ಮಾಳವಾಡ ನವಗ್ರಾಮದಲ್ಲಿ ಬಯಲೇ ಬಹಿರ್ದೆಸೆ ತಾಣ!

| Published : Mar 15 2025, 01:01 AM IST

ಸಾರಾಂಶ

ಬೆಣ್ಣಿಹಳ್ಳ ನೆರೆ ಹಾವಳಿಗೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ ಮಾಳವಾಡ ನವಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳು ನಿರುಪಯುಕ್ತವಾಗಿದ್ದು, ಇಲ್ಲಿನ ಜನತೆಗೆ ನಿತ್ಯ ಬಯಲೇ ಬಹಿರ್ದೆಸೆ ತಾಣವಾಗಿದೆ. ಮಹಿಳೆಯ ಪಾಡಂತೂ ಹೇಳತೀರದು.

ಪಿ.ಎಸ್.ಪಾಟೀಲಕನ್ನಡಪ್ರಭ ವಾರ್ತೆ ರೋಣ

ಬೆಣ್ಣಿಹಳ್ಳ ನೆರೆ ಹಾವಳಿಗೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ ಮಾಳವಾಡ ನವಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳು ನಿರುಪಯುಕ್ತವಾಗಿದ್ದು, ಇಲ್ಲಿನ ಜನತೆಗೆ ನಿತ್ಯ ಬಯಲೇ ಬಹಿರ್ದೆಸೆ ತಾಣವಾಗಿದೆ. ಮಹಿಳೆಯ ಪಾಡಂತೂ ಹೇಳತೀರದು.

ನೆರೆ ಹಾವಳಿಗೆ ತುತ್ತಾಗಿ ಸ್ಥಳಾಂತರಗೊಂಡ ತಾಲೂಕಿನ 11ರಲ್ಲಿ 9 ಗ್ರಾಮಗಳು ಮಲಪ್ರಭಾ ನದಿ ಪ್ರವಾಹಕ್ಕೆ ಹಾಗೂ ಯಾ.ಸ. ಹಡಗಲಿ, ಮಾಳವಾಡ ಗ್ರಾಮಗಳು ಬೆಣ್ಣೆಹಳ್ಳ ಪ್ರವಾಹಕ್ಕೆ ತುತ್ತಾಗಿ ಸ್ಥಳಾಂತರಗೊಂಡಿವೆ. ಶೇ. 80ರಷ್ಟು ಕುಟುಂಬಗಳು ನವಗ್ರಾಮದಲ್ಲಿ ವಾಸವಾಗಿವೆ.

2007 ಮತ್ತು 2009ರಲ್ಲಿ ಮಹಾಮಳೆಗೆ ಬೆಣ್ಣೆಹಳ್ಳ ತುಂಬಿ ಹರಿದು, ಮಾಳವಾಡ ಗ್ರಾಮ ಜಲಾವೃತವಾಯಿತು. ಜನ-ಜಾನುವಾರುಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. 2007ರ ಮುಂಚೆಯೂ ಪ್ರತಿ ಮಳೆಗಾಲದಲ್ಲಿ ಬೆಣ್ಣಿಹಳ್ಳದ ನೀರು ಮಾಳವಾಡ ಗ್ರಾಮಕ್ಕೆ ನುಗ್ಗುತ್ತಿತ್ತು. 2007, 2009ರಲ್ಲಿ ಗರಿಷ್ಠ ಹಾನಿಯಾಯಿತು. ಗ್ರಾಮದೊಳಗೆ ನುಗ್ಗಿದ ನೀರು ತಿಂಗಳ ವರೆಗೂ ಕಾಡಿತು. ಅದೆಷ್ಟೋ ಮನೆಗಳು ನೆಲಸಮವಾದವು. ದವಸ-ಧಾನ್ಯಗಳು, ಪಾತ್ರೆ, ಬಟ್ಟೆಗಳು ನೀರು ಪಾಲಾದವು. ಆ ವೇಳೆ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಮಾಳವಾಡ ಗ್ರಾಮ ಸ್ಥಳಾಂತರಕ್ಕೆ ಕ್ರಮ ಕೈಗೊಂಡಿತು.

