ಸಾರಾಂಶ
ಮಂಗಳೂರು : ಉಪ ಮುಖ್ಯಮಂತ್ರಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೊಯಂಬತ್ತೂರಿನ ಈಶ ಫೌಂಡೇಶನ್‌ನ ಜಗ್ಗಿ ವಾಸುದೇವ ನೇತೃತ್ವದಲ್ಲಿ ನಡೆದ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಕಾಂಗ್ರೆಸ್‌ನಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪಿ.ವಿ.ಮೋಹನ್ ಮಂಗಳೂರಲ್ಲಿ ತೀಕ್ಷ್ಣ ಪ್ರತಿಕ್ರಿಯಿಸಿದ್ದು, ಜಾತ್ಯತೀತ ಪಕ್ಷದ ಅಧ್ಯಕ್ಷರಾಗಿರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುರಿತು ಪಿ.ವಿ.ಮೋಹನ್‌ರ ಈ ಹೇಳಿಕೆ ಜಾಲತಾಣದಲ್ಲಿ ಹರಿದಾಡ ತೊಡಗಿದ್ದು, ವೈರಲ್ ಆಗಿದೆ.
ಡಿಕೆಶಿ ಅವರ ಮಾತುಗಳು ಆರ್‌ಎಸ್‌ಎಸ್ ಜೊತೆ ಹೊಂದಾಣಿಕೆ ಆದಂತೆ ಆಗುತ್ತದೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶ ರವಾನೆಯಾದಂತೆ ಆಗಿದೆ. ಬಿಜೆಪಿಯ ಹಿರಿಯ ಮುಖಂಡ ಅಮಿತ್ ಶಾ ಜೊತೆ ನಮ್ಮ ಅಧ್ಯಕ್ಷರು ವೇದಿಕೆ ಹಂಚಿಕೊಂಡಿರುವುದು, ಶಾ ಜೊತೆ ಸಮಯ ಕಳೆಯುವುದನ್ನು ಗ್ರಹಿಸಲು ಕಷ್ಟವಾಗುತ್ತದೆ. ಇದು ಪಕ್ಷದ ಪ್ರಗತಿ ಹಾಗೂ ಬೆಳವಣಿಗೆಗೆ ಮಾರಕ ಎಂದಿದ್ದಾರೆ ಪಿ.ವಿ.ಮೋಹನ್.
ಡಿಕೆಶಿ ಅವರು ಬೇರೆ ಸಾಧು ಸಂತರ ಕಾರ್ಯಕ್ರಮಕ್ಕೆ ಹೋಗುತ್ತಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಆರ್‌ಎಸ್‌ಎಸ್, ಹಿಂದುತ್ವ ಬಗ್ಗೆ ಮಾತನಾಡುವ, ಕಾಂಗ್ರೆಸ್ ಹಾಗೂ ರಾಹುಲ್ ಬಗ್ಗೆ ಟಾಂಗ್ ನೀಡಿದಂತೆ ಮಾತನಾಡುವವರ ಕಾರ್ಯಕ್ರಮಕ್ಕೆ ತೆರಳಿದ್ದು ಸರಿಯಲ್ಲ. ಹಾಗೆ ಹಿಂದುತ್ವ ಪರ ಮಾತನಾಡುವವರ ಕಾರ್ಯಕ್ರಮಕ್ಕೆ ತೆರಳಿ ಬಳಿಕ ಬಿಜೆಪಿ ಸೇರಿದವರೇ ಜಾಸ್ತಿ ಇದ್ದಾರೆ. ಒಮ್ಮೆ ಅಂಥ ಕಾರ್ಯಕ್ರಮಗಳಿಗೆ ತೆರಳಿದರೆ ಮತ್ತೆ ಮತ್ತೆ ತೆರಳಬೇಕೆನಿಸುತ್ತದೆ, ಜಾತ್ಯತೀತ ಪಕ್ಷದಲ್ಲಿರುವವರು ಹೀಗೆ ಹೋಗುವ ಬಗ್ಗೆ ಸಾಕಷ್ಟು ಯೋಚಿಸಬೇಕು. ನಾಯಕರೇ ತೆರಳಿದರೆ, ಕಾರ್ಯಕರ್ತರೂ ಹೋಗುತ್ತೇವೆ ಎಂದರೆ ಏನು ಮಾಡುವುದು? ಆರ್‌ಎಸ್‌ಎಸ್ ಮನಸ್ಥಿತಿಯ ಇಂಥ ಕಾರ್ಯಕ್ರಮಗಳಿಗೆ ಪಕ್ಷ ಮುಖಂಡರು ಯಾಕೆ ಹೋಗಬೇಕು ಎಂದು ಡಿಕೆಶಿ ಬಗ್ಗೆ ಪಿ.ವಿ.ಮೋಹನ್ ಪರೋಕ್ಷ ವಾಗ್ದಾಳಿ ನಡೆಸಿದರು.