ದುಗ್ಗನಹಳ್ಳಿಯಲ್ಲಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆರೆ

| Published : Nov 04 2024, 12:25 AM IST

ದುಗ್ಗನಹಳ್ಳಿಯಲ್ಲಿ ಶ್ರೀ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಜಾತ್ರಾ ಮಹೋತ್ಸವದಲ್ಲಿ ವಿವಿಧೆಡೆಯಿಂದ ದೇವರ ದರ್ಶನಕ್ಕೆ ಆಗಮಿಸಿದ 15 ರಿಂದ 20 ಸಾವಿರ ಭಕ್ತರು ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ದುಗ್ಗನಹಳ್ಳಿಯಲ್ಲಿ ಶ್ರೀ ಮಹದೇಶ್ವರಸ್ವಾಮಿ ರಥೋತ್ಸವ, ತೆಪ್ಪೋತ್ಸವದೊಂದಿಗೆ ಐದು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಬಿದ್ದಿತು.

ಕಳೆದ ಐದು ದಿನಗಳ ಜಾತ್ರಾ ಮಹೋತ್ಸವದ ಅಂಗವಾಗಿ ದೇವರಿಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಭಕ್ತಿ ಪ್ರಧಾನವಾಗಿ ಜರುಗಿದವು. ಶ್ರೀ ಮಹದೇಶ್ವರಸ್ವಾಮಿಗೆ ಹಾಲರವೆ, ರಥೋತ್ಸವ ಹಾಗೂ ಹುಲಿವಾಹನ ಉತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಬಣೆಯಿಂದ ನಡೆಯಿತು.

ದೇವಸ್ಥಾನದಿಂದ ಎರಡು ಕಿಮೀ ದೂರದ ಹಂಚೀಪುರದ ಹಾಲು ಹಳ್ಳದಿಂದ ದುಗ್ಗನಹಳ್ಳಿ, ಮುದ್ದೇಗೌಡನದೊಡ್ಡಿ, ಹಂಚೀಪುರ ವ್ಯಾಪ್ತಿಯ ನೂರಾರು ಹೆಣ್ಣುಮಕ್ಕಳು ಸಡಗರ, ಸಂಭ್ರಮದಿಂದ ಗಂಗೆಮಾತೆಗೆ ವಿಶೇಷ ಪೂಜೆ ಸಲ್ಲಿಸಿ ಹಾಲರವೆ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.

ಮುಂಜಾನೆಯಿಂದಲೇ ದೇವರಿಗೆ ಎಣ್ಣೆಮಜ್ಜನ ಸೇವೆ, ತೈಲಾಭಿಷೇಕ, ಬಿಲ್ವಾರ್ಚಣೆ ಸೇವೆ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳನ್ನು ಅರ್ಚಕರ ತಂಡ ನೆರವೇರಿಸಿತು. ರಥೋತ್ಸವಕ್ಕೆ ಭಕ್ತರು ಹಣ್ಣು- ಜವನ ಎಸೆದು ಹರಕೆ ತೀರಿಸಿದರು. ನಂತರ ಹುಲಿವಾಹನದಲ್ಲಿ ಮಹದೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತ ಮೆರವಣಿಗೆ ನಡೆಸಲಾಯಿತು. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ದನಗಳು ಹಾಗೂ ಕುರಿಗಳನ್ನು ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಿಸಿದರು.

ಜಾತ್ರಾ ಮಹೋತ್ಸವದಲ್ಲಿ ವಿವಿಧೆಡೆಯಿಂದ ದೇವರ ದರ್ಶನಕ್ಕೆ ಆಗಮಿಸಿದ 15 ರಿಂದ 20 ಸಾವಿರ ಭಕ್ತರು ಭಾಗಿಯಾಗಿ ದೇವರ ಪ್ರಸಾದ ಸ್ವೀಕರಿಸಿದರು.

ದೇವಾಸ್ಥಾನ ಹಾಗೂ ಆವರಣದಲ್ಲಿ ಅಳವಡಿಸಿದ್ದ ವಿದ್ಯುತ್ ದೀಪಾಂಲಕಾರ ಗಮನ ಸೆಳೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಡೊಳ್ಳುಕುಣಿತ, ವೀರಗಾಸೆ, ಕೀಲು ಕುದುರೆ, ಕಂಸಾಳೆ ಕಲಾವಿದರು ತಮ್ಮ ಪ್ರದರ್ಶನದ ಮೂಲಕ ನೆರೆದಿದ್ದ ಜನರನ್ನು ರಂಜಿಸಿದರು.

ಇದೇ ವೇಳೆ ಹರಕೆ ಹೊತ್ತ ನೂರಾರು ಮಂದಿ ಬಾಯಿಬೀಗ ಸೇವೆ ಮೂಲಕ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.