17ರೈತರಿಂದ ಎಕರೆಗೆ ₹ 12.5 ಲಕ್ಷದಂತೆ ಒಟ್ಟು 58 ಎಕರೆ ಖರೀದಿಸಿತು. ಈ ಪ್ರದೇಶದಲ್ಲಿ ಜಿಂದಾಲ್ ಕಂಪನಿ 140 ಮನೆ ಮತ್ತು ಧಾರವಾಡ ನಿರ್ಮಿತಿ ಕೇಂದ್ರ 465 ಮನೆ ಸೇರಿ ಒಟ್ಟು 605 ಮನೆಗಳನ್ನು ನಿರ್ಮಿಸಿ ಸರ್ಕಾರಕ್ಕೆ ಹಸ್ತಾಂತರಿಸಿತು. ಸ್ಥಳಾಂತರಗೊಂಡ ಪೈಕಿ 2ನೇ ದೊಡ್ಡ ಗ್ರಾಮ ಇದಾಗಿದೆ.

ಶೌಚಾಲಯ ನಿರುಪಯುಕ್ತ: ಮನೆ ನಿರ್ಮಾಣದ ವೇಳೆ 605 ಮನೆಗಳಿಗೂ ತಲಾ ಒಂದು ಶೌಚಾಲಯ ನಿರ್ಮಿಸಲಾಗಿದೆ. ಆದರೆ ಮನೆ ನಿರ್ಮಿಸಿ ದಶಕಗಳ ಕಾಲ ನವಗ್ರಾಮದಲ್ಲಿ ಜನವಸತಿ ಇಲ್ಲದ್ದರಿಂದ ಇಲ್ಲಿನ ಬಹುತೇಕ ಮನೆ, ಶೌಚಾಲಯಗಳ ಕದ, ಕಿಟಕಿ, ಪೈಪ್, ನಳ, ನೆಲ ಹಾಸು ಕಿತ್ತು ಹೋಗಿವೆ. ಇಂಗು ಗುಂಡಿ (ಸೆಪ್ಟಿಕ್‌ ಟ್ಯಾಂಕ್‌) ಮಣ್ಣಲ್ಲೇ ಮುಚ್ಚಿಹೋಗಿವೆ. ಬಹುತೇಕ ಮನೆಗಳ ಶೌಚಾಲಯಗಳು ಬಿದ್ದಿವೆ. ಶೇ. 98 ಮನೆಗಳ ಶೌಚಾಲಯಗಳು ಉಪಯೋಗಕ್ಕಿಲ್ಲದಂತಾಗಿದೆ. ನಿತ್ಯ ಇಲ್ಲಿನ ಜನತೆ ತಂಬಿಗೆ ಹಿಡಿದುಕೊಂಡು ಬಯಲಿನತ್ತ ಹೋಗುವುದು ಸಾಮಾನ್ಯ. ಮಹಿಳೆಯರು ತೀವ್ರ ಮುಜುಗರಕ್ಕೀಡಾದ ಸಂದರ್ಭಗಳಿವೆ. ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಜಿಪಂ ವತಿಯಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಶೌಚಾಲಯ ಅರ್ಧಕ್ಕೆ ನಿಂತಿದೆ.

