ಸಾರಾಂಶ
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಕೊಡವ ಲ್ಯಾಂಡ್ ಹೋರಾಟವನ್ನು ವಿರೋಧಿಸುವ ಕುರಿತಾಗಿ ಶನಿವಾರಸಂತೆಯಲ್ಲಿ ಭಾನುವಾರ ವಿವಿಧ ಸಮುದಾಯದ ಮುಖಂಡರು ಪೂರ್ವಭಾವಿ ಸಭೆ ನಡೆಸಿದರು.ಸಭೆಯಲ್ಲಿ ಎಸ್.ಎಂ.ಚಂಗಪ್ಪ ಅಧ್ಯಕ್ಷತೆ ವಹಿಸಿ, ಕೊಡವ ಲ್ಯಾಂಡ್ ಪ್ರತೇಕ ರಾಜ್ಯವಾದಲ್ಲಿ ಕೊಡಗಿನಲ್ಲಿರುವ ಇತರೆ ಸಮುದಾಯದವರಿಗೆ ಮಾನ್ಯತೆ ಕೊಡುವುದಿಲ್ಲ. ಇತರೆ ಜನಾಂಗದವರು ಆಸ್ತಿಯನ್ನು ಮಾರಾಟ ಮಾಡಿದರೆ ಕೊಡವ ಜನಾಂಗದವರಿಗೆ ಮಾರಾಟ ಮಾಡಬೇಕಾಗುತ್ತದೆ. ಕೊಡಗು ರಾಜ್ಯವಾದಲ್ಲಿ ಕೊಡವ ಜನಾಂಗದವರೇ ಆಡಳಿತ ನಡೆಸುವ ಸಾಧ್ಯತೆ ಇರುತ್ತದೆ. ಉಳಿದ ಜನಾಂಗದವರು ಅವರ ಸೇವಕರಾಗುತ್ತಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿರುವ ಇತರೆ ಜನಾಂಗದವರು ಎಚ್ಚೆತ್ತುಕೊಂಡು ಕೊಡವ ಲ್ಯಾಡ್ ಹೋರಾಟವನ್ನು ವಿರೋಧಿಸಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನದಲ್ಲಿ ನಡೆಯುವ ನಮ್ಮ ಹೋರಾಟಕ್ಕೆ ಎಲ್ಲ ಸಮುದಾಯದವರು ಸಂಘಟನೆಯೊಂದಿಗೆ ಕೈಜೋಡಿಸುವಂತೆ ಅವರು ಮನವಿ ಮಾಡಿದರು.ಪೂರ್ವಸಭೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಜನಾಂಗದವರು ಒಟ್ಟಾಗಿ ಸೇರಿ ಕೊಡವ ಲ್ಯಾಂಡ್ ಹೋರಾಟ ವಿರೋಧಿಸಿ ಪ್ರತಿಭಟನೆ ಮಾಡುವುದು, ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಕೊಡುವುದು, ಆಯಾಯ ಸಮುದಾಯದವರ ನೇತೃತ್ವದಲ್ಲಿ ಕೇಸು ದಾಖಲಿಸುವುದು ಮುಂತಾದವುಗಳ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು.ಸಭೆಯಲ್ಲಿ ಶುಂಠಿ ಭರತ್‍ಕುಮಾರ್, ಡಿ.ಬಿ.ಧರ್ಮಪ್ಪ, ಎನ್.ಕೆ.ಅಪ್ಪಸ್ವಾಮಿ ಗೌಡ, ಎಸ್.ಎನ್.ರಘು, ಜಿ.ಎಂ.ಕಾಂತರಾಜ್, ಬಿ.ಕೆ.ಚಂದ್ರು, ಟಿ.ಆರ್.ಪುರುಷೋತ್ತಮ್, ರಂಗಸ್ವಾಮಿ, ಎನ್.ಬಿ.ನಾಗಪ್ಪ, ಸಿ.ಜೆ.ಗಿರೀಶ್, ಆನಂದ್, ಶಿವಾನಂದ್, ಬಿ.ಎಸ್.ಮಂಜುನಾಥ್ ವಿವಿಧ ಜನಾಂಗದ ಪ್ರಮುಖರು ಪಾಲ್ಗೊಂಡಿದ್ದರು.ಸಭೆಯಲ್ಲಿ ಹೋರಾಟ ಸಂಘಟನೆಯ ಸಂಚಾಲಕರಾಗಿ ಚಂದ್ರಕಾಂತ್ ಅವರನ್ನು ಆಯ್ಕೆ ಮಾಡಲಾಯಿತು. ಸಹ ಸಂಚಾಲಕರಾಗಿ ವಿವಿಧ ಜನಾಂಗದಿಂದ 20 ಮಂದಿಯನ್ನು ನೇಮಿಸಲಾಯಿತು.