹನಿ ಹನಿ ಗೂಡಿದರೆ ಹಳ್ಳ ಎಂಬಂತೆ ಚುಟುಕುಗಳಿಂದ ಅತ್ಯುನ್ನತವಾದ ಸಾಹಿತ್ಯವನ್ನು ಸರಸ್ವತ ಲೋಕಕ್ಕೆ ನೀಡಬಹುದಾಗಿದೆ ಎಂದು ಹೇಳಿದರು.ಗುರಿವಿನಪುರ ಬ್ರಹನ್ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ, ಶ್ರೀ ನಿರಂಜನ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದರೆ, ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಂ.ಜಿ.ಆರ್.ಅರಸು ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ ಎಂ.ರಮೇಶ್ ಕಮತಗಿ, ಪರಿಷತ್ತಿನ ಬೆಂ.ದಕ್ಷಿಣ ಜಿಲ್ಲಾಧ್ಯಕ್ಷ ಅಂಬರೀಷ್ , ಮೈಸೂರು ಜಿಲ್ಲಾಧ್ಯಕ್ಷೆ ರತ್ನಾ ಹಾಲಪ್ಪಗೌಡ, ಕಾಲೇಜಿನ ಪ್ರಾಚಾರ್ಯ ರವಿಕುಮಾರ್ , ಭಾರತ ವಿಕಾಸ್ ಪರಿಷತ್ ವಾಲ್ಮೀಕಿ ಶಾಖೆ ಅಧ್ಯಕ್ಷ ಎಂ.ಜಗದೀಶ್ , ಕಸಾಪ ತಾಲೂಕು ಅಧ್ಯಕ್ಷ ದಿನೇಶ್ ಬಿಳಗುಂಬ, ಹೇಮಾವತಿ ಅಂಬರೀಷ್ , ಹೇಮಂತ್ ಗೌಡ, ಪೂರ್ಣಚಂದ್ರ, ಅನಂತ ನಾಗ್ , ಜಯಕುಮಾರ್ , ಗಂಗಾಧರ್ ಉಪಸ್ಥಿತರಿದ್ದರು....ಕೋಟ್ ...ಒಂದು ಬೃಹತ್ ಗ್ರಂಥ ಇಲ್ಲವೆ ಒಂದು ಸಮಗ್ರ ಸಾಹಿತ್ಯವು ತಲುಪಲಾರದಷ್ಟು ಜನರನ್ನು ಒಂದು ಚುಟುಕು ತಲುಪುತ್ತದೆ ಎಂದರೆ ಚುಟುಕಿಗೆ ಅಷ್ಟು ಮಹತ್ವವಿದೆ. ಕೇವಲ ನಾಲ್ಕು ಸಾಲು ಇರುವ ಚುಟುಕು ಕವನವು ಸಹಸ್ರಾರು ಜನರನ್ನು ತಲುಪುವ ಶಕ್ತಿ ಸ್ವಾಮ್ಯತೆಯನ್ನು ಪಡೆದುಕೊಂಡಿದೆ. ಚುಟುಕು ಸಾಹಿತ್ಯವೆಂದರೆ ಸುಲಭವಲ್ಲ. ಅದು ಸೌಮ್ಯರೂಪ ರಸ ಅಲಂಕಾರ ಛಂದಸ್ಸು ಗಳನ್ನು ಪಡೆದುಕೊಂಡಿದೆ.- ಡಾ.ಶೈಲೇಶ್ ಕಾಕೋಳು, ಸರ್ವಾಧ್ಯಕ್ಷರು, ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನ.30ಕೆಆರ್ ಎಂಎನ್ .ಜೆಪಿಜಿರಾಮನಗರದ ನ್ಯೂ ಎಕ್ಸ್ ಪರ್ಟ್ ಕಾಲೇಜಿನ ಸಭಾಂಗಣದಲ್ಲಿ ನಡೆದ ದ್ವಿತೀಯ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಡಾ.ಶೈಲೇಶ್ ಕಾಕೋಳು ಸರ್ವಾಧ್ಯಕ್ಷೀಯ ಭಾಷಣ ಮಾಡಿದರು.