ಮನೆ ಹಂಚಿಕೆ ಗೊಂದಲ: 2011ರಲ್ಲಿ 514 ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಮತ್ತಷ್ಟು ಜನ ನಮಗೆ ಮನೆಯಿಲ್ಲ, ಜಾಗವೂ ಇಲ್ಲ ಎಂದು ಜನರು ಬೇಡಿಕೆ ಇಟ್ಟರು. ಆಗ ಮತ್ತೆ 91 ಫಲಾನುಭವಿಗಳನ್ನು ಆಯ್ಕೆ ಮಾಡಿ ಒಟ್ಟು 605 ಮನೆಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರ ವಿತರಿಸಲಾಯಿತು. ಹಕ್ಕುಪತ್ರ, ಮನೆ ಹಂಚಿಕೆ ಪೂರ್ಣಗೊಂಡು 13 ವರ್ಷ ಕಳೆದರೂ ಇನ್ನೂ ಶೇ. 20ರಷ್ಟು ಕುಟುಂಬಗಳು ನಮಗೆ ನ್ಯಾಯಯುತವಾಗಿ ಬರಬೇಕಿದ್ದ ಮನೆಗಳು ಬಂದಿಲ್ಲ, ಮನೆ ಇಲ್ಲದವರನ್ನು ಕಡೆಗಣಿಸಿದ್ದಾರೆ. ಉಳ್ಳವರೇ ಪ್ರಭಾವ ಬಳಸಿ ಹೆಚ್ಚು ಮನೆ ತೆಗೆದುಕೊಂಡಿದ್ದಾರೆ, ನಾಲ್ಕು ಕುಟುಂಬಗಳು ಒಂದೇ ಚಿಕ್ಕ ಮನೆಯಲ್ಲಿ ವಾಸಿಸುವುದಾದರೂ ಹೇಗೆ? ಹೀಗೆ ಒಂದೊಂದು ಕುಟುಂಬಗಳು ಒಂದೊಂದು ಸಮಸ್ಯೆ ಮುಂದಿಟ್ಟುಕೊಂಡು ಈಗಲೂ ನವಗ್ರಾಮದಲ್ಲಿ ಮನೆಗಾಗಿ ಬೇಡಿಕೆ ಇಟ್ಟಿದ್ದು, ಮನೆ ಹಂಚಿಕೆ ಗೊಂದಲ ನಿಂತಿಲ್ಲ. ಅನೇಕ ಕುಟುಂಬಗಳಿಗೆ ಮನೆ ಸಿಕ್ಕಿಲ್ಲ ಎಂಬ ಆರೋಪ ಈಗಲೂ ಕೇಳಿ ಬರುತ್ತಿದೆ. ಮನೆ ಸಿಗದಿರುವ ಹಾಗೂ ಮನೆ ಹಂಚಿಕೆ ಗೊಂದಲದಿಂದ ಶೇ. 20ರಷ್ಟು ಕುಟುಂಬಗಳ ಮೂಲ, ಗ್ರಾಮದಲ್ಲಿಯೇ ವಾಸವಾಗಿವೆ.

ಸೌಕರ್ಯಗಳ ಕೊರತೆಯಿದೆ: ಗ್ರಾಮದಲ್ಲಿ ಶಾಲೆಯಿದೆ, ಸುತ್ತಲೂ ಕಾಂಪೌಂಡಿಲ್ಲ, ಶಾಲೆಗೆ ತೆರಳಲು ರಸ್ತೆಯಿಲ್ಲ. 2 ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆಯಾದರೂ ಸಮರ್ಪಕವಾಗಿಲ್ಲ. ಕೆಲವು ಬಡಾವಣೆಗೆ ನೀರು ತಲುಪುವುದಿಲ್ಲ. ಇಲ್ಲಿನ ಯಾವುದೇ ರಸ್ತೆಗೆ ಗಟಾರ ನಿರ್ಮಿಸಿಲ್ಲ, 15ಕ್ಕೂ ಹೆಚ್ಚು ಕಡೆ ರಸ್ತೆಗೆ ಸಿಡಿ ನಿರ್ಮಿಸಿದ್ದು, ಅವೈಜ್ಞಾನಿಕವಾಗಿವೆ. ಕೆಲವು ರಸ್ತೆಗಳಿಗೆ ಕಾಂಕ್ರೀಟ್ ಹಾಕಲಾಗಿದ್ದು, ಚರಂಡಿ ಭಾಗ್ಯ ಕಂಡಿಲ್ಲ. ಇದರಿಂದ ಮಳೆಗಾಲದಲ್ಲಿ ನೀರು ಹರಿದು ಹೋಗದೇ ಮನೆಯೊಳಗೆ ನುಗ್ಗಿ ತೊಂದರೆ ಉಂಟು ಮಾಡುತ್ತಿದೆ. ಶಾಲೆ ಹತ್ತಿರದ ಬಡಾವಣೆಯಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದಿವೆ.

