ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ 3 ದಿನಗಳ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಹಿರಿಯ ಸಾಹಿತಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದು ಗಮನ ಸೆಳೆಯಿತು.ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಕೆಲ ವಿದ್ಯಾರ್ಥಿಗಳು ನಾಡು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿವಿನ ಬಗ್ಗೆ ಖುಷಿಯಿಂದಲೇ ಮಾತನಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ.
---------ಸಾಹಿತ್ಯ ಸಮ್ಮೇಳನ ಯುವಜನತೆಗೆ ಸುವರ್ಣಾವಕಾಶವಾಗಿದೆ. ಸಮ್ಮೇಳನದಲ್ಲಿ ನಡೆಯುವ ಪ್ರತಿಯೊಂದು ಗೋಷ್ಠಿಗಳು, ಹಿರಿಯ ಸಾಹಿತಿಗಳ ಚಿಂತನೆಗಳು ನಮ್ಮ ಬದುಕಿಗೆ ದಾರಿದೀಪವಾಗುತ್ತವೆ. ಪ್ರತಿಯೊಬ್ಬರೂ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಈ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಬೇಕು. ಸಾಹಿತಿಗಳು ಬರೆದಿರುವ ಪುಸ್ತಕಗಳು, ಕಾದಂಬರಿಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಬೇಕು.
ಎಂ.ಸವಿತಾ, ತುಮಕೂರು, ಮೈಸೂರು ವಿವಿ ಎಂಎ ವಿದ್ಯಾರ್ಥಿನಿ.-------------
ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನಶಿಸುತ್ತಿರುವ, ನಶಿಸಿ ಹೋಗುವ ಆತಂಕದಲ್ಲಿದೆ. ಈ ಬಗ್ಗೆ ಕನ್ನಡಿಗರು ಜಾಗೃತರಾಗಬೇಕು. ಕನ್ನಡ ಸಾಹಿತ್ಯ ಸಮ್ಮೇಳನಗಳು ಕನ್ನಡ ಭಾಷೆ ಉಳಿವಿಗಾಗಿ ಹಿರಿಯರು ಹಾಕಿಕೊಟ್ಟಿರುವ ಮೆಟ್ಟಿಲುಗಳು. ಇದನ್ನು ಬಹು ಎತ್ತರಕ್ಕೆ ಕೊಂಡೊಯ್ಯಬೇಕು. ಕರ್ನಾಟಕ ಇತಿಹಾಸ ಸಾರುವ ಪುಸ್ತಕಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು.ಎನ್ .ಹರೀಶ್ , ಮೈಸೂರು, ಸಂಶೋಧನಾ ವಿದ್ಯಾರ್ಥಿ.
-----------ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಕಡಿಮೆ ಇದ್ದಾರೆ ಎಂದು ಮುಚ್ಚಲು ಮುಂದಾಗಿದೆ. ಇಂದಿನ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪನವರು ತಮ್ಮ ಭಾಷಣದಲ್ಲಿ ಕನ್ನಡ ಶಾಲೆ ಉಳಿವಿನ ಬಗ್ಗೆ ಮಾತನಾಡಿದ್ದಾರೆ. ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಹಿರಿಯ ಸಾಹಿತಿ ಗೊ.ರು.ಚ ಹೇಳಿದಂತೆ ಶಾಲೆಯಲ್ಲಿ ಏಕ ವಿದ್ಯಾರ್ಥಿ ಇದ್ದರೆ ಆ ವಿದ್ಯಾರ್ಥಿಗೆ ಅದೇ ಶಾಲೆಯಲ್ಲಿ ಶಿಕ್ಷಣ ಕೊಡಿಸಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುವಂತೆ ಮಾಡಬೇಕು. ಯಾವುದೇ ಕಾರಣಕ್ಕೂ ಶಾಲೆಗಳನ್ನು ಮುಚ್ಚಬಾರದು. ಇದರಿಂದ ಭವಿಷ್ಯದಲ್ಲಿ ಅನೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ.
