ಮಂಡ್ಯ ನಗರದ ಬಂದೀಗೌಡ ಬಡಾವಣೆಯಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಳಯದ ಕುಂಭಾಭಿಷೇಕ ಮತ್ತು ಲೋಕಾರ್ಪಣೆ ಸಮಾರಂಭ ಮೆ.೫ ರಿಂದ ಮೇ ೭ರವರೆಗೆ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಬಂದೀಗೌಡ ಬಡಾವಣೆಯಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಾಳಯದ ಕುಂಭಾಭಿಷೇಕ ಮತ್ತು ಲೋಕಾರ್ಪಣೆ ಸಮಾರಂಭ ಮೆ.೫ ರಿಂದ ಮೇ ೭ರವರೆಗೆ ನಡೆಯಲಿದೆ ಎಂದು ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ ಹೇಳಿದರು.ಮಂಗಳವಾರ ಸಂಜೆ ೪ ಗಂಟೆಗೆ ಗಣಪತಿ ಹೋಮ, ವಾಸ್ತುಹೋಮ, ದೇವಾಲಯ ಪ್ರವೇಶ ನಡೆಯಲಿದೆ. ಬುಧವಾರ ಬೆಳಗ್ಗೆ ಯಾಗಶಾಲಾ ಪ್ರವೇಶ ಮತ್ತು ಹೋಮ, ಪೂರ್ಣಾಹುತಿ ನಡೆಯಲಿದೆ. ಸಂಜೆ ೪ ಗಂಟೆಗೆ ಸತ್ಸಂತ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ದೇಗುಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೇ ೭ರಂದು ಬೆಳಗ್ಗೆ ೧೦ ಗಂಟೆಗೆ ಶ್ರೀ ಆದಿಚುಂಚನಗಿರಿ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯಸಾನಿಧ್ಯದಲ್ಲಿ, ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿಯಲ್ಲಿ ಲೋಕಾರ್ಪಣಾ ಸಮಾರಂಭ ನಡೆಯಲಿದೆ ಎಂದರು.ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ, ಬೆಂಗಳೂರು ಶ್ರೀಕೈಲಾಸಾಶ್ರಮದ ಶ್ರೀ ಜಯೇಂದ್ರಪುರಿ ಸ್ವಾಮೀಜಿ, ದಾವಣಗೆರೆ ರಾಣೆಬೆನ್ನೂರಿನ ಐರಣಿ ಹೊಳೆ ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಬೆಂಗಳೂರು ಓಂಕಾರಾಶ್ರಮದ ಶ್ರೀ ಮಧುಸೂಧನಾನಂದಪುರಿ ಸ್ವಾಮೀಜಿ, ಕೆ.ಆರ್.ನಗರ ಕಾಗಿಲೆನೆಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ, ನೆಲಮಂಗಲ ಶ್ರೀ ಶನಿಮಹಾತ್ಮ ದೇವಸ್ಥಾನದ ಶ್ರೀಹನುಮಂತಪ್ಪ ಸ್ವಾಮಿ, ಚಿತ್ರದುರ್ಗದ ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಮಹಾಸ್ವಾಮೀಜಿ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಪಾಲ್ಗೊಳ್ಳುವರು.ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ವಿಧಾನಸಭೆ, ವಿಧಾನಪರಿಷತ್ ಶಾಸಕರು, ಮಾಜಿ ಶಾಸಕರು ಹಾಗೂ ಇನ್ನಿತರ ಗಣ್ಯರು ಪಾಲ್ಗೊಳ್ಳುವರು.
ಶ್ರೀ ಕಾಲಭೈರವೇಶ್ವರ ಸ್ವಾಮಿ, ಶ್ರೀ ಚಂದ್ರಮೌಳೇಶ್ವರ ಸ್ವಾಮಿ, ಶ್ರೀ ಭ್ರಮರಾಂಬಿಕೆ, ಶ್ರೀ ವೆಂಕಟೇಶ್ವರ ಸ್ವಾಮಿ, ಶ್ರೀರಾಮ ಪರಿವಾರ, ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ನವಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಮತ್ತೊಂದು ವಿಶೇಷವೆಂದರೆ ಇದೇ ದೇವಾಲಯದಲ್ಲಿ ಜೈನ ದೇವರ ರಾಮ್‌ದೇವರ ಪೂಜೆಗೂ ಅವಕಾಶ ಕಲ್ಪಿಸಲಾಗಿದೆ ಎಂದರು.ಸುಮಾರು ೩ ಕೋಟಿ ರು. ವೆಚ್ಚದಲ್ಲಿ ದೇಗುಲವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ೧.೫ ಕೋಟಿ ರು. ಹಣವನ್ನು ದಾನಿಗಳು ಉಳಿದ ೧.೫ ಕೋಟಿ ರು. ಹಣವನ್ನು ಮಠದಿಂದ ಭರಿಸಲಾಗಿದೆ. ದೇಗುಲದ ಕೆಳಭಾಗದಲ್ಲಿ ಯೋಗ ಮತ್ತು ಧ್ಯಾನಕೇಂದ್ರವನ್ನು ನಿರ್ಮಿಸಲಾಗಿದೆ. ಮಂಗಳವಾರ ಮತ್ತು ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಮತ್ತು ಮಧ್ಯಾಹ್ನ ಸೇರಿ ಒಟ್ಟು ಎಂಟು ಸಾವಿರ ಭಕ್ತರಿಗೆ ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅನ್ನಸಂತರ್ಪಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಚಂದ್ರಶೇಖರ್, ಜಯರಾಂ, ರವಿಶಂಕರ್, ಅಂಜನಾ, ಎಲ್.ಕೃಷ್ಣ ಇದ್ದರು.