2009ರಲ್ಲಿಯೇ ಅಡಿಪಾಯ ಹಾಕಲಾದ ಬಸ್ ನಿಲ್ದಾಣ ಕಟ್ಟಡ 13 ವರ್ಷವಾದರೂ ಹಾಗೆಯೇ ಇದೆ. ಶುದ್ಧ ನೀರಿನ ಘಟಕವಿದ್ದು, ಉಪಯೋಗವಾಗುತ್ತಿಲ್ಲ. ಜಲಜೀವನ ಮಿಷನ್ ಯೋಜನೆಯಡಿ ಮನೆಗೊಂದು ನಳ ಅಳವಡಿಸಿದ್ದು, ಒಮ್ಮೆಯೂ ನೀರು ಪೂರೈಸಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್‌ ಮೂಲಕ ವಾರದಲ್ಲಿ 2 ಬಾರಿ ನೀರು ಪೂರೈಸಲಾಗುತ್ತಿದೆ. ನಾಗರಿಕ ಸೌಲಭ್ಯಕ್ಕೆ ಕಾಯ್ದಿರಿಸಿದ ಜಾಗದಲ್ಲಿ ಜಾಲಿಕಂಟಿ ಹೆಮ್ಮರವಾಗಿ ಬೆಳೆದಿವೆ. ಹೀಗೆ ಸಾಕಷ್ಟು ಸಮಸ್ಯೆಗಳ ಆಗರದಲ್ಲಿ ನರಳುತ್ತಿದೆ ಮಾಳವಾಡ ಆಸರೆ ನವಗ್ರಾಮ

ನಾವು ಇಲ್ಲಿಗೆ ವಾಸ ಮಾಡಲು ಬರುವ ಮೊದಲೇ ಶೌಚಾಲಯ ಹಾಳಾಗಿತ್ತು. ನಿತ್ಯ ಬಯಲಿಗೆ ತೆರಳುತ್ತೇವೆ. ಮಹಿಳೆಯರಿಗೆ ಬಾಳಾ ತೊಂದರೆಯಿದೆ. ಸಮುದಾಯ ಶೌಚಾಲಯ ಅವಶ್ಯವಿದೆ. ತಿಂಗಳಲ್ಲಿ ನಾಲ್ಕೈದು ಬಾರಿ ನೀರಿನ ಸಮಸ್ಯೆಯಾಗುತ್ತಿದೆ. ಶುದ್ಧ ನೀರಿನ ಘಟಕ ಇದ್ದೂ ಇಲ್ಲದಂತಿದೆ. ಜಾಲಿಕಂಟಿ ತೆರವು ಮಾಡದಿದ್ದರಿಂದ ಹಾವು ಜಾಸ್ತಿಯಿವೆ. ಚರಂಡಿ ಇಲ್ಲದ್ದರಿಂದ ಮಳೆ ನೀರು ಮನೆಗೆ ನುಗ್ಗುತ್ತದೆ. ಬಸ್ ನಿಲ್ದಾಣವಿಲ್ಲ. ಹಕ್ಕುಪತ್ರ ಹಂಚಿಕೆ ಗೊಂದಲ ಮುಗಿದಿಲ್ಲ ಎಂದು ಮಾಳವಾಡ ನವಗ್ರಾಮ ನಿವಾಸಿ ವಿರೂಪಾಕ್ಷಪ್ಪ ನೀಲಗುಂದ ಹೇಳಿದರು.

ಮಹಿಳಾ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಕ್ರಿಯಾಯೋಜನೆ ಹಾಗೂ ವೈಯಕ್ತಿಕ ಶೌಚಾಲಯ ದುರಸ್ತಿಗೆ ಎಸ್‌ಬಿಎಂ ಯೋಜನೆಯಡಿ ವ್ಯವಸ್ಥೆ ಕಲ್ಪಿಸಲು ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನೀರಿನ ಸಮಸ್ಯೆಯಾಗದಂತೆ ಕ್ರಮ‌ಕೈಗೊಳ್ಳಲಾಗುವುದು. ಶಾಲೆಗೆ ಕಾಂಪೌಂಡ್‌ ನಿರ್ಮಾಣಕ್ಕೆ ಖಾತ್ರಿ ಯೋಜನೆಯಡಿ ₹4 ಲಕ್ಷ ಅನುದಾನ ಕಾಯ್ದಿರಿಸಲಾಗಿದೆ. ಖಾತ್ರಿ ಯೋಜನೆಯಡಿ ಚರಂಡಿ ನಿರ್ಮಾಣ ಕಾಮಗಾರಿ ಹಾಕಿಕೊಂಡಿದ್ದು, ಕಾಮಗಾರಿ ಕೈಗೊಳ್ಳಲು ಗುತ್ತಿಗೆದಾರರು ಮುಂದೆ ಬರುತ್ತಿಲ್ಲ ಎಂದು ಕೌಜಗೇರಿ ಪಿಡಿಒ ಭೀಮಪ್ಪ ಓಲೇಕಾರ ಹೇಳಿದರು.