ನವೀನ್, ಶಿಕ್ಷಕರು, ಆದರ್ಶ ವಿದ್ಯಾಲಯ, ಚನ್ನಪಟ್ಟಣ ತಾಲೂಕು, ರಾಮನಗರ ಜಿಲ್ಲೆ.-------------
ಮಂಡ್ಯದಲ್ಲಿ 3ನೇ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ನನಗೆ ಹೊಸ ಅನುಭವ ನೀಡಿದೆ. ಈ ಹಿಂದೆ ನಾವು ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತಿದ್ದೇವು. ಆದರೆ, ಇಷ್ಟು ಸಂಭ್ರಮದಿಂದ ಆಚರಣೆ ಮಾಡುವುದನ್ನು ನೋಡಿರಲಿಲ್ಲ. ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಅನಾವರಣ ಮಾಡಲು, ಮುಂದಿನ ತಲೆಮಾರಿಗೆ ನಾಡಿನ ಮಹತ್ವ ತಿಳಿಸಲು ಆಯೋಜಿಸಿರುವ ಸಮ್ಮೇಳನವನ್ನು ಪ್ರತಿಯೊಬ್ಬರೂ ಸದುಪಯೋಗಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಸಮ್ಮೇಳನದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು. ಇದರಿಂದ ಅವರಲ್ಲಿ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಯಲು ಸಾಧ್ಯವಾಗುತ್ತದೆ.ಎನ್.ರಕ್ಷಿತಾ, ಬಿಎಡ್ ವಿದ್ಯಾರ್ಥಿನಿ , ಮಿಕ್ಕೆರೆ, ಮಳವಳ್ಳಿ ತಾಲೂಕು ಮಂಡ್ಯ ಜಿಲ್ಲೆ,
--------------ಬಹುತೇಕರಿಗೆ ಇಂದು ಇಂಗ್ಲೀಷ್ ಭಾಷಾ ವ್ಯಾಮೋಹ ಹೆಚ್ಚಾಗಿ ಮಾತೃಭಾಷೆ ಕನ್ನಡದ ಬಗ್ಗೆ ಕೀಳರಿಮೆ ಉಂಟಾಗಿದೆ. ಇದು ನಿಜಕ್ಕೂ ಆತಂಕ ತರುವ ವಿಚಾರ. ಬಹುತೇಕ ಕಡೆ ಕನ್ನಡ ಭಾಷೆ ಗೊತ್ತಿದ್ದರೂ ಮಾತನಾಡುತ್ತಿಲ್ಲ. ಇದು ತಾಯಿ ಭಾಷೆಗೆ ಮಾಡುತ್ತಿರುವ ಅವಮಾನ. ಕನ್ನಡ ಭಾಷೆ ಮೇಲಿನ ಅಭಿಮಾನದಿಂದ ದೂರದ ಊರಿನಿಂದ ನಾಡಿನ ಹಬ್ಬವನ್ನು ಆಚರಿಸಲು ಬಂದಿದ್ದೇನೆ. ಇದರಲ್ಲಿ ರಾಜ್ಯದ ಪ್ರತಿಯೊಬ್ಬ ಕನ್ನಡಿಗರು ಭಾಗವಹಿಸಬೇಕು.
ಪರಶುರಾಮ್ , ಬಿಎಡ್ ವಿದ್ಯಾರ್ಥಿ, ಕೊಪ್ಪಳ ಜಿಲ್ಲೆ.-------------
ತೊಗರಿಯ ನಾಡಿನಿಂದ ಸಕ್ಕರೆ ನಾಡಿಗೆ ಬಂದಿದ್ದೇವೆ. ಸಾಹಿತ್ಯ ಸಮ್ಮೇಳನದಲ್ಲಿ ಸಕ್ಕರೆಯಂತೆ ಸಾಹಿತ್ಯದ ಸಿಹಿಯನ್ನು ಸವಿದಿದ್ದೇನೆ. ಮಾತೃಭಾಷೆ ಕನ್ನಡಕ್ಕೆ ನಾವು ಏನಾದರೂ ಕೊಡುಗೆ ಕೊಡಬೇಕು. ಮಂಡ್ಯ ಹೆಚ್ಚು ಕನ್ನಡ ಮಾತನಾಡುವ ಜಿಲ್ಲೆ. ಇಲ್ಲಿಯ ಜನರ ಕನ್ನಡಾಭಿಮಾನ ನೋಡಿ ನನಗೆ ಖುಷಿಯಾಗಿದೆ. ನಾನು ಕೂಡ ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಬೇಕು. ಇದಕ್ಕಾಗಿ ಹಲವು ಸಾಹಿತಿಗಳು ಬರೆದಿರುವ ಪುಸ್ತಕಗಳನ್ನು ಕೊಂಡು ಹೋಗುತ್ತಿದ್ದೇನೆ.ಸೈಬಣ್ಣ ಬಿಎಡ್ ವಿದ್ಯಾರ್ಥಿ, ಬಂದರವಾಡ, ಗುಲ್ಬರ್ಗಾ ಜಿಲ್ಲೆ.
---------