ಆವರಗೆರೆ ವಾರ್ಡ್‌ನಲ್ಲಿ ಪಾರ್ಕ್‌ಗೆ ಮೀಸಲಿಟ್ಟ ಜಾಗವನ್ನು ನಿಯಮ ಬಾಹಿರವಾಗಿ ಒತ್ತುವರಿ ಮಾಡುತ್ತಿದ್ದು, ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಕೀಲ ಎಸ್.ಪರಮೇಶ ಆವರಗೆರೆ ಆರೋಪಿಸಿದ್ದಾರೆ.
- ರಾತ್ರೋರಾತ್ರಿ ನಡೆಯುವ ಕಾಮಗಾರಿ ತಡೆಯಲು ಅಧಿಕಾರಿಗಳಿಗೆ ವಕೀಲ ಎಸ್.ಪರಮೇಶ ತಾಕೀತು - - -
ಕನ್ನಡಪ್ರಭ ವಾರ್ತೆ ದಾವಣಗೆರೆಆವರಗೆರೆ ವಾರ್ಡ್‌ನಲ್ಲಿ ಪಾರ್ಕ್‌ಗೆ ಮೀಸಲಿಟ್ಟ ಜಾಗವನ್ನು ನಿಯಮ ಬಾಹಿರವಾಗಿ ಒತ್ತುವರಿ ಮಾಡುತ್ತಿದ್ದು, ನ್ಯಾಯಾಲಯದ ತಡೆಯಾಜ್ಞೆ ಇದ್ದರೂ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ವಕೀಲ ಎಸ್.ಪರಮೇಶ ಆವರಗೆರೆ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆವರಗೆರೆ ಗ್ರಾಮದ ಡೋರ್ ನಂ.292-321ರ ಒಟ್ಟು 47151 ಚದರ ಅಡಿ ವಿಸ್ತೀರ್ಣದ ಜಾಗವು ಮಹಾನಗರ ಪಾಲಿಕೆ ಸ್ವತ್ತು ಆಗಿದೆ. ಅದು ಪಾರ್ಕ್ ಜಾಗವಾಗಿದ್ದರೂ ಕಾನೂನು ಬಾಹಿರವಾಗಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ ಎಂದರು.ಪಾರ್ಕ್ ಜಾಗದ ಸುತ್ತಲೂ 2008-09ರಲ್ಲಿ ಅಂಜಿನ ಜಿಲ್ಲಾಧಿಕಾರಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ₹20.75 ಲಕ್ಷ ವೆಚ್ಚದಲ್ಲಿ ಕಾಂಪೌಂಡ್ ನಿರ್ಮಿಸಿದ್ದರು. ಪಾರ್ಕ್ ಜಾಗದ ಆಸ್ತಿಯು ಪಾಲಿಕೆ ಹೆಸರಿನಲ್ಲಿ ಇ-ಸ್ವತ್ತು ಖಾತಾ ದಾಖಲಾತಿಗಳನ್ನು ಹೊಂದಿದೆ ಎಂದು ತಿಳಿಸಿದರು.
ಅದೇ ಜಾಗದಲ್ಲಿದ್ದ ಕಾಂಪೌಂಡನ್ನು ಆವರಗೆರೆ ಕೃಷಿ ಪತ್ತಿನ ಸಹಕಾರ ಸಂಘವು ಕಾನೂನುಬಾಹಿರವಾಗಿ ಧ್ವಂಸಗೊಳಿಸಿ, ಸುಮಾರು ₹25 ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಆಸ್ತಿ ನಷ್ಟಕ್ಕೀಡುಮಾಡಿದೆ. ಆ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುತ್ತಿದೆ. ಈ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಕರಣ ದಾಖಲಾಗಿದೆ. ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆ ನೀಡಿತ್ತು ಎಂದು ಹೇಳಿದರು.ನ್ಯಾಯಾಲಯದ ಸ್ಪಷ್ಟ ನಿರ್ದೇಶನವಿದ್ದರೂ ಅಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಕೆಲಸ ನಿಲ್ಲಿಸಿಲ್ಲ. ರಾತ್ರೋರಾತ್ರಿ ಕಟ್ಟಡ ನಿರ್ಮಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿ ಅಥವಾ ಪಾಲಿಕೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ, ಅಕ್ರಮವನ್ನು ತಡೆಯುವ ಕೆಲಸ ಮಾಡುತ್ತಿಲ್ಲ. ಪಾಲಿಕೆ ಆಸ್ತಿಯನ್ನು ಉಳಿಸುವ ಕೆಲಸವನ್ನು ಇನ್ನಾದರೂ ಅಧಿಕಾರಿಗಳು ಮಾಡಬೇಕು. ಸ್ಥಳಕ್ಕೆ ಭೇಟಿ ನೀಡಿ, ಅಕ್ರಮ ಕಾಮಗಾರಿ ತಡೆಹಿಡಿಯಬೇಕು ಎಂದು ಅವರು ಒತ್ತಾಯಿಸಿದರು.
