ಅರಣ್ಯ ಒತ್ತುವರಿ ತೆರವಿಗೆ ವಿರೋಧ : ಶೃಂಗೇರಿ ಕ್ಷೇತ್ರ ಬಂದ್‌ ಯಶಸ್ವಿ

| Published : Aug 18 2024, 01:53 AM IST

ಅರಣ್ಯ ಒತ್ತುವರಿ ತೆರವಿಗೆ ವಿರೋಧ : ಶೃಂಗೇರಿ ಕ್ಷೇತ್ರ ಬಂದ್‌ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಅರಣ್ಯ ಒತ್ತುವರಿ ತೆರವು ಹಾಗೂ ರೈತ ವಿರೋಧಿ ನೀತಿಯನ್ನು ಖಂಡಿಸಿ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.ಶೃಂಗೇರಿ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎನ್‌.ಆರ್‌.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

ಸರ್ಕಾರದ ವಿರುದ್ಧ ಮಲೆನಾಡಿಗರ ಆಕ್ರೋಶ । ಪಕ್ಷಾತೀತ ಹೋರಾಟಕ್ಕೆ ಬೆಂಬಲ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅರಣ್ಯ ಒತ್ತುವರಿ ತೆರವು ಹಾಗೂ ರೈತ ವಿರೋಧಿ ನೀತಿಯನ್ನು ಖಂಡಿಸಿ ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಶನಿವಾರ ಕರೆ ನೀಡಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಶೃಂಗೇರಿ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಎನ್‌.ಆರ್‌.ಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕು ಕೇಂದ್ರಗಳು ಹಾಗೂ ಹೋಬಳಿ ಕೇಂದ್ರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಬಂದ್‌ನಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು.

ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್‌ ಮಾಡಿದ್ದರು. ಹೋಟೆಲ್‌ ಮಾಲೀಕರು ಸಹ ಬೆಂಬಲ ನೀಡಿದ್ದರು. ಆಟೋ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಾಂತರ ಪ್ರದೇಶಕ್ಕೆ ಸಂಚರಿಸುವ ಖಾಸಗಿ ಬಸ್‌ ಸಂಚಾರ ಕೂಡ ಬಂದ್‌ ಆಗಿತ್ತು. ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಬೆಳಿಗ್ಗೆ ಶಾಲೆ ಕಾಲೇಜುಗಳು ಎಂದಿನಂತೆ ತೆರೆದಿದ್ದವು. ಆದರೆ, ವಿದ್ಯಾರ್ಥಿಗಳ ಕೊರತೆಯಿಂದಾಗಿ ಮಧ್ಯಾಹ್ನದ ವೇಳೆಗೆ ಶಾಲೆಗಳು ಬಂದ್‌ ಆಗಿದ್ದವು.

ಶೃಂಗೇರಿ, ಕೊಪ್ಪ ಹಾಗೂ ಎನ್‌.ಆರ್‌.ಪುರ ತಾಲೂಕು ಕೇಂದ್ರಗಳಲ್ಲಿ ಬ್ಯಾಂಕ್‌ಗಳ ವಹಿವಾಟು ಸ್ಥಗಿತಗೊಂಡಿತ್ತು. ಆದರೆ, ಸರ್ಕಾರಿ ಕಚೇರಿಗಳು, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ತಾಲೂಕು ಕೇಂದ್ರಗಳಿಂದ ನೆರೆಯ ಶಿವಮೊಗ್ಗ, ಉಡುಪಿ ಜಿಲ್ಲೆಗಳಿಗೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ ಇತ್ತಾದರೂ ಪ್ರಯಾಣಿಕರ ಕೊರತೆಯಿಂದ ಬೆರಳೆಣಿಕೆಯಷ್ಟು ಮಾತ್ರ ಬಸ್‌ಗಳು ಸಂಚರಿಸಿದವು.

ಕೋಲ್ಕತ್ತಾದ ಸರ್ಕಾರಿ ಮೆಡಿಕಲ್‌ ಕಾಲೇಜಿನಲ್ಲಿ ವೈದ್ಯೆಯ ಮೇಲೆ ರೇಪ್‌ ನಡೆದಿರುವುದನ್ನು ಖಂಡಿಸಿ ವೈದ್ಯರು ಶನಿವಾರ ಪ್ರತಿಭಟನೆ ನಡೆಸಿದ್ದರಿಂದ ಕೆಲವು ಮೆಡಿಕಲ್‌ ಶಾಪ್‌ಗಳು ಬಂದ್‌ ಆಗಿದ್ದವು. ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು.

