ಕಾಫಿನಾಡಿನಲ್ಲಿ ಕಾಡಾನೆಗಳ ಸ್ಥಳಾಂತರ ವಿಚಾರವಾಗಿ ರೈತರು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿರುವ ನಡುವೆಯೂ ಅರಣ್ಯ ಇಲಾಖೆಯ ಅಧಿಕಾರಿಗಳು ‘ಆಪರೇಷನ್ ಗಜ’ ಕಾರ್ಯಾಚರಣೆಯನ್ನು ‘ಸಹಜ ಸಂಚಾರ’ದ ಹೆಸರಿನಲ್ಲಿ ಮುಂದುವರಿಸುವುದಕ್ಕೆ ಪ್ಲಾನ್‌ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡಿನಲ್ಲಿ ಕಾಡಾನೆಗಳ ಸ್ಥಳಾಂತರ ವಿಚಾರವಾಗಿ ರೈತರು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಶಾಸಕರು ರಾಜೀನಾಮೆ ಎಚ್ಚರಿಕೆ ನೀಡಿರುವ ನಡುವೆಯೂ ಅರಣ್ಯ ಇಲಾಖೆಯ ಅಧಿಕಾರಿಗಳು ‘ಆಪರೇಷನ್ ಗಜ’ ಕಾರ್ಯಾಚರಣೆಯನ್ನು ‘ಸಹಜ ಸಂಚಾರ’ದ ಹೆಸರಿನಲ್ಲಿ ಮುಂದುವರಿಸುವುದಕ್ಕೆ ಪ್ಲಾನ್‌ ಮಾಡಿದ್ದಾರೆ.

ಹೌದು. ಹಾಸನ ಭಾಗದಿಂದ ಮೂಡಿಗೆರೆ ಕಡೆಗೆ ಬಂದಿರುವ 39 ಕಾಡಾನೆಗಳನ್ನು ಸಹಜ ಸಂಚಾರದ ಹೆಸರಿನಲ್ಲಿ ಭದ್ರಾ ಅಭಯಾರಣ್ಯಕ್ಕೆ ಸೇರಿಸಲೇ ಬೇಕೆಂಬ ಹಠಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಿದ್ದಂತೆ ಕಾಣುತ್ತಿದೆ. ಜತೆಗೆ, ಅಧಿಕಾರಿಗಳ ನೆಡೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಮೂಡಿಗೆರೆ, ಶೃಂಗೇರಿ ಭಾಗದ ರೈತರು, ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆಯ ಕ್ರಮವನ್ನು ವಿರೋಧಿಸುತ್ತಿವೆ. ಆನೆಗಳನ್ನು ಬಲವಂತವಾಗಿ ಸ್ಥಳಾಂತರಿಸುವುದರಿಂದ ಮಲೆನಾಡಿನ ಜನವಸತಿ ಪ್ರದೇಶಗಳಲ್ಲಿ ಮತ್ತಷ್ಟು ಸಮಸ್ಯೆ ಎದುರಾಗಲಿದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿವೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಸರ್ಕಾರದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲ ವಿರೋಧದ ನಡುವೆಯೂ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ತಾವು ನಡೆದಿದ್ದೆ ದಾರಿ ಎಂಬಂತೆ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸೇರಿಸುವ ನಿಲುವಿನಿಂದ ಹಿಂದೆ ಸರಿದಿಲ್ಲ.

ಮಂಗಳವಾರ ನಗರದ ಅರಣ್ಯ ಭವನದಲ್ಲಿ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೀನಾಕ್ಷಿ ಆರ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಹಜ ಸಂಚಾರ ಹೆಸರಿನಲ್ಲಿ ಅಪರೇಷನ್‌ ಗಜ ಕಾರ್ಯಾಚರಣೆಯ ಮುಂದುವರೆಸುವುದಕ್ಕೆ ರೂಪುರೇಷೆ ಸಿದ್ಧಪಡಿಸಲಾಗಿದೆ.

ಈ ಕುರಿತು ಅರಣ್ಯ ಇಲಾಖೆಯ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ) ಡಾ. ಮನೋಜ್ ರಾಜನ್ ಖುದ್ದು ಮಾಹಿತಿ ನೀಡಿದ್ದಾರೆ.

