ರಾಜ್ಯಾದ್ಯಂತ 5900 ಗ್ರಾಮ ಪಂಚಾಯ್ತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ.
ಸಂಡೂರು: ತಾಲೂಕಿನ ಹಳೆ ಮಾದಾಪುರ ಗ್ರಾಮದಲ್ಲಿ ಗುರುವಾರ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಪಾಲಕರು ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಎಐಡಿಎಸ್‌ಒ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಕಂಬಳಿ ಮಂಜುನಾಥ ಮಾತನಾಡಿ, ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಆದೇಶಗಳ ಪ್ರಕಾರ, ರಾಜ್ಯಾದ್ಯಂತ 5900 ಗ್ರಾಮ ಪಂಚಾಯ್ತಿಗಳ ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು ಸರ್ಕಾರ ನಿರ್ಧರಿಸಿದೆ. ಈ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳ ಐದು ಕಿಮೀ ವ್ಯಾಪ್ತಿಯಲ್ಲಿನ ಉಳಿದ ಸರ್ಕಾರಿ ಶಾಲೆಗಳನ್ನು ಕೊಲ್ಲುವ ಹುನ್ನಾರ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೆ ಕಳೆದ 15 ವರ್ಷಗಳಲ್ಲಿ ರಾಜ್ಯ ಸರ್ಕಾರದ ಪ್ರಕಾರ, 17 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಯೋಜನೆಯ ಪ್ರಕಾರ, ರಾಜ್ಯದ ಲಕ್ಷಾಂತರ ರೈತ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗಲಿದ್ದಾರೆ. ರಾಜ್ಯಾದ್ಯಂತ ಈ ಯೋಜನೆ ವಿರುದ್ಧ ಜನಾಕ್ರೋಶವಿದ್ದರೂ, ಇದಕ್ಕೆ ಕಿಂಚಿತ್ತೂ ಬೆಲೆ ಕೊಡದೆ ಈ ಭಾಗದ ಜನಗಳ ಅನುಕೂಲಕ್ಕೆ ಇರುವಂತ ಕೆಎಂಇಆರ್‌ಸಿ ನಿಧಿಯನ್ನು ಶಾಲೆಗಳನ್ನು ಮುಚ್ಚಲು ಬಳಸಿಕೊಳ್ಳುತ್ತಿರುವುದು ಜನವಿರೋಧಿ ನೀತಿಯಾಗಿದೆ ಎಂದು ಟೀಕಿಸಿದರಲ್ಲದೆ, ಕೂಡಲೆ ಸರ್ಕಾರ ಎಚ್ಚೆತ್ತುಕೊಂಡು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಜಿಲ್ಲಾಧ್ಯಕ್ಷ ಕೆ. ಈರಣ್ಣ, ಉಪಾಧ್ಯಕ್ಷ ಶಾಂತಿ, ಗ್ರಾಮಸ್ಥರಾದ ಕೆ.ಎಸ್. ವೆಂಕಟೇಶ್, ಸುನಿಲ್, ವೆಂಕಟೇಶ್, ಶೆಕ್ಷಾವಲಿ, ವೀರೇಶ್ ಮುಂತಾದವರು ಭಾಗವಹಿಸಿದ್ದರು.
ಸಂಡೂರು ತಾಲೂಕಿನ ಹಳೆ ಮಾದಾಪುರ ಗ್ರಾಮದಲ್ಲಿ ಗುರುವಾರ ಎಐಡಿಎಸ್‌ಒ ಸಂಘಟನೆಯ ನೇತೃತ್ವದಲ್ಲಿ ಗ್ರಾಮಸ್ಥರು ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು.