ಸಾರಾಂಶ
ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಮತ್ತು ತೆರೆ ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಡೆಯಿತು.
ಸುಬ್ರಮಣಿ.ಆರ್. ಕನ್ನಡಪ್ರಭ ವಾರ್ತೆ ಸಿದ್ದಾಪುರ
ಇಲ್ಲಿನ ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾ ಭಕ್ತಿಯೊಂದಿಗೆ ಸಂಭ್ರಮ ಸಡಗರದಿಂದ ನೆರೆವೇರಿತು.ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದು ಪುನೀತರಾದರು. ಐದು ದಿನಗಳ ಕಾಲ ನಡೆದ ವಾರ್ಷಿಕೋತ್ಸವದಲ್ಲಿ ಗಣಪತಿ ಹೋಮ, ಚಂಡಿಕಾ ಹೋಮ , ದುರ್ಗಾ ಪೂಜೆ, ಆಶ್ಲೇಷಾ ಬಲಿ, ನಾಗಹೋಮ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆದವು.
ದೇವಾಲಯದ ಒಂದು ಸೇರಿದಂತೆ ಮೂರು ಭಕ್ತರ ಹರಕೆಯ ಒಟ್ಟು ನಾಲ್ಕು ವಸೂರಿ ಮಾಲ ಕೋಲವು ಕೊಡಗಿನ ಪುಣ್ಯ ನದಿ ಕಾವೇರಿಯಿಂದ ಹೊರಟು ಪಟ್ಟಣ ಪ್ರವೇಶಿಸಿದಂತೆ ಸಾವಿರಾರು ಭಕ್ತರು ನಡು ರಾತ್ರಿಯಲ್ಲಿ ದೇವಿಯನ್ನು ಬರಮಾಡಿಕೊಂಡು ಚಂಡೆ ವಾದ್ಯ ಮೇಳಗಳ ತಾಳಕ್ಕೆ ಕುಣಿದು ಸಂಭ್ರಮಿಸಿದರು. ದೇವಾಲಯದಲ್ಲಿ ಜರುಗಿದ ಮುತ್ತಪ್ಪನ, ತಿರುವಪ್ಪ, ಶಾಸ್ತಪ್ಪ, ಗುಳಿಗ, ಭಗವತಿ, ವಿಷ್ಣುಮೂರ್ತಿ ಹಾಗೂ ವಸೂರಿ ಮಾಲ ತೆರೆಯನ್ನು ಭಕ್ತರು ನೋಡಿ ಕಣ್ತುಂಬಿಕೊಂಡರು. ವಾರ್ಷಿಕೋತ್ಸವದ ಪ್ರಯುಕ್ತ ಭಾರತೀಯ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಭರತನಾಟ್ಯ ಪ್ರದರ್ಶನ ಭಕ್ತರ ಗಮನ ಸೆಳೆಯಿತು.ಈ ಸಂದರ್ಭ ದೇವಾಲಯದ ಸಮಿತಿ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಕಾರ್ಯದರ್ಶಿ ಸಿಜು, ಖಜಾಂಜಿ ಬಾವು, ನಿರ್ದೇಶಕರಾದ ಅನಿಲ್, ಪ್ರಕಾಶ್, ಸುಬ್ರಮಣಿ, ರಾಜೀವ್, ಶ್ರೀಧರ, ಸೇರಿದಂತೆ ದೇವಾಲಯ ಸಮಿತಿ ಸದಸ್ಯರು ಇದ್ದರು.