ರಾಜ್ಯದ ಖಜಾನೆ ಖಾಲಿ ಮಾಡಿ, ಚೊಂಬು ಹಿಡಿದು ಗೋಗರೆಯುವ ಪರಿಸ್ಥಿತಿ ಬಂದಿದೆ: ಎಚ್.ಡಿ. ಕುಮಾರಸ್ವಾಮಿ

| Published : Apr 23 2024, 12:47 AM IST

ರಾಜ್ಯದ ಖಜಾನೆ ಖಾಲಿ ಮಾಡಿ, ಚೊಂಬು ಹಿಡಿದು ಗೋಗರೆಯುವ ಪರಿಸ್ಥಿತಿ ಬಂದಿದೆ: ಎಚ್.ಡಿ. ಕುಮಾರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನತೆಯ ಮೇಲೆ ಸಾಲದ ಹೊರೆ ಹೇರುತ್ತಿದ್ದು, ಇದು ಭವಿಷ್ಯದಲ್ಲಿ ಭಾರಿ ಪರಿಣಾಮ ಬೀರಲಿದ್ದು, ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡುವುದರ ಜತೆಗೆ ರೈತರ ಸಾಲವನ್ನು ಮನ್ನಾ ಮಾಡಿ ಅವರ ಬೆನ್ನೆಲುಬಾಗಿ ನಿಂತಿದ್ದೆ

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಕೇಂದ್ರ ಸರ್ಕಾರದ ಮುಂದೆ ಚೊಂಬು ಹಿಡಿದು ಗೋಗರೆಯುವ ಪರಿಸ್ಥಿತಿ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಂದಿದೆ ಎಂದು ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.ಸಾಲಿಗ್ರಾಮದಲ್ಲಿ ನಡೆದ ಬಹಿರಂಗ ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಜನತೆಯ ಮೇಲೆ ಸಾಲದ ಹೊರೆ ಹೇರುತ್ತಿದ್ದು, ಇದು ಭವಿಷ್ಯದಲ್ಲಿ ಭಾರಿ ಪರಿಣಾಮ ಬೀರಲಿದ್ದು, ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಸಾರಾಯಿ ಮತ್ತು ಲಾಟರಿ ನಿಷೇಧ ಮಾಡುವುದರ ಜತೆಗೆ ರೈತರ ಸಾಲವನ್ನು ಮನ್ನಾ ಮಾಡಿ ಅವರ ಬೆನ್ನೆಲುಬಾಗಿ ನಿಂತಿದ್ದೆ ಎಂದು ಹೇಳಿದರು. ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಜನತೆ ನನಗೆ ಈ ಚುನಾವಣೆಯಲ್ಲಿ ಮತ ನೀಡಿ ಬೆಂಬಲಿಸಿದರೆ ಅದು ಮಾಜಿ ಸಚಿವ ಸಾ.ರಾ. ಮಹೇಶ್ ಅವರಿಗೆ ಕೊಟ್ಟ ಬೆಂಬಲವಾಗಿರುತ್ತದೆ. ಈ ವಿಚಾರವನ್ನು ಅರಿತು ನನಗೆ ಹೆಚ್ಚಿನ ಬಲ ತುಂಬಬೇಕೆಂದು ಮನವಿ ಮಾಡಿದ ಅವರು, ಪ್ರಧಾನಿ ಮೋದಿಯವರಿಗೆ ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡರು ಮತ್ತು ನನ್ನನ್ನು ಕಂಡರೆ ವಿಶೇಷವಾದ ಪ್ರೀತಿ ಇದ್ದು, ನಾನು ಈ ಚುನಾವಣೆಯಲ್ಲಿ ಗೆದ್ದರೆ ಕೇಂದ್ರ ಸರ್ಕಾರದಿಂದ ರಾಜ್ಯ ಮತ್ತು ಕ್ಷೇತ್ರಕ್ಕೆ ಅಗತ್ಯ ಇರುವಷ್ಟು ಅನುದಾನ ತಂದು ಉತ್ತಮ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಮಾತನಾಡಿ, ಕಾಂಗ್ರೆಸ್ ನವರು ಮನೆ ಮನೆಗೆ ತೆರಳಿ ಸುಳ್ಳಿನ ಗ್ಯಾರಂಟಿ ಕಾರ್ಡ್ ಗಳನ್ನು ವಿತರಣೆ ಮಾಡುತ್ತಿದ್ದು, ಆಸ್ಪತ್ರೆಯಿಂದ ಬಂದ ಹುಚ್ಚರಂತೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಇದನ್ನು ಯಾರು ನಂಬಬೇಡಿ ಎಂದರು.

ಜಿಪಂ ಮಾಜಿ ಅಧ್ಯಕ್ಷ ಸಾ.ರಾ. ನಂದೀಶ್ ನೇತೃತ್ವದಲ್ಲಿ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಿಂದ ಗಾಂಧಿ ವೃತ್ತದ ವೇದಿಕೆ ಕಡೆಗೆ ನೂರಾರು ಮಹಿಳೆಯರು ಕಳಸ ಹೊತ್ತು ಸಾಗಿ ಬೃಹತ್ ಮೋಸಂಬಿ ಹಾರ ಹಾಕುವುದರ ಮೂಲಕ ನೂರಾರು ಯುವಕರು ಬೈಕ್ ರ್ಯಾಲಿ ಮುಖಾಂತರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸ್ವಾಗತಿಸಿದರು.

ಮಾಜಿ ಸಚಿವ ಸಾ.ರಾ. ಮಹೇಶ್, ಅರಕಲಗೂಡು ಶಾಸಕ ಎ. ಮಂಜು, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಜಿಪಂ ಮಾಜಿ ಅಧ್ಯಕ್ಷ ಸಾ.ರಾ. ನಂದೀಶ್, ಸಿ.ಜೆ. ದ್ವಾರಕೀಶ್, ಮಾಜಿ ಸದಸ್ಯರಾದ ಅಮಿತ್ ವಿ. ದೇವರಹಟ್ಟಿ, ಎಂ.ಟಿ. ಕುಮಾರ್, ಮೈಮುಲ್ ನಿರ್ದೇಶಕ ಸೋಮಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ. ಅಣ್ಣೇಗೌಡ, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ.ಸೋಮಣ್ಣ, ಮಿರ್ಲೆ ಶ್ರೀನಿವಾಸಗೌಡ, ಜಿಲ್ಲಾ ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಮಧುಚಂದ್ರ ಇದ್ದರು.