ಸಾರಾಂಶ
ಶಿವಮೊಗ್ಗ: ಅತಿಥಿ ಉಪನ್ಯಾಸಕರಿಗೆ ವೇತನ ಪಾವತಿ ಮಾಡದಿರುವ ದುಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದೆ ಎಂದು ಕ್ರಾಂತಿವೀರ ಬ್ರಿಗೇಡ್‌ನ ಮುಖ್ಯಸ್ಥ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಅಗಸ್ಟ್ ತಿಂಗಳಿನಿಂದ ಅಂದರೆ 7 ತಿಂಗಳಿನಿಂದ ಅವರಿಗೆ ಸಂಬಳವೇ ಬಂದಿಲ್ಲ. ಪಾಠ ಮಾಡುವ ಗುರುಗಳಿಗೆ ತಿಂಗಳಾನುಗಟ್ಟಲೆ ವೇತನ ಪಾವತಿ ಮಾಡದಿರುವ ಸ್ಥಿತಿ ರಾಜ್ಯ ಸರ್ಕಾರಕ್ಕೆ ಬಂದಿದ್ದು, ದುರ್ದೈವ. ಇದಕ್ಕೆ ಸಂಬಂಧಿಸಿದ್ದಂತೆ ಅತಿಥಿ ಉಪನ್ಯಾಸಕರು, ಶಿಕ್ಷಕರ ಸಮಸ್ಯೆಗಳನ್ನು ಇಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಬಹಿರಂಗ ಪತ್ರ ಬರೆಯುವುದಾಗಿ ತಿಳಿಸಿದರು.ಸುಮಾರು 60 ಸಾವಿರ ಅತಿಥಿ ಉಪನ್ಯಾಸಕ ಮತ್ತು ಶಿಕ್ಷಕ ವರ್ಗದವರಿದ್ದಾರೆ. ಇವರೆಲ್ಲ ಜೀವನ ಮಾಡುವುದು ಹೇಗೆ, ಒಂದು ಕೆಲಸ ಮಾಡಿ ಮಂತ್ರಿಗಳ ಮತ್ತು ಶಾಸಕರ ಸಂಬಳವನ್ನು ನಿಲ್ಲಿಸಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ಪರಿಸ್ಥಿತಿ ಗುತ್ತಿಗೆದಾರರದ್ದು ಆಗಿದೆ. ಸುಮಾರು 64 ಸಾವಿರ ಕೋಟಿ ರು. ಹಣ ಗುತ್ತಿಗೆದಾರರಿಗೆ ಬಾಕಿ ಬರಬೇಕಾಗಿದೆ. ಅದರಲ್ಲಿ ಶಿವಮೊಗ್ಗ ಜಿಲ್ಲೆಯದ್ದು 2250 ಕೋಟಿ ರು. ಇದೆ. ಅವರು ಹೇಗೆ ಬದುಕುವುದು. ಹೀಗಾದರೆ ಗುತ್ತಿಗೆದಾರರು ಕೂಡ ಆತ್ಮಹತ್ಯೆಯ ದಾರಿ ತುಳಿಯುವುದಿಲ್ಲವೆ. ಇದೇ ಕಾಂಗ್ರೆಸ್‌ನವರು ವಿರೋಧ ಪಕ್ಷದಲ್ಲಿದ್ದಾಗ ಏನೆಲ್ಲ ಬಬ್ಬೆ ಹೊಡೆಯುತ್ತಿದ್ದರು. ಈಗ ಅವರಿಗೆ ಗುತ್ತಿಗೆದಾರರ ಸ್ಥಿತಿ ಅರ್ಥವಾಗುತ್ತಿಲ್ಲವೆ ಎಂದು ವ್ಯಂಗ್ಯವಾಡಿದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಾಲು, ಎಂ.ಶಂಕರ್, ಸೋಗಾನೆ ರಮೇಶ್, ಮೋಹನ್ ಜಾಧವ್, ಗುರುಮೂರ್ತಿ, ಪ್ರಶಾಂತ್, ಟಾಕ್ರಾನಾಯ್ಕ ಇದ್ದರು.
