ಸಾರಾಂಶ
ಕಾವಾಡಿ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸೋಮವಾರ ಅಂತ್ಯಗೊಂಡಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಕಾವಾಡಿ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಸೋಮವಾರ ಅಂತ್ಯಗೊಂಡಿದೆ.ಕಳೆದ ಕೆಲವು ದಿನಗಳಿಂದ ಇಲ್ಲಿನ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ಫಸಲು ನಾಶಪಡಿಸುವುದರೊಂದಿಗೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಒತ್ತಾಯ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶಿವರಾಂ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ ಆನೆಗಳನ್ನು ಅಟ್ಟಿಸಲು ಮುಂದಾದರು. ಈ ವೇಳೆ ಕೆಲ ಆನೆಗಳು ಸಿಬ್ಬಂದಿಗಳ ಮೇಲೆ ದಾಳಿಗೂ ಮುಂದಾದ ಪ್ರಸಂಗ ಕಂಡುಬಂತು.9 ಮರಿ ಸೇರಿದಂತೆ ಸುಮಾರು 30 ಕ್ಕೂ ಅಧಿಕ ಕಾಡಾನೆಗಳನ್ನು ವಾಪಸ್ ಅರಣ್ಯಕ್ಕೆ ಅಟ್ಟಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ಉಪ ವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಸೇರಿದಂತೆ ತಿತಿಮತಿ ವಿರಾಜಪೇಟೆ ಹಾಗೂ ಅಮ್ಮತ್ತಿಯ ಆರ್.ಆರ್.ಟಿ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.