ಕೇಂದ್ರಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿದ್ಯುತ್ ಖಾಸಗೀಕರಣ ಪ್ರಕ್ರಿಯೆ ವಿರೋದಿಸಿ ಬೆಸ್ಕಾಂ ನೌಕರರು ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿದ್ಯುತ್ ಇಲಾಖೆಗಳ ಖಾಸಗಿಕರಣಗೊಳಿಸುವ ಕೇಂದ್ರ ಸರ್ಕಾರದ ಹೊಸ ಕಾಯ್ದೆ ವಿರೋಧಿಸಿ ಬೆಸ್ಕಾಂ ಅಧಿಕಾರಿ ಮತ್ತು ನೌಕರರು ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಮುಖ್ಯ ಇಂಜಿನಿಯರ್ ಕಚೇರಿ ಮುಂಭಾಗ ಜಮಾಯಿಸಿದ ನೌಕರರು ಕೇಂದ್ರದ ನಡೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ವಿದ್ಯುತ್ ಸುಧಾರಣಾ ಕಾಯ್ದೆ 2026 ಮೂಲಕ ವಿದ್ಯುತ್ ಇಲಾಖೆಗಳ ಖಾಸಗೀಕರಣಗೊಳಿಸಲು ಮುಂದಾಗಿರುವುದು ಜನವಿರೋಧಿ ನಿಲುವಾಗಿದೆ. ಉದ್ಯೋಗಿಗಳ ಬೀದಿಗೆ ತಳ್ಳುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಹೊಸ ವಿದ್ಯುತ್ ನೀತಿ ಜಾರಿಯಾಗದಲ್ಲಿ ಬಿಎಸ್ಎನ್‌ಎಲ್ ಇಲಾಖೆಯಂತೆ ನೌಕರರು ಹಾಗು ಗ್ರಾಹಕರು ಅಸ್ತಿತ್ವವನ್ನು ಕಳೆದುಕೊಳ್ಳುವಂತಾಗುತ್ತದೆ. ಅಖಿಲ ಭಾರತ ಎಂಜಿನಿಯರ್ ಮತ್ತು ನೌಕರರ ಒಕ್ಕೂಟ ಹಾಗೂ ಇತರೆ ಕೈಗಾರಿಕೆ ಒಕ್ಕೂಟಗಳು ರಾಜ್ಯಾದ್ಯಂತ ಒಂದು ದಿನದ ಸಾಂಕೇತಿಕ ಮುಷ್ಕರ ಹಮ್ಮಿಕೊಂಡು ವಿರೋಧಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದರು.ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಚ್.ಲಿಂಗರಾಜ್, ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಬಸವರಾಜ್, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಲ್.ರವಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳಾದ ತಿಮ್ಮಣ್ಣ, ನಾಗರಜ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.