ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಯುವತಿಯರು ಮತ್ತು ಪುರುಷರು ಸೇರಿ ಕುಸ್ತಿ ಪದ್ಯದಲ್ಲಿ ಭಾಗವಹಿಸಿ ರೋಮಾಂಚನಗೊಳಿಸಿದರು.

ಮರಿಯಮ್ಮನಹಳ್ಳಿ: ಲಕ್ಷ್ಮೀನಾರಾಯಣ ಸ್ವಾಮಿ ಹಾಗೂ ಆಂಜನೇಯ ಸ್ವಾಮಿಗಳ ಜೋಡಿ ರಥೋತ್ಸವದ ಅಂಗವಾಗಿ ಮಂಗನಹಳ್ಳಿ ವಿಶ್ವನಾಥ ಶೆಟ್ಟಿ ಅವರ ಬಯಲುಜಾಗದಲ್ಲಿ ನಾಣಿಕೇರಿ ದೈವಸ್ತರಿಂದ ಬಯಲು ಕುಸ್ತಿ ಪಂದ್ಯಾವಳಿಗಳು ಶನಿವಾರ ನಡೆದವು.ಕುಸ್ತಿ ಪಂದ್ಯಾವಳಿಯಲ್ಲಿ ಜಿಲ್ಲೆಯ ತಾಲೂಕುಗಳಿಂದ ಸ್ಥಳೀಯ ಮತ್ತು ಕ್ರೀಡಾ ಹಾಸ್ಟೆಲ್ ಗಳಿಂದ ಪೈಲ್ವಾನರು ಆಗಮಿಸಿ ಸುಮಾರು 30 ಜೋಡಿಗಳು ಕುಸ್ತಿ ಅಖಾಡದಲ್ಲಿ ಸೆಣಸಾಡಿ ಕ್ರೀಡಾಭಿಮಾನಿಗಳಿಗೆ ಮನಸೋರೆ ಗೊಳ್ಳುವಂತಹ ಕುಸ್ತಿಯ ಕಲೆಯನ್ನು ಪ್ರದರ್ಶಿಸಿದರು.

ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಯುವತಿಯರು ಮತ್ತು ಪುರುಷರು ಸೇರಿ ಕುಸ್ತಿ ಪದ್ಯದಲ್ಲಿ ಭಾಗವಹಿಸಿ ರೋಮಾಂಚನಗೊಳಿಸಿದರು. ಬ್ರೆಜಿಲ್ ನಿಂದ ಆಗಮಿಸಿದ್ದ ಪ್ರೆಡ್ರಿಕ್ ಮಿಲಾ ಬ್ರೆಜಿಲ್ ಅಂತರಾಷ್ಟ್ರೀಯ ಕುಸ್ತಿ ಕುಸ್ತಿಪಟು ಭಾಗವಹಿಸಿದ್ದು ಆಕರ್ಷಣೀಯವಾಗಿತ್ತು.

ಕಾರ್ತಿಕ್ ಕಾಟೆ ರಾಣಿಬೆನ್ನೂರು ಎರಡು ಬಾರಿ ಕರ್ನಾಟಕದ ಕೇಸರಿ ವಿಜೇತರು ಹಾಗೂ ಹಾಸಿಕ್ ಸಿಂಗ್ ಪಂಜಾಬ್ ಕೇಸರಿ, ಪಂಜಾಬ್ ರೊಂದಿಗೆ ಸೆಣಸಾಡಿ ಕಾರ್ತಿಕ್ ಕಾಟೆ ವಿಜೇತರಾಗಿ 1 ಲಕ್ಷ ರೂ. ಬಹುಮಾನ ತಮ್ಮದಾಗಿಸಿಕೊಂಡರು.

ಬಸು ಪಾಟೀಲ್ ಅಂತರಾಷ್ಟ್ರೀಯ ಕುಸ್ತಿಪಟು ದಾವಣಗೆರೆ ಹಾಗೂ ಪ್ರೆಡ್ರಿಕ್ ಮಿಲಾ ಬ್ರೆಜಿಲ್ ಅಂತರಾಷ್ಟ್ರೀಯ ಕುಸ್ತಿಪಟು ತೀವ್ರ ಪೈಪೋಟಿ ನೀಡಿ ಕೊನೇ ಹಂತದಲ್ಲಿ ಬಸು ಪಾಟಿಲ್ ವಿಜೇತರಾಗಿ ₹50 ಸಾವಿರ ಬಹುಮಾನ ತಮ್ಮದಾಗಿಸಿಕೊಂಡರು.

ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹೊಸಪೇಟೆ ಪರುಶುರಾಮ ಹಾಗೂ ಬಲ್ಲಹುನ್ಸಿ ಸುನಿಲ ಫೈನಲ್ ಕುಸ್ತಿಯಲ್ಲಿ ಸೆಣಸಾಡಿ, ಕೊನೆ ಗಳಿಗೆಯಲ್ಲಿ ಗೊಂದಲ ಉಂಟಾಗಿದ್ದರಿಂದ ಇಬ್ಬರಿಗೂ ಬೆಳ್ಳಿ ಗದೆ ಕೊಟ್ಟು ಸಮಾಧಾನ ಪಡಿಸಲಾಯಿತು.

ನಿರ್ಣಾಯಕರಾಗಿ ಪೈಲ್ವಾನ್ ಉದ್ದೇಕಲ್ ವೆಂಕಟೇಶ್, ಪೈಲ್ವಾನ್ ವೆಂಕಟೇಶ್, ಪೈಲ್ವಾನ್ ಸೈಪುಲ್ಲ, ಪೈಲ್ವಾನ್ ಸಣ್ಣದುರುಗಪ್ಪ ನಿರ್ವಹಿಸಿದರು.

ಮುಂಜಾಗ್ರತಾ ಕ್ರಮವಾಗಿ ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ, ಪಿಎಸ್‌ಐ ತಾರಾಬಾಯಿ ಇವರ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು.

ಪಟ್ಟಣದಲ್ಲಿ ಶಾಂತಿಯುತವಾಗಿ ಕುಸ್ತಿ ಪಂದ್ಯಾವಳಿಗಳು ನಡೆದವು. ಕುಸ್ತಿ ಅಭಿಮಾನಿಗಳು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪಂದ್ಯ ವೀಕ್ಷಿಸಿದರು.