ಉದಯಗಿರಿಯ ಪ್ರಕರಣ ಪೂರ್ವಯೋಜಿತ ಘಟನೆಶಿವಮೊಗ್ಗ: ಉದಯಗಿರಿಯ ಪ್ರಕರಣ ಇಡಿ ರಾಜ್ಯವೇ ತಲೆತಗ್ಗಿಸುವಂತದ್ದು, ಪೊಲೀಸರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಸೇವೆ ಸಲ್ಲಿಸುತ್ತಾರೆ. ಇವರ ಮೇಲೆ ಹಲ್ಲೆಯಾಗುತ್ತದೆ ಎಂದರೆ ಏನು ಅರ್ಥ. ಒಬ್ಬ ಪೊಲೀಸ್ ಅಧಿಕಾರಿಯ ಮೇಲೆ ಸಾವಿರಾರು ಜನರು ಕಲ್ಲು ತೂರಾಟ ನಡೆಸುತ್ತಾರೆ. ಒಮ್ಮೆಗೆ ಇಷ್ಟೊಂದು ಜನ ಹೇಗೆ ಸೇರುತ್ತಾರೆ. ಆ ಕಲ್ಲುಗಳು ಎಲ್ಲಿಂದ ಬಂದವು. ಇದು ಪೂರ್ವಯೋಜಿತ ಘಟನೆ ಅಲ್ಲವೇ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದರು.
ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಹರಿಪ್ರಸಾದ್ ಲಕ್ಷ್ಮಣ್ ಅವರ ಹೇಳಿಕೆಗಳು ತೀರ ಬಾಲಿಶವಾಗಿದದ್ದು, ಇಲ್ಲಿ ಗಲಾಟೆ ಮಾಡಿದವರು ಬಿಜೆಪಿಯವರು ಬುರ್ಕಾ ಹಾಕಿಕೊಂಡು ಕಲ್ಲು ಎಸೆಯುತ್ತಾರೆ. ಆರ್‌ಎಸ್‌ಎಸ್ ಪಾತ್ರವು ಇದೆ ಎಂದು ಸುಳ್ಳು ಹೇಳುತ್ತಾರಲ್ಲ ಇವರಿಗೆ ಏನಾದರೂ ಮಾನ ಮಾರ್ಯಾದೆ ಇದಿಯಾ? ಇವರಿಗೆ ಜನ ಹಾಲಿನ ಅಭಿಷೇಕ ಬೇರೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.ಭದ್ರಾವತಿಯಲ್ಲಿ ಶಾಸಕನೊಬ್ಬನ ಮಗ ಅಧಿಕಾರಿಗೆ ಕುಡುಕನು ಬಳಸದ ಭಾಷೆಯಲ್ಲಿ ಬಯ್ಯುತ್ತಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಅಧಿಕಾರಿಗಳೇ ಎದುರುತ್ತಾರೆ. ಇದು ಪ್ರಜಾಪ್ರಭುತ್ವವೇ. ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು ಎಂದರು.
ಕಾಂಗ್ರೆಸ್ಸಿನ ನಾಯಕರಾದ ಕೆ.ಎನ್.ರಾಜಣ್ಣ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮುಂತಾದವರ ಹೇಳಿಕೆಗಳು ಅರ್ಥಹೀನ ಹೇಳಿಕೆಗಳಾಗಿವೆ. ಹೀಗಾಗಲೇ ಇದನ್ನು ನಾನು ಖಂಡಿಸಿದ್ದೇನೆ. ಇನ್ನಾದರು ಕಾಂಗ್ರೆಸ್ ನಾಯಕರು ಓಲೈಕೆಗಳನ್ನು ನಿಲ್ಲಿಸಬೇಕು. ಗೂಂಡಾಗಿರಿ ವರ್ತನೆ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.