ಒಂದು ವೇಳೆ ಪಾಲಿಕೆ ಅಧಿಕಾರಿಗಳು ಪಾರ್ಕ್ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುವ ಕಾಮಗಾರಿ ತಡೆಯದಿದ್ದರೆ ಕಾನೂನು ಉಲ್ಲಂಘನೆ, ನ್ಯಾಯಾಲಯ ಆದೇಶ ಉಲ್ಲಂಘನೆ ಪ್ರಕರಣವನ್ನೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ದಾಖಲಿಸಲಾಗುವುದು. ಪಾರ್ಕ್ ಜಾಗ ಕಬಳಿಸುತ್ತಿರುವುದರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ. ಯಾವುದೇ ಕಾರಣಕ್ಕೂ ಆವರಗೆರೆ ಗ್ರಾಮದ ಪಾರ್ಕ್ ಜಾಗ ಕಬಳಿಸಲು ತಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಆವರಗೆರೆ ಗ್ರಾಮದ ಪಾರ್ಕ್ ಜಾಗವು ಕಂದಾಯ ಭೂಮಿ ಅಲ್ಲ ಎಂಬುದಾಗಿ ಕಂದಾಯ ಇಲಾಖೆ ಅಧಿಕಾರಿಗಳೇ ವರದಿ ನೀಡಿದ್ದಾರೆ. ಇದು ಮಹಾನಗರ ಪಾಲಿಕೆ ಸ್ವತ್ತಾಗಿದ್ದು, ಪಾಲಿಕೆ ಹೆಸರಿನಲ್ಲೇ ಇ-ಸ್ವತ್ತು ಸಹ ಇದೆ. ಈ ಹಿನ್ನೆಲೆ ಜಿಲ್ಲಾಧಿಕಾರಿಗಳು, ದಾವಣಗೆರೆ ತಹಸೀಲ್ದಾರರು ಆವರಗೆರೆ ಗ್ರಾಮದ ಪಾರ್ಕ್ ಜಾಗ ಉಳಿಸಿ, ಅಭಿವೃದ್ಧಿಪಡಿಸುವ ಕೆಲಸ ಮಾಡಬೇಕು ಎಂದು ವಕೀಲ ಎಸ್.ಪರಮೇಶ ಆವರಗೆರೆ ಆಗ್ರಹಿಸಿದರು.
ಗ್ರಾಮದ ಮುಖಂಡರಾದ ಗೌಡ್ರು ಶಿವಶರಣಪ್ಪ, ಡಿಎಸ್‌ಎಸ್ ಮುಖಂಡ ಎಸ್.ಚಂದ್ರಪ್ಪ, ನಿಟುವಳ್ಳಿ ಬಸವರಾಜ, ಕಾರ್ಮಿಕ ಮುಖಂಡ ಆವರಗೆರೆ ವಾಸು, ಟಿ.ಎಸ್.ನಾಗರಾಜ, ಕೆ.ಜಿ.ವೆಂಕಟೇಶ, ಶಿವಾನಂದಪ್ಪ, ಮಂಜು, ಚಿಂತು, ಶಿವು ಇತರರು ಇದ್ದರು.- - -
-10ಕೆಡಿವಿಜಿ1:ದಾವಣಗೆರೆಯಲ್ಲಿ ಭಾನುವಾರ ಹಿರಿಯ ವಕೀಲ ಎಸ್.ಪರಮೇಶ ಆವರಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.