ಆನೆಗಳನ್ನು ಬಲವಂತವಾಗಿ ಓಡಿಸದೆ ಅವುಗಳ ಸ್ವಾಭಾವಿಕ ಚಲನವಲನಕ್ಕೆ ಅವಕಾಶ ಕಲ್ಪಿಸಿ ಭದ್ರಾ ಅಭಯಾರಣ್ಯಕ್ಕೆ ಸೇರಿಸಲಾಗುವುದು ಎಂಬ ಸ್ಪಷ್ಟ ಹೇಳಿಕೆಯನ್ನು ನೀಡಿದ್ದಾರೆ.

700ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ: ಈ ಕಾರ್ಯಾಚರಣೆಗೆ ಅರಣ್ಯ ಇಲಾಖೆಯ 450 ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ 250ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಂದಾಯ, ಆರ್‌ಡಿಪಿಆರ್, ಪೊಲೀಸ್ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೂ ಜವಾಬ್ದಾರಿ ನೀಡಲಾಗಿದೆ.

ಆನೆಗಳ ಚಲನವಲನದ ಮೇಲೆ ನಿಗಾ ಇರಿಸಲು ಐದರಿಂದ ಆರು ಡ್ರೋನ್ ಕ್ಯಾಮರಾ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಆನೆಗಳು ಸಾಗುವ ದಿಕ್ಕು ಮತ್ತು ಚಲನವಲನದ ಮಾಹಿತಿಯನ್ನು ಅಧಿಕಾರಿಗಳಿಗೆ ಕ್ಷಣಕ್ಷಣಕ್ಕೂ ರವಾನಿಸುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಜೀವ ಮತ್ತು ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮನೋಜ್ ರಾಜನ್ ತಿಳಿಸಿದ್ದಾರೆ.

ಭವಾನಿ ಎಸ್ಟೇಟ್‌ನಲ್ಲಿ 39 ಆನೆಗಳು: ಮೂಡಿಗೆರೆ ಭಾಗಕ್ಕೆ ಬಂದಿದ್ದ ಆನೆಗಳು ಎರಡು ಗುಂಪುಗಳಾಗಿ ಚದುರಿಹೋಗಿದ್ದವು. ಮಂಗಳವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ಎರಡೂ ಗುಂಪುಗಳು ಒಂದಾಗಿ ಘಟ್ಟದಹಳ್ಳಿ ಸಮೀಪದ ಸುಮಾರು 80 ಎಕರೆ ವಿಸ್ತೀರ್ಣದ ಭವಾನಿ ಎಸ್ಟೇಟ್‌ನಲ್ಲಿ ಜಮಾವಣೆಗೊಂಡಿವೆ. ಇಲ್ಲಿಂದ ತತ್ಕೋಳ ಮೀಸಲು ಅರಣ್ಯ ಪ್ರದೇಶ ಕೇವಲ 3 ರಿಂದ 4 ಕಿ.ಮೀ. ದೂರದಲ್ಲಿದೆ. ಸುಮಾರು 2 ಸಾವಿರ ಎಕರೆ ವ್ಯಾಪ್ತಿಯ ಈ ಅರಣ್ಯದಲ್ಲಿ ಸೋಲಾರ್ ಬೇಲಿ ವ್ಯವಸ್ಥೆಯೂ ಇರುವುದರಿಂದ ಆನೆಗಳು ಸಹಜವಾಗಿ ಅರಣ್ಯ ಪ್ರವೇಶಿಸುವ ಸಾಧ್ಯತೆ ಇದೆ. ಬೇರೆ ಮಾರ್ಗದಲ್ಲಿ ಸಾಗಿದರೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.

