ವಿಪಕ್ಷ ನಾಯಕ ಅಶೋಕ್‌ ದತ್ತಮಾಲಾ ಧಾರಣೆ

| Published : Dec 25 2023, 01:30 AM IST

ಸಾರಾಂಶ

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಭಾನುವಾರ ಚಿಕ್ಕಮಗಳೂರಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧಾರಣೆ ಮಾಡಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಅವರು ಭಾನುವಾರ ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಧರಿಸಿದರು.

ವಿಶ್ವಹಿಂದೂ ಪರಿಷತ್‌ ಹಾಗೂ ಭಜರಂಗದಳ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ದತ್ತ ಜಯಂತಿ ಮೊದಲ ದಿನವಾದ ಭಾನುವಾರದಂದು ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಾಲಯದಲ್ಲಿ ಸಂಜೆ ಆರ್‌. ಅಶೋಕ್‌ ದತ್ತಮಾಲೆಯನ್ನು ಧರಿಸಿದರು.

ದತ್ತಮಾಲೆ ಧರಿಸಿದ ಭಕ್ತರು ಸೋಮವಾರ ಚಿಕ್ಕಮಗಳೂರು ನಗರದಲ್ಲಿ ನಡೆಯಲಿರುವ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು, ಮಂಗಳವಾರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆಗಳ ದರ್ಶನ ಪಡೆದ ಬಳಿಕ ದತ್ತಮಾಲೆ ವಿಸರ್ಜಿಸುವುದು ಪ್ರತೀತಿ. ಹಾಗಾಗಿ ಎರಡು ದಿನಗಳ ಈ ಕಾರ್ಯಕ್ರಮಗಳಲ್ಲಿ ಆರ್‌. ಆಶೋಕ್‌ ಭಾಗವಹಿಸುವ ಸಾಧ್ಯತೆ ಇದೆ.

ದತ್ತಮಾಲೆ ಧರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌. ಅಶೋಕ್‌, ದತ್ತಪೀಠ ಎನ್ನುವ ಕುರುಹುಗಳು ಅಲ್ಲಿವೆ. ಆದರೆ, ದತ್ತಪೀಠ ಸೇರಿದಂತೆ ಶ್ರೀರಂಗಪಟ್ಟಣ, ಅಯೋಧ್ಯ, ಮಥುರಾ, ಕಾಶಿ ಹೀಗೆ ಹಲವೆಡೆ ಅಕ್ರಮಣ ಆಗಿದೆ. ಇದೊಂದು ಶ್ರದ್ಧಾ ಕೇಂದ್ರ, ನಮ್ಮ ಸರ್ಕಾರ ಇದ್ದಾಗ ದತ್ತಪೀಠಕ್ಕೆ ಅರ್ಚಕರ ನೇಮಕ ಮಾಡಿತ್ತು. ಇದು, ಧಾರ್ಮಿಕ ಸ್ಥಳ ಆಗಬೇಕು. ಆದರೆ, ಆ ಭಾವನೆಯನ್ನು ಮಟ್ಟ ಹಾಕುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದರು.

ನ್ಯಾಯಾಲಯ ದಾಖಲೆಗಳು ದತ್ತಪೀಠ ಬೇರೆ, ದರ್ಗಾ ಬೇರೆ ಎಂದು ಹೇಳುತ್ತಿವೆ. ನ್ಯಾಯಾಧೀಶರನ್ನು ನೇಮಕ ಮಾಡಿ ಇಲ್ಲಿನ ಸಮಸ್ಯೆ ಬಗೆಹರಿಸಬೇಕು. ಹಿಂದೂಗಳ ಭಾವನೆ ಕೆರಳಿಸುವ ಕೆಲಸ ಆಗಬಾರದು. ಇದು ಹಿಂದೂಸ್ಥಾನ, ದತ್ತಪೀಠ ಆಗಿಯೇ ಉಳಿಯಬೇಕು. ದತ್ತಪೀಠದ ಘನತೆಯನ್ನು ಎತ್ತಿ ಹಿಡಿಯುವ ಕೆಲಸ ಆಗಬೇಕು ಎಂದು ಹೇಳಿದರು. 24 ಕೆಸಿಕೆಎಂ 5

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಭಾನುವಾರ ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಧಾರಣೆ ಮಾಡಿದರು.