ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿದ್ಯುತ್ ಸರಬರಾಜು ಕಂಪನಿಗಳು ಏಕಾಏಕಿ ಮೀಟರ್, ವಿದ್ಯುತ್ ಕಂಬಗಳ ದರ ಏರಿಕೆ ಮಾಡಿ, ವಿದ್ಯುತ್ ಗುತ್ತಿಗೆದಾರರು ಮತ್ತು ಗ್ರಾಹಕರರಿಗೆ ಆರ್ಥಿಕವಾಗಿ ಹೊರೆ ಹೆಚ್ಚಿಸಿರುವುದನ್ನು ಖಂಡಿಸಿ ಸೋಮವಾರ ವಿದ್ಯುತ್ ಗುತ್ತಿಗೆದಾರರ ಸಂಘ ಮತ್ತು ರೈತ ಸಂಘಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಜಿಲ್ಲಾಧ್ಯಕ್ಷ ಟಿ.ಎಸ್.ಬಾಬು ಮಾತನಾಡಿ, ವಿದ್ಯುತ್ ಪರಿವೀಕ್ಷಣಾಲಯದಿಂದ ಗುತ್ತಿಗೆದಾರರ ಪರವಾನಗಿ ಪಡೆಯಲು ಈ ಹಿಂದೆ ಪ್ರಥಮದರ್ಜೆ ಪರವಾನಗಿ ಶುಲ್ಕ ರೂ. 3000 ಗಳಿದ್ದು, ಈಗ ರೂ. 10,000 ಕ್ಕೆ ಹಾಗೂ ಸೂಪರ್ ಗ್ರೇಡ್ ಪರವಾನಗಿಗೆ ರೂ.5000 ದಿಂದ ರೂ 50,000 ಹೆಚ್ಚುವರಿ ಮಾಡಿದ್ದು, ಇದನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಶುಲ್ಕ ನಿಗದಿಗೆ ಸಮಿತಿ ರಚಿಸಲಿರೈತರ ಕೃಷಿ ಪಂಪುಸೆಟ್‌ಗೆ ಸ್ವಯಂ ಕಾಮಗಾರಿಯಲ್ಲಿ ಅಳವಡಿಸಿರುವ 25 ಕೆವಿಎ ಪರಿವರ್ತಕ ಚಾಲ್ತಿ ಮಾಡಲು ಈ ಹಿಂದೆ ಸರ್ಕಾರ ರೂ. 3400 ರು.ಗಳ ಶುಲ್ಕ ನಿಗದಿ ಮಾಡಿದ್ದು, ಈಗ ಏಕಾಏಕಿ ರೂ. 9500ಗಳಿಗೆ ಹೆಚ್ಚಿಸಿದೆ. ಈ ಬಗ್ಗೆ ಪುನರ್ ಪರಿಶೀಲಿಸುವುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕು. ಶುಲ್ಕ ಏರಿಕೆ ಕುರಿತು ತನಿಖೆ ನಡೆಸಿ ಮೊದಲಿನಂತೆ ರೈತರು ಗುತ್ತಿಗೆದಾರರಿಗೆ ನ್ಯಾಯಯುತ ಶುಲ್ಕ ವಿಧಿಸಲು ನಿವತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರ ನೇತೃತ್ವದಲ್ಲಿ ಸಮಿತಿ ನೇಮಕ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ ಮಾತನಾಡಿ, ವಿದ್ಯುತ್ ಸರಬರಾಜು ಕಂಪನಿಗಳು ಹೆಚ್ಚಿಸಿರುವ ವಿವಿಧ ಮೀಟರ್ ಶುಲ್ಕವನ್ನು ಹಿಂಪಡೆಯಬೇಕು. ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಹಣ ಒದಗಿಸಲು ರೈತರು ಮತ್ತು ವಿದ್ಯುತ್ ಗುತ್ತಿಗೆದಾರರ ಮೇಲೆ ಶುಲ್ಕ ಭಾರ ಹೇರಿದೆ ಎಂದರು.
ಹಳೆ ಶುಲ್ಕ ಮುಂದುವರಿಸಿಪ್ರೊ.ಎಂ.ನಂಜುಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಜಿ.ಜಿ.ಹಳ್ಳಿ ನಾರಾಯಣಸ್ವಾಮಿ ಮಾತನಾಡಿ, ರೈತರ ನೀರಾವರಿ ಪಂಪುಸೆಟ್‌ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಹಿಂದೆ ಅಕ್ರಮಸಕ್ರಮ ಯೋಜನೆಯಡಿಯಲ್ಲಿ ರೂ. 30,000 ಗಳನ್ನು ನಿಗಧಿ ಮಾಡಿದ್ದು ಅದೇ ಶುಲ್ಕವನ್ನು ಮರುಜಾರಿಗೆ ತರುಬೇಕು ಎಂದರು.
ಬಳಿಕ ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪ್ರೋ.ಎಂ.ನಂಜುಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿ.ವಿ.ಶ್ರೀನಿವಾಸ್,ಮುನಿವೆಂಕಟಪ್ಪ,ಮುನಿರಾಜು,ಶ್ರೀನಿವಾಸ್,ರಮೇಶ್,ನಾರಾಯಣಸ್ವಾಮಿ, ವಿದ್ಯುತ್ ಗುತ್ತಿಗೆದಾರರ ಸಂಘದ ಜಿ.ಆಂಜಿನಪ್ಪ,ಬೈರೆಡ್ಡಿ, ಎ.ಆರ್.ಮಂಜುನಾಥ್, ಎನ್.ಪ್ರಸಾದ್, ನವೀನ್, ರೈತ ಸಂಘ ಹಾಗೂ ಹಸಿರು ಸೇನೆಯ ರಾಮನಾಥ ರೆಡ್ಡಿ, ವೇಣುಗೋಪಾಲ್ ಮತ್ತಿತರರು ಇದ್ದರು.