ಸಾರಾಂಶ
ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಿತಿ ರಚಿಸುವ ಬಗ್ಗೆ ಪ್ರಕಟಿಸಿದ್ದರು. ಅಂದಿನಿಂದ ಕಂಡು ಕಾಣದಂತಿದ್ದ ವಿಪಕ್ಷಗಳ ನಾಯಕರು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಜ್ಞಾನೋದಯಗೊಂಡು ಪ್ರತಿಭಟನೆಗಿಳಿದಿದ್ದಾರೆ.
ಕನ್ನಡಪ್ರಭ ವಾರ್ತೆ ಮದ್ದೂರು
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ನೇಮಕ ಮತ್ತು ಗೌರವಧನ ನೀಡುತ್ತಿರುವ ಬಗ್ಗೆ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಕೇವಲ ತೆವಲಿಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಶಾಸಕ ಕೆ.ಎಂ.ಉದಯ್ ಬುಧವಾರ ವ್ಯಂಗ್ಯವಾಡಿದರು.ತಾಲೂಕಿನ ತೈಲೂರು ಗ್ರಾಮದಲ್ಲಿ 10 ಲಕ್ಷದ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿ, ಸುಮಾರು ಒಂದೂವರೆ ವರ್ಷಗಳ ಹಿಂದೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗ್ಯಾರೆಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ, ಜಿಲ್ಲೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಮಿತಿ ರಚಿಸುವ ಬಗ್ಗೆ ಪ್ರಕಟಿಸಿದ್ದರು. ಅಂದಿನಿಂದ ಕಂಡು ಕಾಣದಂತಿದ್ದ ವಿಪಕ್ಷಗಳ ನಾಯಕರು ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದಾಗ ಜ್ಞಾನೋದಯಗೊಂಡು ಪ್ರತಿಭಟನೆಗಿಳಿದಿದ್ದಾರೆ ಎಂದು ಟೀಕಿಸಿದರು.
ಬಡವರಿಗಾಗಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಗಳನ್ನು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮರ್ಪಕವಾಗಿ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅವರಿಗೆ ಗೌರವಧನ ನೀಡುವುದರಿಂದ ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದು ಸಮರ್ಥಿಸಿಕೊಂಡರು.ಕಾಂಗ್ರೆಸ್ ಕಾರ್ಯಕರ್ತರಿಗೆ ಜನರ ತೆರಿಗೆ ಹಣವನ್ನು ಸರ್ಕಾರದ ಖಜಾನೆಯಿಂದ ನೀಡುತ್ತಿರುವುದು ಕಾನೂನು ಬಾಹಿರ ಎಂಬ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಆರೋಪಕ್ಕೆ ತಿರುಗೇಟು ನೀಡಿದ ಶಾಸಕ ಉದಯ್, ಜನರ ತೆರಿಗೆ ಹಣವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ ಎಂದರು.
ಶಾಸಕರನ್ನು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ವಿಪಕ್ಷ ಶಾಸಕರ ಒತ್ತಾಯವನ್ನು ಸರಾಸಗಟ್ಟಾಗಿ ತಿರಸ್ಕರಿಸಿದ ಉದಯ್ ಶಾಸಕರಿಗೆ ಕ್ಷೇತ್ರದಲ್ಲಿ ಹತ್ತಾರು ಕೆಲಸಗಳು ಇರುತ್ತವೆ. ಇವುಗಳನ್ನು ಗಮನಿಸಲು ಸಮಯವೇ ಸಾಕಾಗುವುದಿಲ್ಲ ಹೀಗಾಗಿ ಸಮಿತಿ ಸದಸ್ಯರುಗಳನ್ನು ನೇಮಕ ಮಾಡಲಾಗಿದೆ. ಇದನ್ನೇ ದೊಡ್ಡದು ಮಾಡಿಕೊಂಡು ವಿರೋಧಪಕ್ಷಗಳು ಕೇವಲ ತೆವಲಿಗಾಗಿ ನಡೆಸುತ್ತಿರುವ ಪ್ರತಿಭಟನೆ ಅರ್ಥಹೀನ ಎಂದು ಆರೋಪಿಸಿದರು. ಮದ್ದೂರು ಬ್ಲಾಕ್ ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಸಿ.ಚೆಲುವರಾಜು, ಮನ್ಮುಲ್ ನಿರ್ದೇಶಕ ಹರೀಶ್ ಬಾಬು. ಗ್ರಾಪಂ ಸದಸ್ಯರಾದ ಕುಮಾರ್, ನಂದೀಶ. ವೆಂಕಟೇಶ ಹಾಗೂ ಕದಲೂರು ಗ್ರಾಪಂ ಅಧ್ಯಕ್ಷ ತಿಮ್ಮೇಗೌಡ ಇದ್ದರು.