ಕೇಂದ್ರ ಸರ್ಕಾರದಿಂದ ಮಂಡನೆಯಾಗುತ್ತಿರುವ ಕ್ಷೇತ್ರ ಮರುವಿಂಗಡಣೆ ಬಿಲ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ಧ ಯಾದಗಿರಿಯಲ್ಲಿ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತೀವ್ರ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಕೇಂದ್ರ ಸರ್ಕಾರದಿಂದ ಮಂಡನೆಯಾಗುತ್ತಿರುವ ಕ್ಷೇತ್ರ ಮರುವಿಂಗಡಣೆ ಬಿಲ್ಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವುದರ ವಿರುದ್ಧ ಯಾದಗಿರಿಯಲ್ಲಿ ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ತೀವ್ರ ವಾಗ್ದಾಳಿ ನಡೆಸಿದರು.ಯಾದಗಿರಿಯಲ್ಲಿ ಮಾತನಾಡಿದ ಅವರು, ಕ್ಷೇತ್ರ ಮರುವಿಂಗಡಣೆಯಿಂದ ಯಾವುದೇ ರಾಜ್ಯಕ್ಕೆ ಅನ್ಯಾಯವಾಗುವುದಿಲ್ಲ. ಯಾವುದೇ ರಾಜ್ಯಕ್ಕೆ ತನ್ನ ಪಾಲಿನಲ್ಲಿ ನಷ್ಟವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸದಾ ಸುಳ್ಳು ಹೇಳುವುದರಲ್ಲಿ ಹೆಮ್ಮೆ ಪಡುತ್ತದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸುಳ್ಳಿನಲ್ಲಿ ಅತಿ ಮೇಧಾವಿಯಾಗಿದ್ದಾರೆ ಎಂದು ಖೂಬಾ ಟೀಕಿಸಿದರು. ಯಾವುದೇ ರಾಜ್ಯಕ್ಕೆ ಅನ್ಯಾಯವಾಗದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದಿಸಿ ಬಿಲ್ನಲ್ಲಿ ಪ್ರಸ್ತಾವನೆ ಇದೆ ಎಂದು ಅವರು ತಿಳಿಸಿದರು.ಮೋದಿ ಅವರ ಸರ್ಕಾರ ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಐತಿಹಾಸಿಕ ಬಿಲ್ ಮಂಡಿಸುತ್ತಿದೆ. ಅನೇಕ ಪಕ್ಷಗಳು ಬಿಲ್ಗೆ ಸಹಮತ ವ್ಯಕ್ತಪಡಿಸಿದ್ದಾರೆ. ಬಿಲ್ ಸಲೀಸಾಗಿ ಪಾಸ್ ಆಗಲಿದೆ ಎಂದು ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ವಿರೋಧಿ, ಜನವಿರೋಧಿ ಕಾಂಗ್ರೆಸ್ ಬಿಲ್ಗೆ ವಿರೋಧಿಸುತ್ತಿದೆ. ಬಿಲ್ಗೆ ವಿರೋಧಿಸಿ ಎಂ.ಕೆ. ಸ್ಟಾಲಿನ್ ಮನೆಗೆ ಹೋಗಿದ್ದಾರೆ. ಆದರೆ ಸ್ಟಾಲಿನ್ ಅವರು ಬಿಲ್ ಪರವಾಗಿ ಬೆಂಬಲಿಸಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.