ಕೊಪ್ಪಳ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆಯ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ವಿಬಿ ಜಿ ರಾಮ್‌ ಜಿ ಯೋಜನೆ ಜಾರಿ ಮಾಡಲು ಮುಂದಾಗಿದೆ. ವಿಬಿ ಜಿ ರಾಮ್‌ ಜಿ ಯೋಜನೆಯನ್ನು ಹಿಂಪಡೆಯುವಂತೆ ಮೊದಲಿನಂತೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸುವಂತೆ ಆಗ್ರಹಿಸಿ ಕರ್ನಾಟಕ ಕೃಷಿ ಕೂಲಿಕಾರರ ಹಾಗೂ ಗ್ರಾಮೀಣ ಕಾರ್ಮಿಕರ ಸಂಘದ ಕಾರ್ಯಕರ್ತರು ತಾಲೂಕಿನ ಕಾತರಕಿ, ಗುಡ್ಲಾನೂರು ಹಾಗೂ ಕೋಳೂರು ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿದರು.

ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಭಾಗದ ಕೃಷಿ ಕೂಲಿಕಾರರು ಬಡ ರೈತರು ಹಾಗೂ ಇನ್ನಿತರ ಗ್ರಾಮೀಣ ಕೂಲಿಕಾರರಿಗೆ ಅನುಕೂಲವಾಗಿತ್ತು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತೆಯ ಯೋಜನೆಯಾಗಿ ಹೊಸದಾಗಿ ವಿಕಸಿತ ಭಾರತ ರೋಜ್ಗಾರ್ ಮತ್ತು ಗ್ರಾಮೀಣ ಖಾತರಿ ವಿಬಿ ರಾಮ್ ಜಿ ಖಾತರಿಯನ್ನು ಜಾರಿಗೊಳಿಸಿದೆ. ಈ ಹೊಸ ಕಾಯ್ದೆಯಿಂದ ಕೂಲಿಕಾರರ ಮೇಲೆ ಹಲವು ದುಷ್ಪರಿಣಾಮಗಳು ಬೀರುತ್ತವೆ. ಕೇಂದ್ರ ಸರ್ಕಾರ ಶೇ. 60ರಷ್ಟು, ರಾಜ್ಯ ಸರ್ಕಾರ ಶೇ. 40ರಷ್ಟು ಖರ್ಚು ಮಾಡಬೇಕಿದೆ. ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಹಣ ನೀಡಿಲ್ಲವೆಂದು, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲವೆಂದು ಹೇಳಬಹುದು. ಅದು ಕೂಲಿ ಕಾರ್ಮಿಕರನ್ನು ಕೂಲಿಯಿಂದ ವಂಚಿತರನ್ನಾಗಿ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಬಿ ಜಿ ರಾಮ್‌ ಜಿ ಯೋಜನೆ ರದ್ದುಪಡಿಸಿ, ಮೊದಲಿನ ಉದ್ಯೋಗ ಖಾತ್ರಿ ಯೋಜನೆ ಮುಂದುವರಿಸಬೇಕು. ತಕ್ಷಣ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡಬೇಕು. ಬೇಸಿಗೆ ಇರುವುದರಿಂದ ಬೆಳಗ್ಗೆ 7 ಗಂಟೆಯಿಂದ 11 ಗಂಟೆಯೊಳಗೆ ಕೆಲಸ ಮುಗಿಸಬೇಕು. ಕಾಯಕ ಬಂಧುಗಳಿಗೆ ಪ್ರೋತ್ಸಾಹಧನ ನೀಡಬೇಕು. ಉದ್ಯೋಗ ಖಾತ್ರಿ ಅಡಿಯಲ್ಲಿ 200 ದಿನಗಳ ಕೆಲಸ ಮತ್ತು ₹700 ಕೂಲಿ ನೀಡಬೇಕು. ಉದ್ಯೋಗ ಖಾತ್ರಿ ಅಡಿಯಲ್ಲಿ ಕೆರೆ ಹೂಳು ತೆಗೆಯುವ ಕೆಲಸಕ್ಕೆ ರೈತರ ಟ್ರ್ಯಾಕ್ಟರ್ ಬಳಸಿದ್ದು, ಅವರಿಗೆ ಬಾಡಿಗೆ ಹಣ ಪಾವತಿ ಮಾಡಬೇಕು. ಮನೆ-ನಿವೇಶನ ರಹಿತರ ಅರ್ಜಿಯನ್ನು ಪಡೆದು ನಿವೇಶನದಾರರ ಪಟ್ಟಿ ಮಾಡಬೇಕು. ಎಲ್ಲ ಗ್ರಾಮಗಳಿಗೆ ಸಾರ್ವಜನಿಕ ಮಹಿಳಾ ಶೌಚಾಲಯ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಗಳ ಮನವಿಯಲ್ಲಿ ಪಿಡಿಒಗಳ ಮೂಲಕ ರಾಷ್ಟ್ರಪತಿಗೆ ಸಲ್ಲಿಸಿ ಆಗ್ರಹಿಸಿದರು. ಸಂಘಟನೆಯ ಮುಖಂಡರಾದ ಸುಂಕಪ್ಪ ಗದಗ, ಜರೀನಾ ಬೇಗಂ, ಕಾಲೇಸಾಬ ಕರಡಿ, ಮಮತಾಜ ಬೇಗಂ, ಯಲ್ಲಪ್ಪ ಸಂಗಟಿ, ಫಕೀರಮ್ಮ ಮಿರಗನತಂಡಿ, ರೇಣುಕಮ್ಮ ಇಡಿಗಲ್‌, ಬಂದಮ್ಮ ಹಕಾರಿ, ರೇಖಮ್ಮ ಹಕಾರಿ, ನಿಂಗಪ್ಪ ಮೊದಲಾದವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.