ಕನ್ನಡಪ್ರಭ ವಾರ್ತೆ ಬೆಂಗಳೂರು
ಗುರುವಾರ ರಾತ್ರಿ ಬಿದ್ದ ಗಾಳಿ ಮಳೆಗೆ ಹಲವೆಡೆ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ಶನಿವಾರವೂ ಅಡಚಣೆ ಉಂಟಾಗಿತ್ತು.ನಗರದ ಇಂದಿರಾನಗರ, ವಿಜಯನಗರ, ಮಲ್ಲೇಶ್ವರಂ ಸೇರಿದಂತೆ ಕೇಂದ್ರ ಪಾಲಿಕೆ ಹಾಗೂ ಪಶ್ಚಿಮ ಪಾಲಿಕೆ ವ್ಯಾಪ್ತಿಗಳಲ್ಲಿ ಹಲವು ಮರಗಳು ಧರೆಗೆ ಉರುಳಿದ್ದು, ಪಾಲಿಕೆ ಸಿಬ್ಬಂದಿ ಹಾಗೂ ಖಾಸಗಿ ತಂಡಗಳು ಕ್ರೇನ್ ಮೂಲಕ ಮರ ಕತ್ತರಿಸಿ ಪಕ್ಕಕ್ಕೆ ಸರಿಸುವ ಕಾರ್ಯ ಮಾಡುತ್ತಿವೆ.ಸುಮಾರು 157 ಬೃಹದಾಕಾರದ ಮರಗಳು ಮುರಿದು ಬಿದ್ದಿದ್ದು, ಅವುಗಳನ್ನು ಕತ್ತರಿಸಿ ತೆಗೆಯುವುದು ನಿಧಾನಗತಿಯಲ್ಲಿ ನಡೆಯುತ್ತಿದೆ.
ಒಂದು ವೇಳೆ ಕತ್ತರಿಸಿದ ತುಂಡು ಮನೆ ಮೇಲೆ ಬಿದ್ದರೆ ಅಲ್ಲಿಯೂ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅವುಗಳನ್ನು ಹಗ್ಗ ಹಾಗೂ ಸರಪಳಿಗಳ ಮೂಲಕ ಕಟ್ಟಿ ತೆಗೆಯಲಾಗುತ್ತಿದೆ. ಮೊದಲ ಹಂತದಲ್ಲಿ 157 ಮರಗಳನ್ನು ಟ್ರಾಕ್ಟರ್, ಟಿಪ್ಪರ್ ಹಾಗೂ ಲಾರಿಗಳಲ್ಲಿ ಸಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಅರಣ್ಯ ವಿಭಾಗದ ಅಧಿಕಾರಿಗಳು ಕನ್ನಡಪ್ರಭಕ್ಕೆ ತಿಳಿಸಿದರು.ಶನಿವಾರ ಬೆಳಿಗ್ಗೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಮರಗಳು ಉರುಳಿಬಿದ್ದ ಸ್ಥಳಗಳಿಗೆ ಭೇಟಿ ನೀಡಿ ಕೂಡಲೆ ಅವುಗಳನ್ನು ಸ್ಥಳದಿಂದ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದಿರಾನಗರದ ಸಿಎಂಎಚ್ ರಸ್ತೆ,. ಶ್ರೀರಾಮ ದೇವಸ್ಥಾನ ರಸ್ತೆಯ ಅಯ್ಯಪ್ಪ ದೇವಸ್ಥಾನ ಹತ್ತಿರ, ನ್ಯೂ ತಿಪ್ಪಸಂದ್ರ, ರಾಜಭವನ ರಸ್ತೆ, ಎಂ. ಎಸ್. ಬಿಲ್ಡಿಂಗ್, ಹೆಚ್. ಎ. ಎಲ್ ಹಂತ-2, ಹಂತ-3, ಹಂತ-1, ಹಲಸೂರು, ಬ್ರಿಗೇಡ್ ರಸ್ತೆ, ದೊಮ್ಮಲೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಖಾಸಗಿ ತಂಡ ಬಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.