ಅರಣ್ಯ ಒತ್ತುವರಿ ತೆರವಿಗೆ ರಾಜ್ಯದ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ನೀಡಿದ್ದ ಹೇಳಿಕೆ ಮಲೆನಾಡಿನಲ್ಲಿ ಪ್ರತಿಭಟನೆ ಸ್ವರೂಪ ಪಡೆದುಕೊಂಡಿತು. ಅರಣ್ಯಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಯತ್ನ ನಡೆದಿಲ್ಲ. ಒತ್ತುವರಿ ಸಮಸ್ಯೆ, ಸೆಕ್ಷನ್ 4, ಡೀಮ್ಡ್ ಫಾರೆಸ್ಟ್ ಮತ್ತು ಸೊಪ್ಪಿನಬೆಟ್ಟ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮವಲಯ ಸೇರಿದಂತೆ ಹಲವು ಸಮಸ್ಯೆಗಳಿದ್ದು ಈ ವಿಷಯ ಮುಂದಿಟ್ಟು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಪಕ್ಷಾತೀತವಾಗಿ ಶೃಂಗೇರಿ ಕ್ಷೇತ್ರ ಬಂದ್‌ಗೆ ಕರೆ ನೀಡಿದ್ದವು.--ಬಾಕ್ಸ್ಸ್--ಪ್ರವಾಸಿಗರಿಗೂ ತೊಂದರೆ:

ವಾರದ ಕೊನೆಯಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಪ್ರವಾಸಿ ತಾಣಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಕಳೆದ 15 ದಿನಗಳ ಕಾಲ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಕೆಲವು ದಿನಗಳಿಂದ ಮಳೆಯ ಆರ್ಭಟ ಕಡಿಮೆಯಾಗಿದೆ. ಹಾಗಾಗಿ ಶನಿವಾರದಂದು ಶೃಂಗೇರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ನಿರೀಕ್ಷಿಸಲಾಗಿತ್ತು. ಆದರೆ, ಬಂದ್ ಹಿನ್ನಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಮುಖವಾಗಿತ್ತು. ಶೃಂಗೇರಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳು, ಹೋಟೆಲ್‌ಗಳು ಮುಚ್ಚಿದ್ದರಿಂದ ಮಧ್ಯಾಹ್ನದ ವೇಳೆಗೆ ಬಿಕೋ ವಾತಾವರಣ ಕಂಡು ಬಂದಿತು. ಸ್ವಂತ ವಾಹನಗಳಲ್ಲಿ ಬಂದಿದ್ದ ಪ್ರವಾಸಿಗರಿಗೆ ಉಪಹಾರ ಹಾಗೂ ಮಧ್ಯಾಹ್ನದ ಊಟಕ್ಕೆ ತ್ರಾಸಾಗಿತ್ತು.ಪ್ರತಿಭಟನಾ ಮೆರವಣಿಗೆ: ಬಂದ್ ಹಿನ್ನಲೆಯಲ್ಲಿ ಕೊಪ್ಪದ ಪುರಭವನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆ ಸಾರ್ವಜನಿಕರು, ರೈತರು, ವಿವಿಧ ಸಂಘಟನೆಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ಪಾಲ್ಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳು ಕೇಳಿ ಬರುತ್ತಿದ್ದವು. ಬಸ್‌ ನಿಲ್ದಾಣಕ್ಕೆ ಮೆರವಣಿಗೆ ತಲುಪಿದ ಬಳಿಕ ಪ್ರತಿಭಟನಾ ಸಭೆ ನಡೆಯಿತು. ಸಮಾವೇಶದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಮಾಜಿ ಶಾಸಕ ಡಿ.ಎನ್. ಜೀವರಾಜ್, ಜೆಡಿಎಸ್ ಮುಖಂಡ ಸುಧಾಕರ್ ಶೆಟ್ಟಿ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಎಲ್ಲರೂ ಒಂದಾಗಿ ಸೇರಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಪ್ರಾಮಾಣಿಕ ಹೋರಾಟದಲ್ಲಿ ಭಾಗವಹಿಸುವ ಪ್ರತಿಜ್ಞಾವಿಧಿ ಬೋಧಿಸಲಾಯಿತು.