ಸಾರಾಂಶ
ರೆಸಾರ್ಟ್ ಮಾಲೀಕರು ಆಯುಕ್ತರ ಸೂಚನೆ ಕಡೆಗಣಿಸಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿಕೊಂಡಿದ್ದಲ್ಲದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.
ಗಂಗಾವತಿ: ತಾಲೂಕಿನ ಐತಿಹಾಸಿಕ ಅಂಜನಾದ್ರಿ ಸುತ್ತಮುತ್ತಲಿನ ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್‌ಗಳ ತೆರವು ಕಾರ್ಯ ಗಂಗಾವತಿ ಕಂದಾಯ ಇಲಾಖೆ ಮತ್ತು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ಮಂಗಳವಾರ ನಡೆಯಿತು.
ಕೃಷಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್ ಬಗ್ಗೆ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಆಯುಕ್ತರು ಈ ಹಿಂದೆ ಸ್ವಯಂಪ್ರೇರಿತ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ರೆಸಾರ್ಟ್ ಮಾಲೀಕರು ಆಯುಕ್ತರ ಸೂಚನೆ ಕಡೆಗಣಿಸಿ ಅನಧಿಕೃತವಾಗಿ ರೆಸಾರ್ಟ್ ನಿರ್ಮಿಸಿಕೊಂಡಿದ್ದಲ್ಲದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.ಧಾರವಾಡ ಉಚ್ಛ ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿ ಕೂಡಲೆ ಕಾರ್ಯಾಚರಣೆ ನಡೆಸಬೇಕೆಂದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಆನೆಗೊಂದಿ 2, ಹನುಮನಹಳ್ಳಿ 2, ಸಾಣಾಪುರ 1ರೆಸಾರ್ಟ್ ತೆರವುಗೊಳಿಸಲಾಯಿತು.
ಅಂಜನಾದ್ರಿ ಕಲುಷಿತ: ಹನುಮ ಜನಿಸಿದ ಸ್ಥಳ ಎಂದೇ ಖ್ಯಾತಿಯಾಗಿರುವ ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ರೆಸಾರ್ಟ್‌ಗಳಿಂದ ವಾತಾವರಣ ಕಲುಷಿತಗೊಂಡಿದೆ ಎಂಬ ದೂರು ಕೇಳಿ ಬಂದಿತ್ತು. ಈ ರೆಸಾರ್ಟ್‌ಗಳಲ್ಲಿ ವಿದೇಶದಿಂದ ಬರುವ ಪ್ರವಾಸಿಗರಿಗೆ ವಾಸ್ತವ್ಯ ಮಾಡಲು ರೆಸಾರ್ಟ್ ಮಾಲೀಕರು ವ್ಯವಸ್ಥೆ ಮಾಡುತ್ತಿದ್ದರು. ಅವರು ಕೆಲವೊಮ್ಮೆ ಅಸಭ್ಯ, ಅಸಹ್ಯವಾಗಿ ವರ್ತಿಸುತ್ತಿದ್ದರೆಂಬ ಆರೋಪವೂ ಇದೆ. ಈ ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪಂಪಾ ಸರೋವರ, ಋಷ್ಯಮುಖ ಪರ್ವತ, ಚಿಂತಾಮಣಿ, ನವವೃಂದಾವನ ಸೇರಿದಂತೆ ಐತಿಹಾಸಿಕ ಪ್ರದೇಶಗಳು ಇವೆ. ಆದರೆ ರೆಸಾರ್ಟ್ ನಿರ್ಮಾಣದಿಂದ ಬರುವ ಭಕ್ತರಿಗೆ ತೊಂದರೆಯಾಗುವುದಲ್ಲದೆ, ಊಟ, ಉಪಾಹಾರಗಳಿಗೆ ಹೆಚ್ಚಿನ ಬೆಲೆ ಆಕರಣೆ ಮಾಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿತ್ತು.ಪೊಲೀಸ್ ಬಿಗಿ ಭದ್ರತೆ:ಅಂಜನಾದ್ರಿ ಸುತ್ತಮುತ್ತಲಿನ ಪ್ರದೇಶಗಳ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ರೆಸಾರ್ಟ್ ಗಳ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ 50ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಜೆಸಿಬಿ ಯಂತ್ರಗಳ ಮೂಲಕ ಕಾರ್ಯಾಚರಣೆ ನಡೆಯಿತು.
ಕಾರ್ಯಾಚರಣೆ ಸಂದರ್ಭದಲ್ಲಿ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಆಯುಕ್ತ ರಮೇಶ, ತಹಸೀಲ್ದಾರ ನಾಗರಾಜ್, ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ರಂಗಪ್ಪ ದೊಡ್ಮನಿ, ಪಿಎಸ್ ಐ ವೆಂಕಟೇಶ ಚವ್ಹಾಣ ಹಾಗೂ ಆನೆಗೊಂದಿ, ಸಾಣಾಪುರ ಗ್ರಾಪಂ ಅಧಿಕಾರಿಗಳು ಭಾಗವಹಿಸಿದ್ದರು.;Resize=(128,128))
;Resize=(128,128))