ರಾಮನಗರ: ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಮನಸ್ಸುಳ್ಳ ಹಾಗೂ ಎಲ್ಲರ ವಿಶ್ವಾಸದೊಂದಿಗೆ ಪಕ್ಷ ಸಂಘಟನೆಗೆ ಸಮಯ ಮೀಸಲಿಡುವವರಿಗೆ ಅವಕಾಶ ಕಲ್ಪಿಸುವ ಹೊಸ ಪ್ರಕ್ರಿಯೆ ಪಕ್ಷದಲ್ಲಿ ನಡೆಯುತ್ತಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಮನಸ್ಸುಳ್ಳ ಹಾಗೂ ಎಲ್ಲರ ವಿಶ್ವಾಸದೊಂದಿಗೆ ಪಕ್ಷ ಸಂಘಟನೆಗೆ ಸಮಯ ಮೀಸಲಿಡುವವರಿಗೆ ಅವಕಾಶ ಕಲ್ಪಿಸುವ ಹೊಸ ಪ್ರಕ್ರಿಯೆ ಪಕ್ಷದಲ್ಲಿ ನಡೆಯುತ್ತಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ನಗರ ಮತ್ತು ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಮಿತಿ ಸಭೆಯಲ್ಲಿ ಆಕಾಂಕ್ಷಿತರು ಮತ್ತು ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಂಘಟನ್ ಸೃಜನ್-2 ಅಡಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹಾಗೂ ಅಭಿಪ್ರಾಯ ಸಂಗ್ರಹ ಸಭೆ ಆಯೋಜಿಸಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರ ಭಾವನೆ, ಅನಿಸಿಕೆಗಳಿಗೆ ಮನ್ನಣೆ ನೀಡಿ ಜವಾಬ್ದಾರಿ ಕೊಡಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ ಎಂದರು.

ಈ ಹಿಂದೆ ಪಕ್ಷದಲ್ಲಿ ಜವಾಬ್ದಾರಿ ನಿರ್ವಹಿಸಿರುವವರ ಮಾರ್ಗದರ್ಶನ ಪಡೆದು ಮುಂದಿನ ದಿನಗಳಲ್ಲಿ ನಾಯಕತ್ವ ಗುಣ, ವಿಶ್ವಾಸ, ಶಿಸ್ತಿನ ಸಿಪಾಯಿಯಾಗಿ ಹೋರಾಡುವ ಮನಸ್ಸು ಇರುವವರು ಪಕ್ಷದ ಸಭೆ, ಸಮಾರಂಭಗಳನ್ನು ಆಯೋಜನೆ ಮಾಡಿ ಪಕ್ಷ ನೀಡಿರುವ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಹೊಸ ಶಕ್ತಿ ಆರಂಭಿಸುವ ನಾಯಕರಿಗೆ ಜವಾಬ್ದಾರಿ ವಹಿಸಬೇಕಿದೆ ಎಂದು ಹೇಳಿದರು.

ಕೇವಲ ಬ್ಲಾಕ್ ಅಧ್ಯಕ್ಷ ಹುದ್ದೆಗಳು ಅಷ್ಟೆ ಅಲ್ಲ, ವಿವಿಧ ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಸಮಿತಿಗಳಲ್ಲಿ ಕೆಲಸ ನಿರ್ವಹಿಸಲು ಹಲವು ಹುದ್ದೆಗಳನ್ನು ಕಲ್ಪಿಸಬಹುದಾಗಿದೆ‌‌. ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸೇವೆ ಮಾಡುತ್ತಿರುವ ಕಾರ್ಯಕರ್ತರು, ಮುಖಂಡರಲ್ಲಿ ಸಹಜವಾಗಿ ಆಕಾಂಕ್ಷಿಗಳ‌ ಸಂಖ್ಯೆ ಹೆಚ್ಚಿದೆ. ಯಾರಿಗೂ ನಿರಾಸೆ ಬೇಡ, ಒಂದಲ್ಲ ಒಂದು ಸ್ಥಾನದಲ್ಲಿ ನಿಮ್ಮನ್ನು ಗುರುತಿಸಲಾಗುವುದು ಎಂದು ಕಿವಿಮಾತು ಹೇಳಿದರು.

ಗ್ರಾಮ, ತಾಲೂಕು, ಜಿಲ್ಲಾ, ನಗರಸಭೆ ಚುನಾವಣೆಗಳು ಎದುರಾಗಲಿವೆ. ಸಾಕಷ್ಟು ಜವಾಬ್ದಾರಿಯಿಂದ ಪಡೆದ ಸ್ಥಾನಗಳಿಗೆ ನ್ಯಾಯ ಒದಗಿಸಬೇಕಾಗಿದೆ‌. ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ‌ ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಹೇಳಿದರು.

ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ತಮ್ಮಗಳ ಅಭಿಪ್ರಾಯ ಪಡೆದು ವಿವಿಧ ಮಟ್ಟದಲ್ಲಿ ಜವಾಬ್ದಾರಿ ವಹಿಸಲಾಗುವುದು. ಎಲ್ಲರಿಗೂ ಕೇಳಿದ ಹುದ್ದೆ ಸಿಗದಿರಬಹುದು. ಅದರೆ ಪಕ್ಷ ಸಂಘಟಿಸುವವರಿಗೆ ಒಂದಲ್ಲ ಒಂದು ಸ್ಥಾನ ಸಿಗಲಿದೆ. ನಿಮ್ಮ‌ ಸಮಯ ವನ್ನು ಕಾಂಗ್ರೆಸ್ ಪಕ್ಷದ ಸಂಘಟನೆಗೆ ಮೀಸಲಿಡುವವರಿಗೆ ಆದ್ಯತೆ ಕೊಡಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು‌.

ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಸಮಿತಿ ಸೇರಿದಂತೆ ಜಿಲ್ಲಾ, ತಾಲೂಕು, ಹೋಬಳಿ ಸಮಿತಿಗಳ ಪದಾಧಿಕಾರಿಗಳ ಹುದ್ದೆ ಬಯಸಿ ವೀಕ್ಷಕರಲ್ಲಿ ಮನವಿ ಸಲ್ಲಿಸಿದರು.

ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಸಮಿತಿ ಸಭೆಯಲ್ಲಿ ವೀಕ್ಷಕರಾಗಿ ವಿಧಾನ ಪರಿಷತ್ತು ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎ.ಪಿ. ಬಸವರಾಜು, ಮತಿಲ್ಡಾ ಡಿಸೋಜಾ, ಸಂಯೋಜಕರಾದ ಷೋಯಿಬ್ ಅಹಮದ್ಜಿಲ್ಲಾ, ಕಾಂಗ್ರೆಸ್ ಅಧ್ಯಕ್ಷ ಸಿಎನ್ ವೆಂಕಟೇಶ್, ಮಾಜಿ ಶಾಸಕ ಕೆ.ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್.ರಾಜು, ಜಿಪಂ ಮಾಜಿ ಅಧ್ಯಕ್ಷ ರಾಜು, ತಾಪಂ ಮಾಜಿ ಅಧ್ಯಕ್ಷ ಪ್ರಾಣೇಶ್ ಮತ್ತಿತರರು ಇದ್ದರು.

ಕೋಟ್.................

ಸ್ಥಳೀಯ ಸಂಸ್ಥೆ ಚುನಾವಣೆಗಳು ಸಾಲು ಸಾಲಿನಲ್ಲಿ ಬರುತ್ತಿದ್ದು, ಅಂತಹ ಸಮಯದಲ್ಲಿ ಬ್ಲಾಕ್ ಅಧ್ಯಕ್ಷರು ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯುತ್ತಿದೆ. ಆಯ್ಕೆಯಾದವರ ಜವಬ್ದಾರಿ ಹೆಚ್ಚಿರುತ್ತದೆ.

- ಸಿಎನ್ ಆರ್ ವೆಂಕಟೇಶ್, ಜಿಲ್ಲಾಧ್ಯಕ್ಷರು

ಬಾಕ್ಸ್......

ನಗರ ಬ್ಲಾಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿತರು:

ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಪೈರೋಜ್ ಖಾನ್,ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಗುರುಪ್ರಸಾದ್, ಮಾಜಿ ಕಾರ್ಯಾಧ್ಯಕ್ಷ ಅನಿಲ್ ಜೋಗೆಂದರ್, ನಗರಸಭೆ ಮಾಜಿ ಅಧ್ಯಕ್ಷರಾದ ಎಚ್.ಎಸ್.ಲೋಹಿತ್ ಬಾಬು. ಪಿ.ರವಿಕುಮಾರ್,

ಬಾಕ್ಸ್......

ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು:

ಸುಗ್ಗನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಿಕ್ಕಸ್ವಾಮಿ, ಗ್ರಾಪಂ ಮಾಜಿ ಸದಸ್ಯ ರಘು, ಕೆಡಿಪಿ ಸದಸ್ಯ ಚಿಕ್ಕೇಗೌಡ, ಗ್ರಾಪಂ‌ ಮಾಜಿ ಸದಸ್ಯ ಉಮೇಶ್, ಸುಗ್ಗನಹಳ್ಳಿ ವಿಎಸ್ ಎಸ್ ಎಸ್ ಎನ್ ಮಾಜಿ ಅಧ್ಯಕ್ಷ ವೀರಭದ್ರಯ್ಯ (ಗುಂಡಪ್ಪ)