13 ಆನೆ ಮತ್ತೆ ವಾಪಸ್‌ ಹಾಸನ ಕಡೆಗೆ: ಬೇಲೂರು ಭಾಗದಿಂದ ಒಟ್ಟು 54 ಆನೆಗಳು ಬಂದಿದ್ದು, ಈ ಪೈಕಿ 39 ಆನೆಗಳು ಮೂಡಿಗೆರೆ ಸಮೀಪಿದಲ್ಲಿ ಬೀಡುಬಿಟ್ಟಿವೆ. ಉಳಿದ 13 ಆನೆಗಳು ಸಹಜವಾಗಿ ಬೇಲೂರು ಮತ್ತು ಹಾಸನ ಭಾಗದತ್ತ ಹಿಂದಿರುಗುತ್ತಿವೆ. ಈ ಆಧಾರದಲ್ಲಿ 39 ಆನೆಗಳನ್ನು ಭದ್ರಾ ಆಭಯಾರಣ್ಯಕ್ಕೆ ಸೇರಿದ ಆನೆಗಳಾಗಿವೆ. ಅವುಗಳ ರೇಡಿಯೋ ಕಾಲರ್‌ ಐಡಿಯಲ್ಲಿ ಇದು ದಾಖಲಾಗಿದೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಡುಪ್ರಾಣಿಗಳ ಕಾಟಕ್ಕೆ ಜಿಲ್ಲೆಯ ಜನ ಕಂಗಾಲು: ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿ ಮುಂದುವರಿದಿದ್ದು, ಒಂದೆಡೆ ಗ್ರಾಮಗಳತ್ತ ಹಿಂಡು ಹಿಂಡಾಗಿ ಲಗ್ಗೆ ಇಡುತ್ತಿರುವ ಕಾಡಾನೆಗಳು, ಮತ್ತೊಂದೆಡೆ ಹೆದ್ದಾರಿಗಳಲ್ಲಿ ಸಂಚರಿಸಿ ವಾಹನ ಸವಾರರಿಗೆ ಅಡ್ಡಿಯಾಗುತ್ತಿರುವ ಕಾಡುಕೋಣಗಳು, ತೋಟಗಳಿಗೆ ನುಗ್ಗಿ ದಾಳಿ ನಡೆಸುತ್ತಿರುವ ಚಿರತೆಗಳಿಂದ ಜನರು ಕಂಗಾಲಾಗಿದ್ದಾರೆ.

ಮೂಡಿಗೆರೆ ಭಾಗದಲ್ಲಿ ಕಾಡಾನೆಗಳ ಹಿಂಡು ಗುಂಪಾಗಿ ಕಾಣಿಸಿಕೊಂಡು ದಾಳಿ ನಡೆಸಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಇದೇ ವೇಳೆ ಶೃಂಗೇರಿ ರಾಜ್ಯ ಹೆದ್ದಾರಿಯ ಅರೇನೂರು ಗ್ರಾಮದ ಹಕ್ಕಿಮಕ್ಕಿ ಸಮೀಪ ಕಾಡುಕೋಣವೊಂದು ರಸ್ತೆಗೆ ಬಂದಿದ್ದು, ವಾಹನ ಸವಾರರು ಆತಂಕದಿಂದ ಸಂಚರಿಸುವಂತಾಗಿದೆ. ಇನ್ನು ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆಯಲ್ಲಿ ತೋಟವೊಂದಕ್ಕೆ ನುಗ್ಗಿದ ಚಿರತೆ ದಾಳಿ ನಡೆಸಿ ಎರಡು ನಾಯಿಗಳನ್ನು ಬಲಿ ಪಡೆದಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದು, ತೋಟಗಳಿಗೆ ತೆರಳಲು ಹಾಗೂ ರಾತ್ರಿ ವೇಳೆ ಮನೆಯಿಂದ ಹೊರಬರಲು ಹಿಂದೇಟು ಹಾಕುವಂತಾಗಿದೆ. ಮಲೆನಾಡಿನ ವಿವಿಧ ಭಾಗಗಳಲ್ಲಿ ಕಾಡಾನೆ, ಕಾಡುಕೋಣ ಹಾಗೂ ಚಿರತೆಗಳ ನಿರಂತರ ಸಂಚಾರದಿಂದ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ. ಕಾಡುಪ್ರಾಣಿಗಳಿಂದ ಬೆಳೆ ಹಾನಿ, ಸಾಕುಪ್ರಾಣಿಗಳ ಮೇಲೆ ದಾಳಿ ಹಾಗೂ ಮಾನವ ಜೀವಕ್ಕೆ ಎದುರಾಗುತ್ತಿರುವ ಅಪಾಯದಿಂದ ಗ್ರಾಮೀಣ ಭಾಗದ ಜನರು ಆತಂಕದಲ್ಲಿ ದಿನದೂಡುವಂತಾಗಿದೆ.