ಅನಧಿಕೃತ ಸಂಪರ್ಕ ಬಿಟ್ಟು ಹಣ ಪಾವತಿಸಿದರೆ ಹೊಸ ಟಿಸಿಗೆ ಅವಕಾಶ

| Published : Aug 01 2024, 12:16 AM IST

ಅನಧಿಕೃತ ಸಂಪರ್ಕ ಬಿಟ್ಟು ಹಣ ಪಾವತಿಸಿದರೆ ಹೊಸ ಟಿಸಿಗೆ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಕೊಳವೆ ಬಾವಿಗೆ ಅನಧಿಕೃತವಾಗಿ ಸಂಪರ್ಕ ಪಡೆದಿರುವವರು ಮೆಸ್ಕಾಂಗೆ ಹಣ ಪಾವತಿಸಿದರೆ ಹೊಸ ಟಿಸಿಯನ್ನೆ ಅಳವಡಿಸಬಹುದು ಎಂದು ಮೆಸ್ಕಾಂ ಎಇಇ ತಿರುಪತಿ ತಿಳಿಸಿದರು.

ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ಜನಸಂಪರ್ಕ ಸಭೆ

ಕನ್ನಡಪ್ರಭ ವಾರ್ತೆ, ಕಡೂರು

ಕೊಳವೆ ಬಾವಿಗೆ ಅನಧಿಕೃತವಾಗಿ ಸಂಪರ್ಕ ಪಡೆದಿರುವವರು ಮೆಸ್ಕಾಂಗೆ ಹಣ ಪಾವತಿಸಿದರೆ ಹೊಸ ಟಿಸಿಯನ್ನೆ ಅಳವಡಿಸಬಹುದು ಎಂದು ಮೆಸ್ಕಾಂ ಎಇಇ ತಿರುಪತಿ ತಿಳಿಸಿದರು.

ಸೋಮವಾರ ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ರೈತರು ಅಧಿಕಾರಿಗಳಿಗೆ ಕೃಷಿ ಪಂಪ್ ಸೆಟ್‌ಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ,ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾದರು. ತಿಮ್ಮಾಪುರ ರೈತ ಪಿ.ಸಿ.ಗಂಗಾಧರಪ್ಪ 2018-19ರಲ್ಲಿ ಅಕ್ರಮ ಸಕ್ರಮ ಯೋಜನೆ ಅಡಿ ಕೃಷಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿ ಹಣ ಪಾವತಿಸಿದ್ದರೂ ಮೆಸ್ಕಾಂ ಬಹಳ ದಿನಗಳ ವರೆಗೆ ಕಾಮಗಾರಿ ಕೈಗೆತ್ತಿಕೊಳ್ಳದ ಕಾರಣ ನಾನೇ ನನ್ನ ಸ್ವಂತ ಹಣದಲ್ಲಿ ಕಾಮಗಾರಿ ಮಾಡಿಕೊಂಡಿದ್ದೇನೆ. ಅಕ್ರಮ ಸಕ್ರಮದಡಿ ಪಾವತಿಸಿರುವ ಹಣ ಹಿಂದಿರುಗಿಸುವಂತೆ ಅಥವಾ ಅದೇ ಹಣದಲ್ಲಿ ಬೇರೆ ಕಾಮಗಾರಿ ಮಾಡಿಕೊಡುವಂತೆ ಒತ್ತಾಯಿಸಿದರು.

ಮತ್ತೊಂದು ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಆದರೆ ನನ್ನ ನಂತರ ಅರ್ಜಿ ಸಲ್ಲಿಸಿದವರಿಗೆ ಈಗಾಗಲೆ ಸಂಪರ್ಕ ನೀಡಲಾಗಿದೆ. ನನಗೆ ಈ ವರೆಗೆ ಸಂಪರ್ಕ ನೀಡಿಲ್ಲ. ಈ ತಾರತಮ್ಯಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಇದಕ್ಕೆ ಎಇಇ ಎಚ್. ತಿರುಪತಿ ನಾಯ್ಕ ಉತ್ತರಿಸಿ ಎಲ್ಲಿ ಜಿಪಿಎಸ್ ಮಾಡಲಾಗಿರುತ್ತದೋ ಆ ಜಾಗದಲ್ಲಿ ಕಾಮಗಾರಿ ನಡೆಸ ಬೇಕಿರುತ್ತದೆ. ಆದುದರಿಂದ ಹಣ ಹಿಂದಿರುಗಿಸಲು ಅಥವಾ ಅದೇ ದುಡ್ಡಿನಲ್ಲಿ ಬೇರೆ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹೊಸ ಕೊಳವೆ ಬಾವಿಗೆ ಸಂಪರ್ಕ ನೀಡುವಲ್ಲಿ ತಾರತಮ್ಯ ಆಗಿದ್ದರೆ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದರು.ಕಡೂರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆ ಆಡುತ್ತಿದ್ದು,ಇದರಿಂದ ನಿರಂತರ ಜ್ಯೋತಿ ಎನ್ನುವುದು ನೆಪಮಾತ್ರ ವಾಗಿದೆ. ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಮಾಡುವಾಗ ಬುಡಕ್ಕೆ ಸಿಮೆಂಟ್ ಹಾಕಿ ಕಂಬ ಭದ್ರಪಡಿಸಬೇಕು. ಆದರೆ ಗುತ್ತಿಗೆದಾರರು ನಿಯಮ ಪಾಲಿಸುತ್ತಿಲ್ಲ. ಇದರಿಂದ ಸ್ವಲ್ಪ ಗಾಳಿ ಬೀಸಿದರೂ ಕಂಬಗಳು ನೆಲಕ್ಕುರುಳುತ್ತಿವೆ. ಇದರಿಂದ ಪದೇಪದೇ ವಿದ್ಯುತ್ ಅಡಚಣೆ ಉಂಟಾಗುತ್ತಿದೆ ಎಂದು ದೂರಿದರು.

ಇದೇ ಗ್ರಾಮದ ಮಂಜಪ್ಪ, ತಮ್ಮ ಕೊಳವೆ ಬಾವಿಗೆ ಸಂಪರ್ಕ ಪಡೆದ ಟಿಸಿ 63 ಕೆವಿಯದಾಗಿದೆ. ಓವರ್‌ ಲೋಡ್‌ನಿಂದ ಪದೇಪದೇ ಸುಟ್ಟು ಹೋಗುತ್ತಿದೆ. ಆದುದರಿಂದ ಪ್ರತ್ಯೇಕ ಟಿಸಿ ನೀಡಬೇಕು ಅಥವಾ ೧೦೦ ಕೆವಿ ಟಿಸಿಯನ್ನು ಅಳವಡಿಸಬೇಕು ಎಂದರು. ಕವಳೀಪುರದ ಕೆ.ಎಸ್.ತಮ್ಮಯ್ಯ 2020-21 ರಲ್ಲಿ ಅಕ್ರಮ ಸಕ್ರಮ ಯೋಜನೆಯಲ್ಲಿ ಹಣ ಪಾವತಿಸಿದ್ದೇನೆ. ಆದರೆ ಇಲ್ಲಿವರೆಗೆ ಕಾಮಗಾರಿ ಆರಂಭಿಸಿಲ್ಲ. ವಿಳಂಭಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.ಒಂದೊಂದೇ ಪ್ರಶ್ನೆಗೆ ಉತ್ತರಿಸಿದ ಎಇಇ ಎಚ್.ತಿರುಪತಿ ನಾಯ್ಕ್ ಮಳೆ ಗಾಳಿಯಿದ್ದ ಕಾರಣ ಕಡೂರಳ್ಳಿ ಮಾತ್ರವಲ್ಲ ಎಲ್ಲೆಡೆ ವಿದ್ಯುತ್ ವ್ಯತ್ಯವಾಗಿದ್ದು ಶೀಘ್ರದಲ್ಲಿ ಸರಿ ಹೋಗಲಿದೆ. ಕಂಬಗಳ ಅಳವಡಿಕೆಯಲ್ಲಿ ದೋಷ ಕಂಡು ಬಂದರೆ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಟಿಸಿ ಪದೇಪದೇ ಸುಟ್ಟು ಹೋಗಲು ಓವರ್ ಲೋಡ್ ಕಾರಣ. ಆ ಟಿಸಿಯಿಂದ ಅನಧಿಕೃತ ಸಂಪರ್ಕ ಪಡೆದಿರುವವರು ಮೆಸ್ಕಾಂಗೆ ಹಣ ಪಾವತಿಸಿದರೆ ಹೊಸ ಟಿಸಿ ನೀಡಬಹುದು ಅಥವಾ 63 ಕೆವಿಗೆ ಬದಲಾಗಿ 100 ಕೆವಿ ಟಿಸಿ ಅಳವಡಿಸಬಹುದು.

2018-19 ರ ಮತ್ತು 2019-20ರ ಅಕ್ರಮ ಸಕ್ರಮ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಬಳಿಕ 2020-21ರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಸಹಾಯಕ ಲೆಕ್ಕಾಧಿಕಾರಿ ಡಿ.ಎಸ್.ಲೋಹಿತ್ ಕುಮಾರ್,ಎಇ ಸಿ.ಎಂ.ಪ್ರಸನ್ನ,ಜೆಇ ಆರ್.ಎಸ್.ಬಸವರಾಜಪ್ಪ ಮತ್ತು ಶಾಖಾಧಿಕಾರಿಗಳು, ಗ್ರಾಹಕರು ಭಾಗವಹಿಸಿದ್ದರು.29ಕೆಕೆಡಿಯು1.

ಕಡೂರು ಪಟ್ಟಣದ ಮೆಸ್ಕಾಂ ಕಚೇರಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ರೈತರು ನೀಡಿದ ಅರ್ಜಿಗಳನ್ನು ಮೆಸ್ಕಾಂ ಅಧಿಕಾರಿಗಳು ಪರಿಶೀಲಿಸಿದರು.