ಭಾರತೀಯ ಯುವ ಉದ್ಯಮಶೀಲರಿಗೆ ಅರಬ್ ದೇಶಗಳಲ್ಲಿ ಉದ್ಯಮಶೀಲತೆಗೆ ಪೂರಕ ವಾತಾವರಣವಿದೆ ಎಂದು ಕರ್ನಾಟಕ ವಿವಿ ಕೌಸಾಳಿ ಇನ್‌ಸ್ಟಿಟ್ಯೂಟ್‌ ಹಳೆಯ ವಿದ್ಯಾರ್ಥಿ, ದುಬೈನ ಸ್ಟೀಲ್ ಉದ್ಯಮಿ ಸುಜಾತ್‌ ಶೆಟ್ಟಿ ಹೇಳಿದರು.

ಧಾರವಾಡ: ಭಾರತದ ಯುವ ಉದ್ಯಮದಾರರಿಗೆ ವಿದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಹೆಚ್ಚು ಅವಕಾಶಗಳಿವೆ. ಅದರಲ್ಲೂ ಭಾರತೀಯ ಯುವ ಉದ್ಯಮಶೀಲರಿಗೆ ಅರಬ್ ದೇಶಗಳಲ್ಲಿ ಉದ್ಯಮಶೀಲತೆಗೆ ಪೂರಕ ವಾತಾವರಣವಿದೆ ಎಂದು ಕರ್ನಾಟಕ ವಿವಿ ಕೌಸಾಳಿ ಇನ್‌ಸ್ಟಿಟ್ಯೂಟ್‌ (ಕಿಮ್ಸ್) ಹಳೆಯ ವಿದ್ಯಾರ್ಥಿ, ದುಬೈನ ಸ್ಟೀಲ್ ಉದ್ಯಮಿ ಸುಜಾತ್‌ ಶೆಟ್ಟಿ ಹೇಳಿದರು.

ಕರ್ನಾಟಕ ವಿವಿ ಕೌಸಾಳಿ‌ ವಿಭಾಗದ ಸುವರ್ಣ ಮಹೋತ್ಸವ ಸಂಭ್ರಮಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ''''''''ವ್ಯಾಪಾರ ಮತ್ತು ವ್ಯವಹಾರ ಪರಿಸರ ವ್ಯವಸ್ಥೆಯಲ್ಲಿ ಉದಯೋನ್ಮುಖ ಮಾದರಿ‌'''''''' ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, ಚೀನಾ ದೇಶ ಕಟ್ಟಡ ವ್ಯವಹಾರದಲ್ಲಿ ಜಗತ್ತಿನಲ್ಲಿ ಮುಂಚೂಣಿಯಲ್ಲಿರುವ ದೇಶವಾಗಿದೆ. ನಾನು ದುಬೈನ ಉದ್ಯಮ ಜಗತ್ತು ಪ್ರವೇಶಿಸಿದಾಗ ಉದ್ಯಮಶೀಲತೆ ಪೂರಕವಾದ ವಾತಾವರಣ ಇರಲಿಲ್ಲ. ಆದ್ದರಿಂದ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಅರಬ್ ದೇಶಗಳಲ್ಲಿ ಈಗ ವಿವಿಧ ಉದ್ಯಮ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತಮ ಅವಕಾಶಗಳಿವೆ ಎಂದು ಯುವ ಉದ್ದಿಮೆಗಳಿಗೆ ಆಹ್ವಾನ ನೀಡಿದರು.

ಪ್ರಸ್ತುತ ಕೃತಕ ಬುದ್ಧಿಮತ್ತೆ ಮತ್ತು ಡೆಟಾ ಸೆಂಟರ್ ಸಂಬಂಧಿಸಿದ ಕ್ಷೇತ್ರದಲ್ಲಿ ಸಾಕಷ್ಟು ಹೂಡಿಕೆ ಅವಕಾಶಗಳಿವೆ. ಹೂಡಿಕೆದಾರರಿಗೆ ದುಬೈ ಸೇರಿದಂತೆ ಸಣ್ಣ ರಾಷ್ಟ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಇದಕ್ಕಾಗಿ ಭವಿಷ್ಯದಲ್ಲಿ ಭಾರತ ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಿಸಬೇಕಾದ ಅಗತ್ಯವಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಎಸ್. ಸುಭಾಷ‌ ಮಾತನಾಡಿ, ಯಾವುದೇ ಉದ್ಯಮ ಸ್ಥಿರವಾಗಿ ಬೆಳೆಯಲು ಗುಣಮಟ್ಟ ಮತ್ತು ಉತ್ಕೃಷ್ಟತೆ ಬಹಳ ಮುಖ್ಯ. ಉದ್ಯಮ ಬೆಳವಣಿಗೆಗೆ ತಂತ್ರಜ್ಞಾನ‌ ಪೂರಕವಾಗಿದ್ದು, ಪ್ರತಿಯೊಬ್ಬ ಉದ್ಯಮ ಪ್ರಾರಂಭಿಸಲು ಭೌಗೋಳಿಕ ಮಾಹಿತಿ, ಮಾರ್ಕೆಟಿಂಗ್ ಸಂಶೋಧನೆ ಅವಶ್ಯ. ವ್ಯವಹಾರ ಅಧ್ಯಯನ ವಿದ್ಯಾರ್ಥಿಗಳು ಕೌಶಲ್ಯಗಳ ಮುಖಾಂತರ ಜಗತ್ತಿಗೆ ತೆರೆದುಕೊಳ್ಳಬೇಕು ಎಂಬ ಸಲಹೆ ನೀಡಿದರು.

ಕಿಮ್ಸ್ ಹಳೆಯ ವಿದ್ಯಾರ್ಥಿ, ಅಮೆರಿಕದ ಸ್ಟೋನ್ ಹಿಲ್ ಕಾಲೇಜಿನ ಸ್ಟ್ಯಾಟಜಿಕ್‌ ಅಡ್ವೈಸರ್ ಡಾ. ಶ್ರೀರಾಮ ಬಲ್ಡೋನಾ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರದಿಂದ‌‌ ನಮ್ಮ ಜೀವನ ಬದಲಾಯಿಸಿಕೊಳ್ಳಬಹುದು. ಶಿಕ್ಷಣದಿಂದ ಹಿಡಿದು ವೃತ್ತಿ, ವಿವಿಧ ರೀತಿಯಲ್ಲಿ ಬದಲಾವಣೆ ಮತ್ತು ಮಜಲುಗಳನ್ನು ಕಂಡಿದ್ದೇನೆ ಎಂದರು.

ಚೇತನ ಬಿಸನೆಸ್ ಸ್ಕೂಲ್ ನಿರ್ದೇಶಕ ಡಾ. ವಿಶ್ವನಾಥ ಕೊರವಿ, ಕೌಸಾಳಿ ವ್ಯವಹಾರ ಅಧ್ಯಯನದ ಬೆಳವಣಿಗೆಯಲ್ಲಿ ಹಳೆಯ ವಿದ್ಯಾರ್ಥಿಗಳ‌ ಪಾತ್ರ ಶ್ಲಾಘಿಸಿದರು. ಪರಿವರ್ತನಾಶೀಲ ವ್ಯಕ್ತಿತ್ವ ಜತೆಗೆ ಎಂಬಿಎ ವಿದ್ಯಾರ್ಥಿಗಳು ಡಾಟಾ ವಿಶ್ಲೇಷಣೆ, ಮಷಿನ್ ಲರ್ನಿಂಗ್ ಸೇರಿದಂತೆ ಅನೇಕ ತಂತ್ರಜ್ಞಾನ ಅಧಾರಿತ ತಂತ್ರ ಕೌಶಲ್ಯ ಬೆಳೆಸಿಕೊಳ್ಳಲು ಸಲಹೆ ನೀಡಿದರು. ಕಿಮ್ಸ್ ನಿರ್ದೇಶಕ ಡಾ. ಉತ್ತಮ ಕಿನಂಗೆ ಅಧ್ಯಕ್ಷತೆ ವಹಿಸಿದರು. ವಿಭಾಗದ ಹಳೆಯ ವಿದ್ಯಾರ್ಥಿಗಳು, ಪ್ರಸ್ತುತ ಎಂಬಿಎ ವಿದ್ಯಾರ್ಥಿಗಳ ಮಧ್ಯೆ ಸಂವಾದ, ಚರ್ಚೆ ನಡೆಯಿತು.

ಕಿಮ್ಸ್ ಡೀನ್ ಪ್ರೊ. ಎನ್. ರಾಮಾನಂಜಲು, ಡಾ. ಎ.ಎಂ. ಕಡಕೋಳ, ಡಾ‌. ಶಿವಪ್ಪ, ಡಾ. ಆರ್.ಆರ್. ಕುಲಕರ್ಣಿ, ಡಾ. ಪುಷ್ಪಾ ಹೊಂಗಲ್ ಮತ್ತಿತರರು ಇದ್ದರು. ವಿವಿಧ ಕಾರ್ಯಕ್ರಮ

ಜ. 10ರಿಂದ 12ರ ವರೆಗೆ ಕಿಮ್ಸ್‌ನ ಹಲವು ಕಾರ್ಯಕ್ರಮಗಳು ಆಯೋಜನೆಯಾಗಿದ್ದು, ಜ. 10ರಂದು ಹಳೆಯ ವಿದ್ಯಾರ್ಥಿಗಳ ಸಮಾವೇಶ ‘ದರ್ಪಣ-2026’ ನಡೆಯಿತು. ಹಳೆಯ ವಿದ್ಯಾರ್ಥಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಒಂದೇ ವೇದಿಕೆಯಲ್ಲಿ ಸೇರಿ ವಿಭಾಗದ ವಿದ್ಯಾರ್ಥಿಗಳ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಆಶಯಗಳ ಕುರಿತು ಚರ್ಚೆ ನಡೆಸಿದರು. ಜ. 11, 12ರಂದು ಅಂತಾರಾಷ್ಟ್ರೀಯ ಕಾರ್ಯಾಗಾರ ಆಯೋಜಿಸಲಾಗಿತ್ತು.