ಸಾರಾಂಶ
ವಿದ್ಯಾರ್ಥಿಗಳು ಪ್ರಕೃತಿಯ ಕುರಿತು ಮುಕ್ತ ಮನಸ್ಸಿನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಗಣ್ಯರು ತಿಳಿಸಿದರು. ಕಲೆಗಳನ್ನು ಅವುಗಳ ಸಂದರ್ಭದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ವಿದ್ಯಾರ್ಥಿಗಳು ಪ್ರಕೃತಿಯ ಕುರಿತು ಮುಕ್ತ ಮನಸ್ಸಿನ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಕ್) ಇದರ ಮಂಗಳೂರಿನ ಮುಖ್ಯಸ್ಥ ಸುಭಾಷ್ ಬಸು ಹೇಳಿದ್ದಾರೆ.ಅವರು ಇಲ್ಲಿನ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಹೊಸ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಎಲ್ಲಾ ಸೃಜನಶೀಲ ಕಲೆಗಳ ಕುರಿತು ಇರುವ ನಮ್ಮ ಪ್ರೀತಿಗೆ ಪ್ರಕೃತಿ ಪ್ರೀತಿಯ ಸ್ಪರ್ಶ ಬೇಕು. ಎಲ್ಲಾ ಕಲೆಗಳು ಪರಸ್ಪರ ಹೆಣೆದುಕೊಂಡಿವೆ. ಕಲೆಗಳನ್ನು ಅವುಗಳ ಸಂದರ್ಭದಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಈ ಕಾಲದ ಕಾಳಜಿಗಳನ್ನು ಜೀವಂತವಾಗಿಡುವುದರಲ್ಲಿ ಗಾಂಧಿಯನ್ ಸೆಂಟರ್ ಮತ್ತು ಅದರ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಯ ಜೀವನ ಹೀಗಿರಬೇಕು ಎನ್ನುವುದಕ್ಕೆ ನೊಬೆಲ್ ಪ್ರಶಸ್ತಿ ವಿಜೇತ ಸಿ.ವಿ.ರಾಮನ್ ನ ಆತ್ಮ ಕಥೆಯ ಭಾವಗಳನ್ನು ಓದಿ ಹೇಳಿದರು.
ಇನ್ನೊಬ್ಬ ಅತಿಥಿಯಾಗಿದ್ದ ಉಡುಪಿಯ ಅಧಿತಿ ಆರ್ಟ್ ಗ್ಯಾಲರಿಯ ಸ್ಥಾಪಕ ಡಾ. ಕಿರಣ್ ಆಚಾರ್ಯ ಇವರು ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕೋರ್ಸ್ ಗಳನ್ನು ಇಷ್ಟಪಡದ ಹೊಸತಲೆಮಾರಿನ ಅನೇಕ ವಿದ್ಯಾರ್ಥಿಗಳು ಮುಕ್ತ ಕಲೆಗಳ ಮೂಲಕ ಸೃಜನಶೀಲ ಜೀವನದ ಅನುಭವಕ್ಕೆ ತೆರೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.ಹಿರಿಯ ಕಲಾಪತ್ರಕರ್ತ ಎಸ್. ಆರ್. ರಾಮಕೃಷ್ಣ, ಕಲಾ ಪತ್ರಿಕೋದ್ಯಮದ ಅಗತ್ಯವನ್ನು ಒತ್ತಿ ಹೇಳಿದರು. ಎಡಿನ್ ಬರೋ ನೇಪಿಯರ್ ವಿಶ್ವ ವಿದ್ಯಾಲಯದ ಡಾ. ಭಾಶಾಬಿ ಫ್ರೇಸರ್ ಕಲೆ ಮತ್ತು ಸಾಹಿತ್ಯದ ಶಕ್ತಿಯನ್ನು ಠಾಗೋರ್ ರ ಕಾಬೂಲಿವಾಲ ಕಥೆಯನ್ನು ನೆನಪಿಸಿಕೊಂಡು ವಿವರಿಸಿದರು.
ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ ವರದೇಶ್ ಹಿರೇಗಂಗೆ, ಇಕೋಸೊಫಿ, ಏಸ್ತೆಟಿಕ್ಸ್ ಮತ್ತು ಪೀಸ್ ವಿದ್ಯಾರ್ಥಿಗಲ್ಲದೆ ಎಲ್ಲರಿಗೂ ಅಗತ್ಯವಿರುವ ತುರ್ತು ಶಿಕ್ಷಣವಾಗಿದೆ ಎಂದರು. ಡಾ. ಭ್ರಮರಿ ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು.